ಕರಾವಳಿ

ವಿದ್ಯಾರ್ಥಿನಿಯ ಅಪಹರಣ ಆರೋಪ : ಮುಂಬೈ ಪೊಲೀಸರಿಂದ ಬಜರಂಗದಳ ಮುಖಂಡನ ಸೆರೆ?

Pinterest LinkedIn Tumblr

ಸುನೀಲ್ ಪಂಪ್ ವೆಲ್

ಮಂಗಳೂರು, ಜನವರಿ.19: ಇತ್ತೀಚಿಗೆ ಮಂಗಳೂರಿನಲ್ಲಿ ಸುದ್ಧಿ ಮಾಡಿದ್ದ ಕಾನೂನು ಪದವಿ ವಿದ್ಯಾರ್ಥಿನಿ ರೇಷ್ಮಾ ಶಂಕಿತ ಲವ್ ಜಿಹಾದ್ ಪ್ರಕರಣ ಹೊಸ ತಿರುವು ಪಡೆದುಕೊಂಡಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬಯಿ ಪೊಲೀಸರು ಮಂಗಳೂರಿನ ಬಜರಂಗದಳದ ಕಾರ್ಯಕರ್ತನೊಬ್ಬನನ್ನು ಬಂಧಿಸಿ ಕರೆದೊಯ್ದಿರುವುದಾಗಿ ತಿಳಿದುಬಂದಿದೆ.

ಕಾಸರಗೋಡು ಮೂಲದ ಶ್ರೀಮಂತ ಉದ್ಯಮಿಯೊಬ್ಬರ ಪುತ್ರಿ ರೇಷ್ಮಾ ಮುಂಬೈ ನ ಇಕ್ಬಾಲ್ ಚೌಧರಿ ಎಂಬವರೊಂದಿಗೆ ಕಾಣೆಯಾಗಿದ್ದರು. ಇದು ಲವ್ ಜಿಹಾದ್ ಪ್ರಕರಣ ಎಂದು ರೇಷ್ಮಾ ಹೆತ್ತವರು ಹಾಗು ಹಿಂದೂ ಸಂಘಟನೆಗಳ ಮುಖಂಡರು ಆರೋಪಿಸಿದ್ದು ಇತ್ತಿಚೆಗೆ ಭಾರಿ ಸುದ್ದಿಯಾಗಿತ್ತು.

                                         ಇಕ್ಬಾಲ್ ಚೌಧರಿ                                                          ರೇಷ್ಮಾ

ಇದೀಗ ಮುಂಬೈಯಿಂದ ತನ್ನ ಪತ್ನಿಯನ್ನು ಅಪಹರಿಸಲಾಗಿದೆ ಎಂದು ಪತಿ ಇಕ್ಬಾಲ್ ಚೌಧರಿ ನೀಡಿರುವ ದೂರಿನ ಹಿನ್ನೆಲೆಯಲ್ಲಿ ಅಪಹರಣ ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರಿನ ಬಜರಂಗದಳದ ಮುಖಂಡ ಸುನೀಲ್ ಪಂಪ್ ವೆಲ್ ಎಂಬವರನ್ನು ಮುಂಬೈ ಪೊಲೀಸರು ಮಂಗಳೂರಿನಲ್ಲಿ ಬಂಧಿಸಿದ್ದಾರೆ ಎಂದು ಹೇಳಲಾಗಿದೆ.

ಮಂಗಳೂರಿನಲ್ಲಿ ಕಾನೂನು ಪದವಿ ಕಲಿಯುತ್ತಿದ್ದ ವಿದ್ಯಾರ್ಥಿನಿ ರೇಷ್ಮಾ ಮುಂಬೈಯ ಯುವಕ ಇಕ್ಬಾಲ್ ಎಂಬಾತನನ್ನು ಪ್ರೇಮಿಸಿ ವಿವಾಹವಾಗಿ ಮುಂಬೈಯಲ್ಲಿದ್ದಳೆನ್ನಲಾಗಿದೆ. ಈ ಅಂತರ್ ಧರ್ಮೀಯ ಪ್ರೇಮ ಪ್ರಕರಣವನ್ನು ‘ಲವ್ ಜಿಹಾದ್’ ಎಂದು ಆರೋಪಿಸಿ ಯುವತಿಯ ಕುಟುಂಬಸ್ಥರು ಆಕೆಯನ್ನು ಮುಂಬೈಯಿಂದ ಮಂಗಳೂರಿಗೆ ಕರೆ ತಂದಿದ್ದರು.

