ಕರಾವಳಿ

ಸಮುದ್ರಕ್ಕಿಳಿದ 25 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಇಂಟರ್ಸೆಪ್ಟರ್ (ಗಸ್ತು) ನೌಕೆ : ಕರಾವಳಿ ತಟ ರಕ್ಷಣಾ ಪಡೆ ನೌಕೆ ವಿ- 410

Pinterest LinkedIn Tumblr

ಮಂಗಳೂರು, ಫೆಬ್ರವರಿ.01: ಪಣಂಬೂರು ತಣ್ಣೀರುಬಾವಿ ಬಳಿ ಇರುವ ಭಾರತಿ ಡಿಫೆನ್ಸ್ ಮತ್ತು ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ (ಬಿಡಿಐಎಲ್)ನಡಿ ನಿರ್ಮಾಣಗೊಂಡ ಕರಾವಳಿ ತಟ ರಕ್ಷಣಾ ಪಡೆ ನೌಕೆ ವಿ- 410ನ್ನು ಸಮುದ್ರದ ನೀರಿಗಿಳಿಸುವ ಕಾರ್ಯಕ್ರಮ ಬುಧವಾರ ನಡೆಯಿತು.

ಕರಾವಳಿ ತಟ ರಕ್ಷಣಾ ಪಡೆಯ ಅಧಿಕಾರಿ ಪವನ್ ಕೋಯರ್ ಅವರ ಪತ್ನಿ ಶಿಲ್ಪಾ ಕೋಯರ್ ನೂತನ ಗಸ್ತು ನೌಕೆಗೆ ತೆಂಗಿನ ಕಾಯಿ ಒಡೆಯುವ ಮೂಲಕ ಉದ್ಘಾಟನೆ ನೆರವೇರಿಸಿದರು. ಬಳಿಕ ಬೃಹತ್ತಾದ ಕ್ರೇನ್ ಸಹಾಯದಿಂದ ನೌಕೆ ವಿ- 410ನ್ನು ನೀರಿಗಿಳಿಸಲಾಯಿತು.

ಇದು 25 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಇಂಟರ್ಸೆಪ್ಟರ್ ( ಗಸ್ತು ) ನೌಕೆಯಾಗಿದ್ದು, ಇದರ ವೇಗ 35 ನಾಟಿಕಲ್ ಮೈಲ್ ಆಗಿರುತ್ತದೆ. ಇದು ಸಮುದ್ರದಲ್ಲಿ ಕಳ್ಳ ಸಾಗಾಟ, ಕಡಲ್ಗಳ್ಳತನ ಕಾರ್ಯಾಚರಣೆ ಮತ್ತು ಮೀನುಗಾರರ ರಕ್ಷಣೆ ಮತ್ತು ಮೇಲ್ವಿಚಾರಣೆಯ ಕಾರ್ಯವನ್ನು ನಡೆಸಲಿದೆ. ಎರಡು ಪ್ರಬಲ ಇಂಜಿನ್ಗಳನ್ನು ಈ ನೌಕೆ ಹೊದಿದ್ದು, ಅಲ್ಯುಮಿನಿಯಂ ಹಲ್ನಿಂದ ತಯಾರಿಸಲ್ಪಟ್ಟಿದೆ. 28 ಮೀಟರ್ ಉದ್ದ, 60 ಟನ್ ಭಾರವಿದ್ದು, 11 ಮಂದಿ ಸಿಬ್ಬಂದಿಗಳು ಈ ನೌಕೆಯಲ್ಲಿ ಗಸ್ತು ಕಾರ್ಯದಲ್ಲಿ ಭಾಗವಹಿಸ ಬಹುದಾಗಿದೆ.

ನೌಕೆಯನ್ನು ನೀರಿಗೆ ಸ್ಪರ್ಶಗೊಳಿಸುವ ಮೊದಲು ನಡೆದ ಸಭಾ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಕೋಸ್ಟ್ ಗಾರ್ಡ್ ಕರ್ನಾಟಕ ವಿಭಾಗದ ಡಿಐಜಿ ಎಸ್.ಎಸ್.ದಸೀಲಾ, ಇದೊಂದು ಐತಿಹಾಸಿಕ ಸಂದರ್ಭ. ಕಬ್ಬಿಣದಿಂದ ವಿಭಿನ್ನ ವಿನ್ಯಾಸದೊಂದಿಗೆ ರಚನೆಗೊಂಡ ಬೃಹತ್ತಾದ ನೌಕೆಯೊಂದು ನೀರಿಗಿಳಿದು ತನ್ನ ಕಾರ್ಯಾಚರಣೆಗೆ ಮುಂದಾಗುವುದು ಕೋಸ್ಟ್ ಗಾರ್ಡ್ ಪಾಲಿಗೆ ಹೆಮ್ಮೆಯ ವಿಚಾರ. ಈ ಯಶಸ್ಸಿನ ಹಿಂದೆ ಕಠಿಣ ಶ್ರಮವಿದೆ ಎಂದು ಹೇಳುತ್ತಾ ಅವರು ನೌಕೆ ನಿರ್ಮಾಣಕ್ಕೆ ಸಹಕರಿಸಿ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು.

