ಕರಾವಳಿ

ದೀಪಕ್ ಮೃತದೇಹವನ್ನು ಆಸ್ಪತ್ರೆಯ ಹಿಂಬಾಗಿಲ ಮೂಲಕ ಮನೆಗೆ ಸಾಗಿಸಿದ ಪೊಲೀಸರು : ಶವ ಕೆಳಗಿಳಿಸಲು ನಿರಾಕರಣೆ – ಪೊಲೀಸರ ಕ್ರಮದ ವಿರುದ್ಧ ವ್ಯಾಪಕ ಆಕ್ರೋಶ, ಸ್ಥಳದಲ್ಲಿ ಉದ್ವಿಗ್ನ ಸ್ಥಿತಿ

Pinterest LinkedIn Tumblr

ಮಂಗಳೂರು, ಜನವರಿ.4: ದ.ಕ.ಜಿಲ್ಲೆಯ ಸುರತ್ಕಲ್‌ ಸಮೀಪದ ಕಾಟಿಪಳ್ಳದ ಕೈಕಂಬದಲ್ಲಿ ಬುಧವಾರ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಹಿಂದೂ ಪರ ಸಂಘಟನೆಯ ಕಾರ್ಯಕರ್ತ ದೀಪಕ್‌ ರಾವ್‌ ಅವರ ಶವವನ್ನು ಮನೆಗೆ ಸಾಗಿಸಲು ಗುರುವಾರ ಬೆಳಿಗ್ಗೆ ಆಸ್ಪತ್ರೆಯ ಮುಂದೆ ಹಾರ ಮತ್ತು ಹೂವಿನಿಂದ ಅಲಂಕರಿಸಿದ್ದ ವಾಹನದೊಂದಿಗೆ ಕಾದಿದ್ದ ಹಿಂದೂ ಸಂಘಟನೆಯ ಕಾರ್ಯಕರ್ತರ ಕಣ್ಣು ತಪ್ಪಿಸಿ ಪೊಲೀಸರು ಗೌಪ್ಯವಾಗಿ ಶವವನ್ನು ಮನೆಗೆ ರವಾನಿಸಿದ್ದು ಹಿಂದೂ ಸಂಘಟನೆಗಳು, ಬಿಜೆಪಿ ಮತ್ತು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

ದೀಪಕ್ ರಾವ್ ಅವರ ಮೃತದೇಹವನ್ನು ಇಂದು ಬೆಳಗ್ಗೆಯೇ ಪೊಲೀಸರು ಗೌಪ್ಯವಾಗಿ ಕಾಟಿಪಳ್ಳಕ್ಕೆ ಸಾಗಿಸಿದ್ದಾರೆ. ಮೃತದೇಹವು ದೀಪಕ್ ಅವರ ಮನೆ ಎದುರು ತಲುಪಿದ ಸಂದರ್ಭ ಸಂಘ ಪರಿವಾರದ ಕಾರ್ಯಕರ್ತರು, ಹಾಗೂ ಪೋಷಕರು ಆಯಂಬುಲೆನ್ಸ್ನಿಂದ ಶವವನ್ನು ಕೆಳಕ್ಕಿಸಲು ಅವಕಾಶ ನೀಡಲಿಲ್ಲ. ಇದರಿಂದ ಸ್ಥಳದಲ್ಲಿ ಸದ್ಯ ಉದ್ವಿಗ್ನ ವಾತಾವರಣ ನೆಲೆಸಿದೆ.

ನಗರದ ಎಜೆ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮಾಡಿ ಇಡಲಾಗಿದ್ದ ಶವವನ್ನು ಹಿಂಬಾಗಿಲಿನಿಂದ ಗೌಪ್ಯವಾಗಿ ಮನೆಗೆ ರವಾನಿಸಲಾಯಿತು. ಆದರೆ ಮನೆಯ ಎದುರು ಜಮಾಯಿಸಿದ್ದ ಸಾವಿರಾರು ಮಂದಿ ಅಂಬುಲೆನ್ಸ್‌ ತಡೆದು ಶವವನ್ನು ಆಸ್ಪತ್ರೆಗೆ ವಾಪಾಸ್‌ ತೆಗೆದುಕೊಂಡು ಹೋಗುವಂತೆ ಪಟ್ಟು ಹಿಡಿದರು. ಈ ವೇಳೆ ಪೊಲೀಸ್‌ ಅಧಿಕಾರಿಗಳು ಮತ್ತು ಗ್ರಾಮಸ್ಥರ ನಡುವೆ ತೀವ್ರ ವಾಗ್ವಾದ ಉಂಟಾಯಿತು. ಮೃತದೇಹವನ್ನು ವಾಪಸ್ ಕೊಂಡೊಯ್ಯುವಂತೆ ಸಂಘ ಪರಿವಾರದ ಕಾರ್ಯಕರ್ತರು ಪೊಲೀಸರ ಮೇಲೆ ಒತ್ತಡ ಹೇರಿದ್ದಾರೆ.