ಈ ವಿಚಾರವಾಗಿ ಇಕ್ಬಾಲ್ ಮುಂಬೈ ನ್ಯಾಯಾಲಯಕ್ಕೆ ಹೇಬಿಯರ್ಸ್ ಕಾರ್ಪಸ್ ಅರ್ಜಿ ಸಲ್ಲಿಸಿ ತನ್ನ ಪತ್ನಿಯ ಅಪಹರಣವಾಗಿದ್ದು, ಆಕೆಯನ್ನು ಪತ್ತೆ ಹಚ್ಚಿ ಕೊಡುವಂತೆ ಕೋರಿದ್ದರು. ಮುಂಬೈ ಹೈಕೋರ್ಟ್ ಒಂದು ವಾರದೊಳಗೆ ರೇಷ್ಮಾಳನ್ನ ಪತ್ತೆ ಮಾಡಿ ಕೋರ್ಟ್ ಮುಂದೆ ಹಾಜರು ಪಡಿಸುವಂತೆ ಮುಂಬೈ ಪೊಲೀಸರಿಗೆ ಆದೇಶ ನೀಡಿತ್ತು. ಹೀಗಾಗಿ ಮುಂಬೈ ಪೊಲೀಸರು ಮಂಗಳೂರಿಗೆ ಆಗಮಿಸಿ ತನಿಖೆ ಆರಂಭಿಸಿದ್ದರು. ಮಂಗಳೂರಿನಲ್ಲಿರುವ ರೇಷ್ಮಾಳ ಮನೆ ಸೇರಿದಂತೆ ಸಂಬಂಧಿಕರಲ್ಲಿ ಮುಂಬೈ ಪೊಲೀಸರು ವಿಚಾರಣೆ ನಡೆಸಿದ್ದರು.

ಮಂಗಳೂರಿನಲ್ಲಿಯೇ ಬೀಡು ಬಿಟ್ಟಿದ್ದ ಮುಂಬೈ ಪೊಲೀಸರು ಈಗ ಬಜರಂಗದಳದ ಕಾರ್ಯಕರ್ತ ಸುನೀಲ್ ಪಂಪ್ ವೆಲ್ ಎಂಬವರನ್ನು ಬಂಧಿಸಿ ಕರೆದುಕೊಂಡು ಹೋಗಿದ್ದಾರೆ ಎಂದು ಹೇಳಲಾಗಿದೆ. ಆದರೆ ಸುನಿಲ್ ಪಂಪ್ ವೆಲ್ ಬಂಧನದ ಬಗ್ಗೆ ಸ್ಥಳೀಯ ಪೊಲೀಸರಿಗೆ ಮಾಹಿತಿ ಇಲ್ಲ. ಆದರೆ ಈ ನಡುವೆ ರೇಷ್ಮಾಳನ್ನು ಪತ್ತೆ ಮಾಡುವಲ್ಲಿ ಮುಂಬಯಿ ಪೊಲೀಸರಿಗೆ ಸಾದ್ಯವಾಗಿಲ್ಲ ಎಂದು ಹೇಳಲಾಗಿದೆ.

ರೇಷ್ಮಾ ಮತ್ತು ಇಕ್ಬಾಲ್ ಪ್ರೇಮಪ್ರಕರಣವನ್ನು ಹಿಂದೂ ಸಂಘಟನೆಗಳ ಮುಖಂಡರು ಲವ್ ಜಿಹಾದ್ ಎಂದು ಆರೋಪಿಸಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಗಳೂರಿಗೆ ಆಗಮಿಸಿದ್ದ ಸಂದರ್ಭದಲ್ಲಿ ರೇಷ್ಮಾ ಲವ್ ಜಿಹಾದ್ ಪ್ರಕರಣದ ತನಿಖೆಯನ್ನು ಎನ್ ಐ ಎ ಗೆ ವಹಿಸಲು ಮನವಿಯನ್ನು ಸಲ್ಲಿಸಿದ್ದರು.

Comments are closed.