
ಮಂಗಳೂರು, ಜನವರಿ. 14: ಎಪಿಡಿ ಪ್ರತಿಷ್ಠಾನ, ಅಳಕೆ ಶ್ರೀ ಗುಜರಾತಿ ಆಂಗ್ಲ ಮಾಧ್ಯಮ ಶಾಲೆ ಮತ್ತು ಆಂಟನಿ ವೇಸ್ಟ್ ಹ್ಯಾಂಡ್ಲಿಂಗ್ ಸೆಲ್ ವತಿಯಿಂದ ಗುಜರಾತಿ ಶಾಲೆಯಲ್ಲಿ `ಬದುಕಿ, ಬದುಕಲು ಬಿಡಿ’ ಎಂಬ ಪರಿಸರ ರಕ್ಷಣೆ ಸಂದೇಶದೊಂದಿಗೆ ಮಕರ ಸಂಕ್ರಾಂತಿಯನ್ನು ಆಚರಿಸಲಾಯಿತು.
ಭೂಮಿ ತಾಯಿ ನಮಗೆ ಎಲ್ಲವನ್ನೂ ನೀಡಿದ್ದಾಳೆ. ಭೂಮಿ ತಾಯಿಯ ರಕ್ಷಣೆ ನಮ್ಮೆಲ್ಲರ ಸಾಮಾಜಿಕ ಜವಾಬ್ದಾರಿ. ನಮ್ಮ ಪರಿಸರವನ್ನು ರಕ್ಷಿಸುವುದೇ ಭೂಮಿತಾಯಿಗೆ ನಾವು ನೀಡುವ ದೊಡ್ಡ ಕೃತಜ್ಞತೆ ಎಂಬ ಸಂದೇಶದೊಂದಿಗೆ ಕಾರ್ಯಕ್ರಮ ನಡೆಯಿತು.

ಶಾಲೆಯ ಮುಖ್ಯೋಪಾಧ್ಯಾಯಿನಿ ಅಶ್ವಿನಿ ಶೆಣೈ, ಮಕರ ಸಂಕ್ರಾಂತಿಯ ಶುಭ ದಿನದ ಮಹತ್ವನ್ನು ತಿಳಿಸಿ, ಮಾತೃ ಭೂಮಿ, ಸಸ್ಯ ಮತ್ತು ಪ್ರಾಣಿ ಸಾಮ್ರಾಜ್ಯ ಮತ್ತು ಜನತೆ ಬದುಕಲು ಮತ್ತು ಇತರರನ್ನು ಬದುಕಲು ಬಿಡುವುದೇ ಈ ದಿನದ ಸಂದೇಶ ಎಂದರು.
ಎಪಿಡಿಯ ಅಪರೇಶನ್ ಜಿಎಂ ನೇಹ ಶೆಣೈ ನಿರ್ದೇಶನದಲ್ಲಿ ವಿದ್ಯಾರ್ಥಿಗಳಿಂದ ಮಕರ ಸಂಕ್ರಾಂತಿಯ ಉದ್ದೇಶ ತಿಳಿಸುವ ನೃತ್ಯರೂಪಕಗಳನ್ನು ವಿದ್ಯಾರ್ಥಿಗಳು ಸಾದರ ಪಡಿಸಿದರು.

ಶಾಲಾಡಳಿತ ಮಂಡಳಿಯ ಕಲ್ಪೇಶ್ ಖೊಕನ್ನಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗದ್ದ ಮಂಗಳೂರು ಮಹಾನಗರ ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷೆ ಪ್ರತಿಭಾ ಕುಳಾಯಿ ಪರಿಸರ ರಕ್ಷಣೆಯ ಸಂದೇಶ ನೀಡಿದರು. ಸ್ಥಾಯಿ ಸಮಿತಿ ಅಧ್ಯಕ್ಷೆ ನಾಗವೇಣೆ, ಕಾರ್ಪೊರೇಟರ್ ರಾಜೇಂದ್ರ ಕುಮಾರ್, ಮಾಲಿನ್ಯ ನಿಯಂತ್ರಣ ಮಂಡಳಿಯ ಜಯಪ್ರಕಾಶ್, ಆಂಟನಿ ವೇಸ್ಟ್‌ನ ಸಂತೋಷ್ ಜಿ. ನಾಯರ್, ನವೀನ್ ಡಿ. ಸೋಜಾ ಶುಭ ಕೋರಿದರು.

ಪ್ರಕಾಶ್ ಕುರುಪ್, ಶಾಲಾ ರಕ್ಷಕ ಶಿಕ್ಷಕ ಮಂಡಳಿಯ ಅಧ್ಯಕ್ಷ ಆಶಾ, ಎಪಿಡಿಯ ಅಸಿಫ್ ಆಲಂ, ಧನುಷ್ ದೇಸಾಯಿ ಉಪಸ್ಥಿತರಿದ್ದರು.
ಸೌಮ್ಯ ಶೆಟ್ಟಿಗಾರ್ ಸ್ವಾಗತಿಸಿ ರುಹಿಯಾ ಹುಸೇನ್ ವಂದಿಸಿದರು.
ಈ ಸಂದರ್ಭದಲ್ಲಿ ಮಕ್ಕಳು ಸಂಕ್ರಾಂತಿ ಹಬ್ಬವನ್ನು ಪರಿಸರ ಸ್ನೇಹಿಯಾಗಿ ಆಚರಿಸಿದರು. ಪರಸ್ಪರ ಪರಿಸರ ಸಂರಕ್ಷಣೆಯ ಸಂದೇಶ ವಿನಿಮಯ ಮಾಡಿಕೊಂಡರು. ಗಾಳಿಪಟ ಹಾರಿಸಲು ಗ್ಲಾಸ್ ಲೇಪಿತ ನೂಲನ್ನು ಬಳಸಲಿಲ್ಲ. ಮಕ್ಕಳಿಗೆಲ್ಲರಿಗೂ ಮಕರ ಸಂಕ್ರಾಂತಿಯ ಸಂಕೇತವಾಗಿ ಎಳ್ಳುಂಡೆ ವಿತರಿಸಲಾಯಿತು.
Comments are closed.