ಕರಾವಳಿ

ಮಂಗಳೂರಿನಲ್ಲಿ ಮರುಕಳಿಸಿದ ಶೂಟೌಟ್ ಪ್ರಕರಣ :ರಥಬೀದಿಯ ಪ್ರಸಿದ್ಧ ಬಟ್ಟೆಯಂಗಡಿ ಮೇಲೆ ದುಷ್ಕರ್ಮಿಗಳಿಂದ ಗುಂಡಿನ ದಾಳಿ – ಓರ್ವನಿಗೆ ಗಾಯ

Pinterest LinkedIn Tumblr

ಮಂಗಳೂರು, ಡಿಸೆಂಬರ್. 8: ಮಂಗಳೂರಿನ ರಥಬೀದಿಯಲ್ಲಿರುವ ಬಟ್ಟೆಯಂಗಡಿಯೊಂದರ ಮೇಲೆ ಶುಕ್ರವಾರ ರಾತ್ರಿ 8 ಗಂಟೆಯ ಸುಮಾರಿಗೆ ಶೂಟೌಟ್ ನಡೆದಿದ್ದು, ನಗರದಲ್ಲಿ ಆತಂಕ ಮೂಡಿಸಿದೆ.

ನಗರದ ರಥಬೀದಿ (ಕಾರ್‌ಸ್ಟ್ರೀಟ್) ಯಲ್ಲಿರುವ ಎಂ.ಸಂಜೀವ ಶೆಟ್ಟಿ ಸಿಲ್ಕ್ ಎಂದ್ ಸಾರೀಸ್ ಬಟ್ಟೆ ಮಳಿಗೆಯಲ್ಲಿ ಈ ಘಟನೆ ನಡೆದಿದ್ದು, ಬೈಕ್ ನಲ್ಲಿ ಬಂದ ದುಷ್ಕರ್ಮಿಗಳಿಂದ ಈ ಕೃತ್ಯ ನಡೆದಿದೆ ಎನ್ನಲಾಗಿದೆ.

ದಾಳಿಯಲ್ಲಿ ಮಳಿಗೆಯ ಸಿಬ್ಬಂದಿ ಕಾಸರಗೋಡಿನ ಮಾಲಿಂಗ ನಾಯ್ಕ (40) ಎಂಬವರು ಗಾಯಗೊಂಡಿದ್ದು, ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಮತ್ತೊಬ್ಬರ ಕಾಲಿಗೆ ಗುಂಡು ತಗುಲಿದೆ ಎನ್ನಲಾಗಿದೆ. ಭೂಗತ ಪಾತಕಿಗಳು ಈ ಕೃತ್ಯ ಎಸಗಿರುವ ಅನುಮಾನವಿದ್ದು, ಹಫ್ತಾಕ್ಕಾಗಿ ದಾಳಿ ನಡೆಸಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.

ಶುಕ್ರವಾರ ರಾತ್ರಿ ಸುಮಾರು 8 ಗಂಟೆ ಹೊತ್ತಿಗೆ ಇಬ್ಬರು ದ್ವಿಚಕ್ರ ವಾಹನದಲ್ಲಿ ಆಗಮಿಸಿದ್ದಾರೆಂದು ಹೇಳಲಾಗಿದೆ. ಈ ಪೈಕಿ ಓರ್ವ ಮಳಿಗೆಯ ಒಳಗೆ ಹೋಗಿದ್ದ. ಮತ್ತೋರ್ವ ಹೊರಗೆ ಇದ್ದು ಗುಂಡು ಹಾರಿಸಿದ್ದಾನೆ ಎಂದು ಬಲ್ಲ ಮಾಹಿತಿಗಳಿಂದ ತಿಳಿದು ಬಂದಿದೆ.

ನಗರ ಪೊಲೀಸ್ ಆಯುಕ್ತ ಟಿ.ಆರ್. ಸುರೇಶ್ ಹಾಗೂ ಡಿಸಿಪಿಗಳು ಸಹಿತ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾಹಿತಿ ಕಲೆ ಹಾಕಿದ್ದಾರೆ. ಮಂಗಳೂರು ಬಂದರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಘಟನೆ ಬಗ್ಗೆ ಬಂದರು ಠಾಣಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ನಗರದ ರಥಬೀದಿಯ ಎಂ.ಸಂಜೀವ ಶೆಟ್ಟಿ ಸಿಲ್ಕ್ಸ್ ಎಂಡ್ ಸಾರೀಸ್ ಬಟ್ಟೆ ಮಳಿಗೆಗೆ ಇಬ್ಬರು ವ್ಯಕ್ತಿಗಳು ಬಂದಿದ್ದರು. ಈ ಪೈಕಿ ಓರ್ವ ಒಳಗೆ ಹೋಗಿದ್ದರೆ, ಮತ್ತೋರ್ವ ಹೊರಗೆ ನಿಂತಿದ್ದ. ಒಳಗಿದ್ದವನು ಟೀ ಶರ್ಟ್ ಕೇಳಿದ್ದಾನೆ. ಮಳಿಗೆಯ ಸಿಬ್ಬಂದಿ ಇಲ್ಲಿ ಟೀ ಶರ್ಟ್ ಸಿಗುವುದಿಲ್ಲ ಅಂದಿದ್ದಾರೆ. ಇದೇ ಸಂದರ್ಭ ಹೊರಗಿದ್ದಾತ ದಾಳಿ ನಡೆಸಿದ್ದಾನೆ ಎಂದು ಮಂಗಳೂರು ನಗರ ಪೊಲೀಸ್ ಅಯುಕ್ತ ಟಿ.ಆರ್. ಸುರೇಶ್ ಅವರು ಮಾಧ್ಯಮಕ್ಕೆ ತಿಳಿಸಿದ್ದಾರೆ.

ಘಟನೆಯಲ್ಲಿ ಬಟ್ಟೆ ಮಳಿಗೆಯ ಸಿಬ್ಬಂದಿ ಮಾಲಿಂಗ ನಾಯ್ಕ ಎಂಬಾತನ ತೊಡೆಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಆರೋಪಿಗಳು ದ್ವಿಚಕ್ರ ವಾಹನದಲ್ಲಿ ಬಂದಿದ್ದರು ಎಂದು ನಗರ ಪೊಲೀಸ್ ಆಯುಕ್ತರು ವಿವರಿಸಿದ್ದಾರೆ.

ಆರೋಪಿಗಳ ಬಗ್ಗೆ ಹೆಚ್ಚಿನ ಮಾಹಿತಿ ಪೊಲೀಸ್ ತನಿಖೆಯಿಂದ ಇನ್ನಷ್ಟೇ ತಿಳಿದು ಬರಬೇಕಿದೆ.

Comments are closed.