ಸಾಂದರ್ಭಿಕ ಚಿತ್ರ
ಮಂಗಳೂರು, ಫೆಬ್ರವರಿ.6: ಮಂಗಳೂರಿನಿಂದ ಲಕ್ಷದ್ವೀಪಕ್ಕೆ ಹೊರಟಿದ್ದ ಬೋಟೊಂದು ಲಕ್ಷದ್ವೀಪದ ಸಮೀಪ ಮುಳುಗಡೆಯಾಗಿದ್ದು, ಬೋಟ್ ನಲ್ಲಿದ್ದ ಆರು ಮಂದಿ ಮೀನುಗಾರರನ್ನು ರಕ್ಷಿಸಲಾಗಿದೆ.
ನಗರದ ಹಳೆ ಬಂದರು ಧಕ್ಕೆಯಿಂದ ಸರಕುಗಳನ್ನು ಹೇರಿಕೊಂಡು ಲಕ್ಷದ್ವೀಪಕ್ಕೆ ತೆರಳುತ್ತಿದ್ದ ಈ ಬೋಟ್ ರವಿವಾರ ಲಕ್ಷದ್ವೀಪಕ್ಕೆ ಹತ್ತಿರವಾಗುತ್ತಿದ್ದಂತೆ ಮುಳುಗಡೆಯಾಗಿದ್ದು, ಈ ವೇಳೆ ಬೋಟ್ ನಲ್ಲಿದ್ದ ಮಂಗಳೂರಿನ ಬಶೀರ್ ಮತ್ತು ಮುಹಮ್ಮದ್ ಬಶೀರ್, ತಮಿಳುನಾಡಿನ ಹಂಝ ಮತು ಡಿಕಾರ್, ಕೇರಳದ ಕೃಷ್ಣ ಮತ್ತು ಬೀರನ್ ಎಂಬವರನ್ನು ರಕ್ಷಿಸಲಾಗಿದೆ.ಅವಘಡದಿಂದ ಸುಮಾರು 10 ಲಕ್ಷ ಮೌಲ್ಯದ ಸರಕು ಸೇರಿದಂತೆ ಸುಮಾರು 40 ಲಕ್ಷ ನಷ್ಟ ಸಂಭವಿಸಿದೆ ಎಂದು ತಿಳಿದು ಬಂದಿದೆ.
ಬೆಂಗ್ರೆ ನಿವಾಸಿ ಮುಸ್ತಾ ಎಂಬವರ ಮಾಲಕತ್ವದ ವಶೀಲಾ ಹೆಸರಿನ ಬೋಟ್ ಜ.29ರಂದು ಕಬ್ಬಿಣ, ಸಿಮೆಂಟ್, ಜಲ್ಲಿ, ಮರಳು ಮತ್ತು ದಿನಬಳಕೆ ವಸ್ತುಗಳನ್ನು ಹೇರಿಕೊಂಡು ಹಳೆ ಬಂದರು ಧಕ್ಕೆಯಿಂದ ಹೊರಟಿತ್ತು. ಸಮುದ್ರ ಮಧ್ಯದ ಕಿಲ್ಟನ್ ಎಂಬ ಪ್ರದೇಶದಲ್ಲಿ ವಶೀಲಾ ಬೋಟ್ನ ತಳಭಾಗ ಬಂಡೆಕಲ್ಲಿಗೆ ಢಿಕ್ಕಿ ಹೊಡೆದ ಪರಿಣಾಮ ಬೋಟ್ ಹಾನಿಗೊಂಡು, ನೀರು ಬೋಟ್ನೊಳಗೆ ನುಗ್ಗಿ ಮುಳುಗಡೆಯಾಗಿದೆ ಎಂದು ಹೇಳಲಾಗಿದೆ.
ಬೋಟ್ ಅಪಾಯಕ್ಕೆ ಸಿಲುಕುತ್ತಿದ್ದಂತೆ ಅದರಲಿದ್ದ ಸಿಬ್ಬಂದಿ ತಕ್ಷಣ ಮೀನುಗಾರಿಕೆ ನಡೆಸುತ್ತಿದ್ದ ದೋಣಿಯವರಿಗೆ ಮಾಹಿತಿ ನೀಡಿದ್ದಾರೆ. ಅವರು ತಕ್ಷಣ ಸ್ಥಳಕ್ಕೆ ಧಾವಿಸಿ ವಶೀಲಾ ಬೋಟ್ನಲ್ಲಿದ್ದವರನ್ನು ರಕ್ಷಿಸಿದ್ದಾರೆ. ಆದರೆ ಬೋಟ್ನಲ್ಲಿದ್ದ ಸೊತ್ತುಗಳು ನೀರುಪಾಲಾಗಿವೆ.