ಕರಾವಳಿ

ಎಬಿವಿಪಿ ಕಾರ್ಯಕರ್ತನ ಹತ್ಯೆ ಖಂಡಿಸಿ ಪ್ರತಿಭಟನೆ : ಆರೋಪಿಗಳಿಗೆ ಗಲ್ಲು ಶಿಕ್ಷೆ ನೀಡಲು ಆಗ್ರಹ

Pinterest LinkedIn Tumblr

ಮಂಗಳೂರು,ಜನವರಿ,21: ಕೇರಳದ ಕಣ್ಣೂರಿನಲ್ಲಿ ನಡೆದ ಎಬಿವಿಪಿ ಕಾರ್ಯಕರ್ತನ ಹತ್ಯೆ ಖಂಡಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಶುಕ್ರವಾರ ನಗರದ ಲಾಲ್‌ಭಾಗ್ ವೃತ್ತದ ಬಳಿ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು.

ಪ್ರತಿಭಟನಾ ಸಭೆಯನ್ನುದ್ದೇಶಿಸಿ ನಗರ ಕಾರ್ಯದರ್ಶಿ ಮೃನಾಲ್ ಮಾತನಾಡಿ, ಕೇರಳದ ಕಣ್ಣೂರಿನಲ್ಲಿ ಮತೀಯ ದ್ವೇಷಕ್ಕೆ ಬಲಿಯಾದ ಎಬಿವಿಪಿ ಸಂಘಟನೆಯ ಸದಸ್ಯ ಶ್ಯಾಮ್ ಪ್ರಸಾದ್ ಹತ್ಯೆಯನ್ನು ಎಬಿವಿಪಿ ಮಂಗಳೂರು ಘಟಕ ತ್ರೀವವಾಗಿ ಖಂಡಿಸುತ್ತದೆ. ಕೇರಳದ ಕಣ್ಣೂರಿನಲ್ಲಿ ಮತೀಯ ದ್ವೇಷ ಹೆಚ್ಚಾಗುತ್ತಿದ್ದು, ಎರಡು ತಿಂಗಳ ಅವಧಿಯಲ್ಲಿ ಕಣ್ಣೂರಿನಲ್ಲಿ ನಡೆದ ಎರಡನೇ ಕೊಲೆ ಇದಾಗಿದೆ. ಈ ದುಷ್ಕ್ರತ್ಯದಲ್ಲಿ ಭಾಗಿಯಾದ ಆರೋಪಿಗಳಿಗೆ ಗಲ್ಲು ಶಿಕ್ಷೆ ಆಗಬೇಕೆಂದು ಈ ಮೂಲಕ ಆಗ್ರಹಪಡಿಸುತ್ತೇವೆ ಎಂದು ಹೇಳಿದರು.

ನಾಲ್ಕು ಮಂದಿ ಆರೋಪಿಗಳ ಬಂಧನ :

ಎಬಿವಿಪಿ ಸಂಘಟನೆಯ ಸದಸ್ಯ ಕಾಕ್ಕಯಂಗಾಡ್ ಸರಕಾರಿ ಐಟಿಐ ವಿದ್ಯಾರ್ಥಿ ಶ್ಯಾಮ್ ಪ್ರಸಾದ್ ಎಂಬವರನ್ನು ಜನವರಿ ೧೯ರಂದು ದುಷ್ಕರ್ಮಿಗಳು ಹತ್ಯೆಗೈದಿದ್ದರು. ಕಣ್ಣೂರಿನ ಪೆರವೂರ್ ಎಂಬಲ್ಲಿ ಹತ್ಯೆ ನಡೆದಿದ್ದು, ಬೈಕ್‌ನಲ್ಲಿ ತನ್ನ ಪಾಡಿಗೆ ಬರುತ್ತಿದ್ದ ಶ್ಯಾಮ್‌ನನ್ನು ಅಡ್ಡಗಟ್ಟಿದ ಮುಖಕ್ಕೆ ಬಟ್ಟೆ ಸುತ್ತಿಕೊಂಡಿದ್ದ 3 ಜನ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದರು, ಈ ಸಂದರ್ಭ ಶ್ಯಾಮ್ ತಪ್ಪಿಸಿಕೊಳ್ಳಲು ಪ್ರಯತ್ನ ಪಟ್ಟಿದ್ದಾರಾದರೂ ದುಷ್ಕರ್ಮಿಗಳು ಆತನನ್ನು ಅಟ್ಟಾಸಿಸಿಕೊಂಡು ಆಯುಧಗಳಿಂದ ಕೊಚ್ಚಿ ಕೊಲೆ ಮಾಡಿದ್ದರು.

