ಕರಾವಳಿ

ಬಿಜೈ- ಕಾವೂರು ರಸ್ತೆ : 4.75 ಕೋಟಿ ರೂ. ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಿಲಾನ್ಯಾಸ

Pinterest LinkedIn Tumblr

ಮಂಗಳೂರು, ಫೆಬ್ರವರಿ.14 : ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಬಿಜೈ ಕೆ‌ಎಸ್‍‌ಆರ್‌ಟಿಸಿ ಜಂಕ್ಷನ್ ನಿಂದ ಕಾವೂರು ಜಂಕ್ಷನ್ ವರೆಗಿನ ರಸ್ತೆ ಅಗಲೀಕರಣ ಮತ್ತು ಚರಂಡಿ, ಫುಟ್‌ಪಾತ್ ಅಭಿವೃದ್ಧಿ ಕಾಮಗಾರಿಯ ಶಿಲಾನ್ಯಾಸ ಸಮಾರಂಭವು ಬುಧವಾರ ಬೆಳಿಗ್ಗೆ ಬಿಜೈ ಕಾಪಿಕಾಡ್‌ನ ಶ್ರೀ ಬಬ್ಬುಸ್ವಾಮಿ ದೈವಸ್ಥಾನದ ಆವರಣದಲ್ಲಿ ಜರಗಿತು.

ಮಂಗಳೂರು ಮಹಾನಗರ ಪಾಲಿಕೆಯ ಪ್ರೀಮಿಯರ್ ಎಫ್‌ಎಆರ್ ನಿಧಿಯಿಂದ ಸುಮಾರು 4.75 ಕೋಟಿ ರೂ. ವೆಚ್ಚದಲ್ಲಿ ಬಿಜೈ ಕೆಎಸ್ಸಾರ್ಟಿಸಿಯಿಂದ ಕಾವೂರು ಜಂಕ್ಷನ್ ವರೆಗಿನ ರಸ್ತೆ ಅಭಿವೃದ್ಧಿಗೆ ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕ ಜೆ.ಆರ್.ಲೋಬೊ ಅವರು ಗಣ್ಯರ ಉಪಸ್ಥಿತಿಯಲ್ಲಿ ಶಿಲಾನ್ಯಾಸ ನೆರವೇರಿಸಿದರು.

ಈ ವೇಳೆ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಬಿಜೈ- ಕೆಸ್ಸಾರ್ಟಿಸಿಯಿಂದ ಕುಂಟಿಕಾನ ಕಾವೂರು ಆಗಿ ಸಂಚರಿಸುವ ರಸ್ತೆ ಅತ್ಯಂತ ಪ್ರಮುಖವಾಗಿದ್ದು, ಇದರ ಅಭಿವೃದ್ಧಿ ಆಗಬೇಕಾಗಿದೆ. ಈ ನಿಟ್ಟಿನಲ್ಲಿ ದೊಡ್ಡ ಮೊತ್ತದ ಅನುದಾನ ಮೀಸಲಿಟ್ಟು ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಲಾಗಿದೆ. ಶೀಘ್ರದಲ್ಲಿ ಕಾಮಗಾರಿ ಪೂರ್ಣಗೊಳ್ಳಲಿ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿದ ಮಂಗಳೂರು ಉತ್ತರ (ಸುರತ್ಕಲ್) ಕ್ಷೇತ್ರದ ಶಾಸಕ ಮೊಯ್ದೀನ್ ಬಾವ ಅವರು ಮಾತನಾಡಿ, ಏರ್‌ಪೋರ್ಟ್‌ಗೆ ತೆರಳಲು ನಗರದಿಂದ ಇರುವ ಸಮೀಪದ ರಸ್ತೆ ಬಿಜೈ- ಕಾವೂರು ರಸ್ತೆಯಾಗಿದ್ದು, ಇದು ಅಭಿವೃದ್ಧಿಗೊಂಡರೆ ವಿಮಾನ ನಿಲ್ದಾಣ ರಸ್ತೆಯನ್ನು ಬಳಸುವ ಸಾವಿರಾರು ಮಂದಿಗೆ ಪರ್ಯಾಯವಾಗಿ ಮತ್ತೊಂದು ರಸ್ತೆ ವ್ಯವಸ್ಥೆ ಸಿಕ್ಕಂತಾಗುತ್ತದೆ ಎಂದು ತಿಳಿಸಿದರು.

ಮಂಗಳೂರು ಮೇಯರ್ ಕವಿತಾ ಸನಿಲ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಪಾಲಿಕೆ ಸಚೇತಕ ಶಶಿಧರ್ ಹೆಗ್ಡೆ, ಪಾಲಿಕೆಯ ವಿವಿಧ ಸ್ಥಾಯಿ ಸಮಿತಿಗಳ ಅಧ್ಯಕ್ಷರುಗಳಾದ ಸಬಿತಾ ಮಿಸ್ಕಿತ್, ನಾಗವೇಣಿ, ಮನಪಾ ಸದಸ್ಯರಾದ ಲ್ಯಾನ್ಸಿಲಾಟ್ ಪಿಂಟೋ, ದೀಪಕ್ ಪೂಜಾರಿ, ರಾಜೇಶ್, ಪ್ರಮುಖರಾದ ವಿಶ್ವಾಸ್ ಕುಮಾರ್ ದಾಸ್, ರಾಜೇಂದ್ರ, ರಾಜೇಂದ್ರ ಕಿರೋಡಿಯನ್, ಮನಪಾ ಇಂಜಿನೀಯರ್ ಲಿಂಗೇಗೌಡ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದ ರೂವಾರಿ ಉಪ ಮೇಯರ್ ರಜನೀಶ್ ಕಾಪಿಕಾಡ್ ಪ್ರಾಸ್ತಾವಿಕವಾಗಿ ಮಾತನಾಡಿ ಕಾಮಗಾರಿಗಳ ಬಗ್ಗೆ ಸಮಗ್ರ ಮಾಹಿತಿ ನೀಡಿದರು. ರತನ್ ಬಾಬುಗುಡ್ಡೆ ನಿರೂಪಿಸಿದರು.

ವರದಿ ಹಾಗೂ ಚಿತ್ರ : ಸತೀಶ್ ಕಾಪಿಕಾಡ್ – Mob :9035089084

Comments are closed.