ಕರಾವಳಿ

ಹೆಣ್ಣುಮಕ್ಕಳು ಆತ್ಮರಕ್ಷಣೆಗೆ ಕರಾಟೆ ಕಲಿಯುವುದು ಅಗತ್ಯ : ಮಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ

Pinterest LinkedIn Tumblr

ಮಂಗಳೂರು,ನವೆಂಬರ್.4: ಮಹಿಳೆಯರ ಮೇಲಿನ ದೌರ್ಜನ್ಯಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇದನ್ನು ದಿಟ್ಟವಾಗಿ ಎದುರಿಸುವ ಸಲುವಾಗಿ ಹೆಣ್ಣುಮಕ್ಕಳು ಆತ್ಮರಕ್ಷಣೆಗಾಗಿ ಕರಾಟೆ ಕಲಿಯುವುದು ಅಗತ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.
ಸೆಲ್ಫ್ ಡಿಫೆನ್ಸ್ ಸ್ಕೂಲ್ ಆಫ್ ಇಂಡಿಯನ್ ಕರಾಟೆ ಮಂಗಳೂರು ಡೋಜೊ (ರಿ) ಆಯೋಜಿಸಿದ್ದ ಇಂಡಿಯನ್ ಕರಾಟೆ ಚಾಂಪಿಯನ್‌ಶಿಪ್-2017 ಕೂಟ ಉದ್ಘಾಟಿಸಿ ಅವರು ಮಾತನಾಡಿದರು.

ಸಮಾಜದಲ್ಲಿ ಇಂದು ಹೆಣ್ಣುಮಕ್ಕಳ ಮೇಲೆ ಪೈಶಾಚಿಕ ದೌರ್ಜನ್ಯಗಳು ನಡೆಯುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಲೈಂಗಿಕ ದೌರ್ಜನ್ಯದಂಥ ಕೃತ್ಯಗಳಿಂದ ಪಾರಾಗುವ ಸಲುವಾಗಿ ಹೆಣ್ಣುಮಕ್ಕಳು ಆತ್ಮರಕ್ಷಣೆ ಮಾಡಿಕೊಳ್ಳುವುದು ಅಗತ್ಯ ಎಂದು ಪ್ರತಿಪಾದಿಸಿದರು.

ಪ್ರಾಚೀನ ಸಮರ ಕಲೆಯಾದ ಕರಾಟೆ ಮಾನಸಿಕ ಸ್ಥೈರ್‍ಯವನ್ನೂ ನೀಡುತ್ತದೆ. ಈ ಹಿನ್ನೆಲೆಯಲ್ಲಿ ಎಲ್ಲ ಶಾಲೆಗಳಲ್ಲಿ ಹೆಣ್ಣುಮಕ್ಕಳಿಗೆ ಕರಾಟೆ ಕಲಿಯುವ ಅವಕಾಶ ಕಲ್ಪಿಸಬೇಕು ಎಂದು ಸಲಹೆ ಮಾಡಿದರು.

ಎರಡು ದಶಕಗಳ ಹಿಂದೆಯೇ ಎರಡು ಬ್ಲ್ಯಾಕ್ ಬೆಲ್ಟ್ ಪಡೆದ ಮಂಗಳೂರು ಮೇಯರ್ ಕವಿತಾ ಸನಿಲ್ ಈ ನಿಟ್ಟಿನಲ್ಲಿ ಹೆಣ್ಣುಮಕ್ಕಳಿಗೆ ಮಾದರಿ ಎಂದು ಸಿ‌ಎಂ ಅಭಿಪ್ರಾಯಪಟ್ಟರು.

“ಕರಾಟೆಯ ಬಗ್ಗೆ ಹೆಚ್ಚೇನೂ ತಿಳಿದಿಲ್ಲ. ಆದರೆ ಎಂಟರ್ ದ ಡ್ರ್ಯಾಗನ್ ಮೂಲಕ ಬ್ರೂಸ್ಲಿ ಕೌಶಲವನ್ನು ನೋಡಿದ್ದೇನೆ. ಎಸ್‌ಡಿ‌ಎಸ್‌ಐಕೆ ಸ್ಥಾಪಕಾಧ್ಯಕ್ಷರೂ ಶ್ರೀದೇವಿ ಶಿಕ್ಷಣಸಂಸ್ಥೆಯ ಅಧ್ಯಕ್ಷರೂ ಆಗಿರುವ ಎ.ಸದಾನಂದ ಶೆಟ್ಟಿಯವರು ಈ ಕಲೆಯನ್ನು ಪೋಷಿಸಿಕೊಂಡು ಬಂದಿರುವುದು ಶ್ಲಾಘನೀಯ. ಈ ಅಪೂರ್ವ ಚಾಂಪಿಯನ್‌ಶಿಪ್ ಕರಾಟೆ ಕಲಿಯುವ ಮಕ್ಕಳಿಗೆ ಪ್ರೇರಣೆಯಾಗಲಿ” ಎಂದು ಆಶಿಸಿದರು.