ವಿದ್ಯಾರ್ಥಿ ಶ್ಯಾಮ್ ಪ್ರಸಾದ್

ಶ್ಯಾಮ್ ಪ್ರಸಾದ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಎಸ್‌ಡಿಪಿಐ ಸಂಘಟನೆಯ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ಕೊಲೆ ಕೃತ್ಯ ನಡೆದು ಎರಡು ಗಂಟೆಗಳಲ್ಲಿ ವಯನಾಡಿನ ತಲಪ್ಪುಯ ಎಂಬಲ್ಲಿಂದ ಆರೋಪಿಗಳನ್ನು ಪೊಲೀಸರು ಕಸ್ಟಡಿಗೆ ಪಡೆದಿದ್ದಾರೆ.

ಪಾರಕ್ಕಂಡಂ ನಿವಾಸಿ ಮುಹಮ್ಮದ್(20),ಮಿನಿಕ್ಕೋಲ್ ಸಲೀಂ(26), ನಿರ್ವೇಲಿ ಸಮೀರ್(25), ಪಾಲಯಾಡ್ ನಿವಾಸಿ ಹಾಷಿಂ(39) ಎಂಬವರನ್ನು ವಶಕ್ಕೆ ಪಡೆದಿದ್ದಾರೆ.

ಘಟನೆ ನಡೆದ ಸ್ಥಳದಲ್ಲಿದ್ದ ಜನರು ದುಷ್ಕರ್ಮಿಗಳು ತಂಡ ಕೊಮ್ಮೆರಿ ದಾರಿಯಾಗಿ ನೆಡುಂಪೊಯಿ ಹೋಗಿದೆ ಎಂದು ತಿಳಿಸಿದ್ದರು. ಕೂಡಲೇ ಕಾರ್ಯಪ್ರವೃತ್ತರಾದ ಪೆರಾವೂರ್ ಸಿಐ ಕುಟ್ಟಿಕೃಷ್ಣನ್ ನೇತೃತ್ವದ ಪೊಲೀಸರು ತಲಪ್ಪುಯ ಪೊಲೀಸ್ ಠಾಣೆಗೆ ವಿವರ ನೀಡಿದ್ದಾರೆ. ಅದರಂತೆ ವಾಹನ ತಪಾಸಣೆಗಿಳಿದ ತಲಪ್ಪುಯ ಪೊಲೀಸರು ಕಾರು ಸಹಿತ ನಾಲ್ವರು ಆರೋಪಿಗಳನ್ನು ಕಸ್ಟಡಿಗೆ ಪಡೆದು ರಾತ್ರಿಯೇ ತನಿಖಾಧಿಕಾರಿಗಳ ವಶಕ್ಕೊಪ್ಪಿಸಿದ್ದಾರೆ.

ಶ್ಯಾಮ್ ಕೊಲೆಯನ್ನು ಎಬಿವಿಪಿ ಮತ್ತು ಕೇರಳ ಬಿಜೆಪಿ ತೀವ್ರವಾಗಿ ಖಂಡಿಸಿದ್ದು, ಕೇರಳದ ಹಲವೆಡೆ ಪ್ರತಿಭಟನೆ ಮಾಡುತ್ತಿದೆ. ಪಿಎಫ್‌ಐ ಮತ್ತು ಎಸ್‌ಡಿಪಿಐ ನಂತಹಾ ಉಗ್ರ ಸಂಘಟನೆಗಳನ್ನು ನಿಷೇಧ ಮಾಡಬೇಕು ಎಂದು ಅವು ಒತ್ತಾಯಿಸಿವೆ.

Comments are closed.