ಕರಾವಳಿ

ಕೋಟ: ಕಾರು-ಇನ್ಸುಲೆಟರ್ ಭೀಕರ ಅಪಘಾತ: ತಾಯಿ,ಮಗ ದಾರುಣ ಸಾವು; ಇಬ್ಬರು ಗಂಭೀರ

Pinterest LinkedIn Tumblr

ಕುಂದಾಪುರ: ಆಲ್ಟೋ ಕಾರು ಹಾಗೂ ಇನ್ಸುಲೆಟರ್ ವಾಹನದ ನಡುವೆ ಮಂಗಳವಾರ ಮಧ್ಯಾಹ್ನದ ಸುಮಾರಿಗೆ ಉಡುಪಿ ಜಿಲ್ಲೆಯ ಕೋಟ ಮೂರುಕೈ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ತಾಯಿ ಮಗ ಇಬ್ಬರು ದಾರುಣವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ. ಈ ದುರ್ಘಟನೆಯಲ್ಲಿ ಇಬ್ಬರು ಗಂಭೀರ ಗಾಯಗೊಂಡಿದ್ದಾರೆನ್ನಲಾಗಿದೆ. ಬಾರಕೂರಿನ ಬೆಣ್ಣೆಕುದ್ರು ನಿವಾಸಿಗಳಾದ ಗಿರಿಜಾ (53) ಹಾಗೂ ಅವಿನಾಶ್ (27) ಅಪಘಾತದಲ್ಲಿ ಮೃತಪಟ್ಟ ದುರ್ದೈವಿಗಳು.

ಕಾರ್ಯಕ್ರಮವೊಂದರ ನಿಮಿತ್ತ ಕಾರಿನಲ್ಲಿ ಬರುತ್ತಿದ್ದ ವೇಳೆ ಕೋಟ ಮೂರುಕೈ ಸಮೀಪ ಕಾರಿನ ನಿಯಂತ್ರಣ ತಪ್ಪಿ ಇನ್ಸುಲೆಟರ್ ವಾಹನಕ್ಕೆ ಬಲವಾಗಿ ಡಿಕ್ಕಿಯಾಗಿದ್ದು ಇಬ್ಬರು ಮೃತಪಟ್ಟಿದ್ದಾರೆ. ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ.

ಕೋಟ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

Comments are closed.