ಇಂಡಿಯನ್ ಕರಾಟೆಯ ಗ್ರ್ಯಾಂಡ್‌ಮಾಸ್ಟರ್ ಬಿ.ಎಂ.ನರಸಿಂಹನ್, ಸಚಿವ ರಮಾನಾಥ ರೈ, ಶಾಸಕರಾದ ಅಭಯಚಂದ್ರ ಜೈನ್, ಮೊಯ್ದೀನ್ ಭಾವ, ಶಕುಂತಲಾ ಶೆಟ್ಟಿ, ಎಸ್‌ಡಿ‌ಎಸ್‌ಐಕೆ ಸ್ಥಾಪಕಾಧ್ಯಕ್ಷ ಎ.ಸದಾನಂದ ಶೆಟ್ಟಿ, ಉಪಮೇಯರ್ ರಜನೀಶ್, ಪಾಲಿಕೆ ಸಚೇತಕ ಶಶಿಧರ್ ಹೆಗ್ಡೆ, ಟೂರ್ನಿಯ ಉಸ್ತುವಾರಿ ಹೊಂದಿರುವ ಮಲೇಷ್ಯಾದ ವಸಂತನ್, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಡಿ.ಎಚ್.ಖಾದರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್, ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ, ಮತ್ತಿತರರು ಉಪಸ್ಥಿತರಿದ್ದರು.
ಮೇಯರ್ ಕವಿತಾ ಸನಿಲ್ ಸ್ವಾಗತಿಸಿ, ಎಸ್‌ಡಿ‌ಎಸ್‌ಐಕೆ ಅಧ್ಯಕ್ಷ ಸುರೇಂದ್ರ ವಂದಿಸಿದರು. ನಿತೀಶ್ ಶೆಟ್ಟಿ ನಿರೂಪಿಸಿದರು.

ಸಮರಕಲೆಗೆ ಚೆಂಡೆ, ಪಿಲಿ ಸಾಥ್ :

ಇಂಡಿಯನ್ ಕರಾಟೆ ಚಾಂಪಿಯನ್‌ಶಿಪ್ ಉದ್ಘಾಟನಾ ಸಮಾರಂಭದಲ್ಲಿ ಸಾಂಪ್ರದಾಯಿಕ ಚೆಂಡೆವಾದನ ಸಮರ ಕಲೆಗೆ ಸಾಥ್ ನೀಡಿದ್ದು ವಿಶೇಷವಾಗಿತ್ತು. ಕೊಂಚಾಡಿಯ ಮುಕಾಂಬಿಕಾ ಚೆಂಡೆ ಬಳಗದ ಸದಸ್ಯರು ಈ ಆಕರ್ಷಕ ಆಲಂಕರಿಕ ವಾದ್ಯ- ವಾದನ ನಡೆಸಿಕೊಟ್ಟರು. ಅಂತೆಯೇ ಕುಡ್ಲ ತಂಡದಿಂದ ಹುಲಿ ಕುಣಿತ ವಿಶೇಷ ಮೆರುಗು ನೀಡಿತು.

ಶ್ರವಣಬೆಳಗೊಳದ ಮಹಾಮಸ್ತಕಾಭಿಷೇಕ ಉದ್ಘಾಟನೆಗೆ ತೆರಳಬೇಕಿದ್ದ ಸಿ‌ಎಂ ಸಿದ್ದರಾಮಯ್ಯ, ಬಿಡುವಿಲ್ಲದ ಕಾರ್ಯಕ್ರಮಗಳ ನಡುವೆಯೂ ಉದ್ಘಾಟನಾ ಸಮಾರಂಭಕ್ಕೆ ಆಗಮಿಸಿದ್ದು ವಿಶೇಷವಾಗಿತ್ತು. ಮೇಯರ್ ಕವಿತಾ ಸನಿಲ್ ಅವರ ಒತ್ತಡಕ್ಕೆ ಮಣಿದು ಇಲ್ಲಿಗೆ ಬರಲೇಬೇಕಾಯಿತು ಎಂದು ಸಿ‌ಎಂ ಹೇಳಿದರು.

ತಮ್ಮ ಕಿರುಭಾಷಣದ ಬಹುತೇಕ ಭಾಗವನ್ನು ಮೇಯರ್ ಗುಣಗಾನಕ್ಕೆ ಸಿ‌ಎಂ ಮೀಸಲಿಟ್ಟರು. ಎಸ್‌ಡಿ‌ಎಸ್‌ಐಕೆ ವತಿಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅದ್ದೂರಿಯಾಗಿ ಸನ್ಮಾನಿಸಲಾಯಿತು. ಕರಾವಳಿ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿರುವ ದೋಣಿಯ ಆಕರ್ಷಕ ಬೃಹತ್ ಪ್ರತಿಕೃತಿಯನ್ನು ಸಿ‌ಎಂ ಅವರಿಗೆ ಉಡುಗೊರೆಯಾಗಿ ನೀಡಲಾಯಿತು.

ಕೇವಲ ಕೆಲವೇ ಸೆಕೆಂಡ್‌ಗಳಲ್ಲಿ ಸಿ‌ಎಂ ಅವರ ವ್ಯಕ್ತಿಚಿತ್ರವನ್ನು ರಚಿಸಿ, ಸಿ‌ಎಂ ಅವರಿಗೆ ಉಡುಗೊರೆಯಾಗಿ ನೀಡಿದ ಕಲಾವಿದೆ ಶಬರಿ ಗಾಣಿಗ ಪ್ರೇಕ್ಷಕರ ಮನಸೆಳೆದರು. ನಗರದ ಕರಾಟೆ ವಿದ್ಯಾರ್ಥಿಗಳಾದ ಸೂರಜ್- ಧೀರಜ್ ಸಹೋದರರಿಗೆ ಗ್ರ್ಯಾಂಡ್‌ಮಾಸ್ಟರ್ ನರಸಿಂಹನ್ ಕಪ್ಪು ಬೆಲ್ಟ್ ಪ್ರದಾನ ಮಾಡಿದರು.

Comments are closed.