ಹಿಂದೂ ಪರ ಸಂಘಟನೆಯ ಕಾರ್ಯಕರ್ತರು ಇಂದು ದೀಪಕ್ ರಾವ್ ಅವರ ಮೃತದೇಹವನ್ನು ಮೆರವಣಿಗೆಯ ಮೂಲಕ ಮಂಗಳೂರಿನ ಎ.ಜೆ. ಆಸ್ಪತ್ರೆಯಿಂದ ಕಾಟಿಪಳ್ಳ ಕೈಕಂಬದಲ್ಲಿರುವ ಅವರ ಮನೆಗೆ ಕೊಂಡೊಯ್ಯಲು ನಿರ್ಧರಿಸಿದ್ದರು. ಈ ಹಿನ್ನೆಲೆಯಲ್ಲಿ ಆಸ್ಪತ್ರೆಯ ಮುಂದೆ ಹಾರ ಮತ್ತು ಹೂವಿನಿಂದ ಅಲಂಕರಿಸಿದ್ದ ವಾಹನದೊಂದಿಗೆ ಶವಯಾತ್ರೆ ನಡೆಸಲು ಸಜ್ಜಾಗಿದ್ದ ಸಾವಿರಾರು ಹಿಂದೂ ಸಂಘಟನೆಯ ಕಾರ್ಯಕರ್ತರು ಪೊಲೀಸರ ಕ್ರಮದ ವಿರುದ್ಧ ಕೆಂಡ ಕಾರಿದ್ದಾರೆ. ಮೆರವಣಿಗೆ ನಡೆಸಲು ಅವಕಾವ ನೀಡದೆ ಇರುವುದು ಹಿಂದೂ ವಿರೋಧಿ ನೀತಿಯಾಗಿದೆ . ಕಾಂಗ್ರೆಸ್‌ ಸರ್ಕಾರದ ಆದೇಶದಂತೆ ಕಾನೂನನ್ನೂ ಮೀರಿ ಪೊಲೀಸರು ನಡೆದುಕೊಳ್ಳುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಇನ್ನೊಂದೆಡೆ ದೀಪಕ್‌ ನಿವಾಸದ ಮುಂದೆ ಸಾವಿರಾರು ಜನರು ಜಮಾಯಿಸಿ ಗೃಹ ಸಚಿವರು ಸ್ಥಳಕ್ಕೆ ಬರುವವವರೆಗೆ ಅಂತ್ಯಸಂಸ್ಕಾರ ನಡೆಸುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.

ಬುಧವಾರ ಮಧ್ಯಾಹ್ನ 2 ಗಂಟೆಯ ಸುಮಾರಿಗೆ ದೀಪಕ್‌ ರಾವ್‌ (28) ಅವರು ದ್ವಿಚಕ್ರ ವಾಹನದಲ್ಲಿ ಕೃಷ್ಣಾಪುರ-ಕಾಟಿಪಳ್ಳ ರಸ್ತೆಯಲ್ಲಿ ಹೋಗುತ್ತಿದ್ದರು. ಇದೇ ಸಂದರ್ಭ ಅವರನ್ನು ಕಾರೊಂದು ಹಿಂಬಾಲಿಸಿಕೊಂಡು ಬಂದಿದ್ದು, ಕಾಟಿಪಳ್ಳದ ಸಮೀಪ ಅವರ ವಾಹನವನ್ನು ತಡೆದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕಡಿದು ಹತ್ಯೆಗೈದು ಪರಾರಿಯಾಗಿದ್ದರು.

ಬಳಿಕ ಸಿನಿಮೀಯ ಶೈಲಿಯಲ್ಲಿ ಕ್ಷಿಪ್ರ ಕಾರ್ಯಾಚರಣೆ ನಡೆಸಿ, ಘಟನೆ ನಡೆದಮೂರೂವರೆ ತಾಸುಗಳಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಆರೋಪಿಗಳಾದ ಮೂಲ್ಕಿಯ ನೌಷಾದ್‌,ರಿಜ್ವಾನ್‌, ಪಿಂಕಿ ನವಾಜ್‌ ಮತ್ತು ನಿರ್ಷಾನ್‌ ಎಂಬವರನ್ನು ಬಂಧಿಸಿದ್ದರು.

Comments are closed.