ದೇಶದ ಸುರಕ್ಷತೆಯ ದೃಷ್ಟಿಯಿಂದ ಈ ಗಸ್ತು ನೌಕೆಗಳ ಪಾತ್ರ ಮಹತ್ತರವಾದುದು. ಈ ನೌಕೆಯ ಸೇರ್ಪಡೆಯೊಂದಿಗೆ ಕರಾವಳಿ ತಟ ರಕ್ಷಣಾ ಪಡೆಯ ಜವಾಬ್ಧಾರಿ ಮತ್ತಷ್ಟು ಹೆಚ್ಚಿದೆ.ಫೆಬ್ರವರಿ 20ರಿಂದ ಇದು ಸುಸಜ್ಜಿತವಾಗಿ ಸಮುದ್ರದಲ್ಲಿ ಗಸ್ತು ಕಾರ್ಯ ನಡೆಸುವ ಸಾಧ್ಯತೆ ಇದೆ ಎಂದು ದಾಸಿಲಾ ತಿಳಿಸಿದರು.

ಭಾರತೀ ಡಿಫೆನ್ಸ್ ಆಯಂಡ್ ಇನ್ ಫ್ರಾಸ್ಟ್ರ ಕ್ಚರ್ ಲಿ. ಸಂಸ್ಥೆಯ ಮಂಗಳೂರು ಇದರ ಪರವಾಗಿ ಚೀಫ್ ಆಪರೇಟಿಂಗ್ ಆಫೀಸರ್ ನಿವೃತ್ತ ಡಿಐಜಿ ನರೇಂದ್ರ ಕುಮಾರ್ ಸಿಂಗ್ ಮಾತನಾಡಿ, ಮಂಗಳೂರಿನ ಭಾರತಿ ಶಿಪ್ಯಾರ್ಡ್ನಿಂದ 2017ರ ನವೆಂಬರ್ 1ರಂದು ಗಸ್ತು ನೌಕೆಯೊಂದು ಹಸ್ತಾಂತರಗೊಂಡಿತ್ತು. ಇದೀಗ ಗೋವಾದಲ್ಲಿ ಮತ್ತೆ 3 ನೌಕೆಗಳು ನಿರ್ಮಾಣ ಹಂತದಲ್ಲಿದ್ದು, ಮಂಗಳೂರಿನ ತಣ್ಣೀರುಬಾವಿಯಲ್ಲಿ 2 ನೌಕೆಗಳು ನಿರ್ಮಾಣಗೊಳ್ಳುತ್ತಿವೆ.

25 ಕೋಟಿ ರೂ. ವೆಚ್ಚದಲ್ಲಿ ಈ ನೌಕೆ ನಿರ್ಮಾಣವಾಗಿದೆ. ಮಂಗಳೂರಿನ ಭಾರತಿ ಶಿಪ್ಯಾರ್ಡ್ 2014ರಿಂದ 2017ರವರೆಗೆ ತನ್ನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿತ್ತು. ಹಣಕಾಸಿನ ತೊಂದರೆಯಿಂದಾಗಿ ನೌಕೆ ನಿರ್ಮಾಣದಲ್ಲಿ ವಿಳಂಬವಾಗಿದ್ದು, ಈ ಹಿಂದೆ ಕಂಪನಿಯು 250 ನೌಕೆಗಳನ್ನು ಭಾರತೀಯ ಮತ್ತು ವಿದೇಶಿ ಗ್ರಾಹಕರಿಗೆ ನಿರ್ಮಾಣ ಮಾಡಿ ನೀಡಿದೆ. ಇದೀಗ ಕಂಪೆನಿಯು ಹಣಕಾಸಿನ ಮುಗ್ಗಟ್ಟಿನ ನಡುವೆಯೂ ನೌಕೆಗಳ ನಿರ್ಮಾಣ ಕಾರ್ಯವನ್ನು ತ್ವರಿತಗೊಳಿಸಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಗೋವಾ ವಿಭಾಗದ ಡಿಐಜಿ ಅತುಲ್ ಪರ್ಲಿಕರ್ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು. ಮಂಗಳೂರು ಯಾರ್ಡ್ ಅಧ್ಯಕ್ಷ ಹಾಗೂ ಶಿಪ್ ಯಾರ್ಡ್ ಮುಖ್ಯಸ್ಥ ಪವಿತ್ರನ್ ಅಲೋಕನ್ ಉಪಸ್ಥಿತರಿದ್ದರು. ಭಾರತಿ ಶಿಪ್ಯಾರ್ಡ್ನ ಜನರಲ್ ಮ್ಯಾನೇಜರ್ ಮಹೇಶ್ ಎಂ.ಎನ್. ವಂದಿಸಿದರು.

Comments are closed.