ಕರಾವಳಿ

ಚುಡಾವಣೆಗೆ ಬೆದರಿ ಆತ್ಮಹತ್ಯೆಗೆ ಶರಣಾದಳೇ ಬಿದ್ಕಲಕಟ್ಟೆಯ ಹುಡುಗಿ..?

Pinterest LinkedIn Tumblr

ಕುಂದಾಪುರ: ಆಕೆಗಿನ್ನು 17 ವರ್ಷದ ಪ್ರಾಯ. ತಾನಿನ್ನೂ ಓದಬೇಕು..ಮನೆಯವರ ಹೆಸರು ಕೀರ್ತಿ ಹೆಚ್ಚಿಸಬೇಕೆಂಬ ಹಂಬಲ ಆಕೆಯದ್ದಾಗಿತ್ತು. ಮನೆಯವರಿಗೂ ಕೂಡ ಈಕೆಯ ಬಗ್ಗೆ ಎಲ್ಲಿಲ್ಲದ ಪ್ರೀತಿ. ಆದರೇ ಆಕೆ ಇದೆಲ್ಲವನ್ನೂ ಮರೆತು ಇನ್ನೆಂದೂ ಬಾರದ ಲೋಕಕ್ಕೆ ತೆರಳಿದ್ದಾಳೆ. ಹೌದು.. ತಾನೇ ಆತ್ಮಹತ್ಯೆ ಮಾಡಿಕೊಳ್ಳುವ ಮೂಲಕ ಮನೆಯವರ ಆಕ್ರಂಧನಕ್ಕೆ ಕಾರಣಳಾಗಿಬಿಟ್ಟಿದ್ದಾಳೆ. ಅಷ್ಟಕ್ಕೂ ಬೆಳಿಗ್ಗೆನವರೆಗೂ ಲವಲವಿಕೆಯಿಂದಿದ್ದ ಆ ಹುಡುಗಿಗೆ ಆಗಿದ್ದಾದರೂ ಏನು ಎಂಬುದು ಈಗ ಯಕ್ಷ ಪ್ರಶ್ನೆ.

ಬಿದ್ಕಲಕಟ್ಟೆ ನಿವಾಸಿ ರಾಮಚಂದ್ರ ಆಚಾರ್ಯ ಹಾಗೂ ಭಾಗ್ಯ ದಂಪತಿಗಳ ಪುತ್ರಿ ಕವನಾ ಎಂಬಾಕೆಯೇ ಆತ್ಮಹತ್ಯೆಗೆ ಶರಣಾದ ಯುವತಿ. ದ್ವಿತೀಯ ಪಿಯುಸಿ ವ್ಯಾಸಂಗ ಮಾಡಿಕೊಂಡಿದ್ದ ಆಕೆ ಇಂದು ತನ್ನ ಮನೆಯ ಕೋಣೆಯಲ್ಲಿಯೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

kundapura_kavana_suside

ನೇಣಿನ ಕುಣಿಕೆಗೆ ಕೊರಳು…
ಕೂಲಿ ಕೆಲಸ ಮಾಡಿಕೊಂಡಿದ್ದ ರಾಮಚಂದ್ರ ಆಚಾರ್ಯ ಅವರ ಮೂವರ ಪುತ್ರಿಯರು ಹಾಗೂ ಓರ್ವ ಪುತ್ರನ ಪೈಕಿ ಕವನಾ ಮೂರನೆಯವಳು. ಬಿದ್ಕಲಕಟ್ಟೆಯ ಮನೆಯಿಂದ ಕಾಲೇಜಿಗೆ ತೆರಳಿ ಮನೆಗೆ ಬಂದಿದ್ದ ಆಕೆ ಮಂಗಳವಾರ ಬೆಳಿಗ್ಗೆಯೂ ನಿತ್ಯದಂತೆ ತಾಯಿಯ ಬಳಿ ಮಾತನಾಡಿದ್ದಲ್ಲದೇ ಕೋಣೆಗೆ ತೆರಳಿ ಬಾಗಿಲು ಹಾಕಿಕೊಂಡಿದ್ದಳು. ಬಹಳ ಹೊತ್ತಾದರೂ ಕೂಡ ಆಕೆ ಹೊರಗಡೆ ಬಾರದಿದ್ದಾಗ ಮತ್ತು ಕರೆದರೂ ಸ್ಪಂದಿಸದಿದ್ದಾಗ ಫೋಷಕರಿಗೆ ಅನುಮಾನ ಬಂದು ಪಕ್ಕದ ಮನೆಯವರ ಬಳಿ ತಿಳಿಸಿದ್ದಾರೆ. ಅವರು ಮನೆಯ ಮೇಲ್ಚಾವಣಿ ಹತ್ತಿ ಗಮನಿಸಿದಾಗ ಕವನಾ ನೇಣು ಕುಣಿಕೆಗೆ ಕೊರಳೊಡ್ಡಿರುವುದು ಗಮನಕ್ಕೆ ಬಂದಿದೆ. ಕೂಡಲೇ ಎಲ್ಲರೂ ಬಾಗಿಲು ಒಡೆದು ಒಳಪ್ರವೇಶಿಸಿ ನೇಣಿನ ಕುಣಿಕೆಯಿಂದ ಕವನಳನ್ನು ತಪ್ಪಿಸಿ ಆಸ್ಪತ್ರೆಗೆ ದಾಖಲಿಸುವ ಪ್ರಯತ್ನವನ್ನೂ ಮಾಡಿದರಾದರೂ ಕೂಡ ಅಷ್ಟರಲ್ಲಾಗಲೇ ಆಕೆ ಪ್ರಾಣಪಕ್ಷಿ ಹಾರಿಹೋಗಿತ್ತು.

ಬರೆದಿಟ್ಟಿದ್ದಳು ಡೆತ್ ನೋಟ್…
ಕವನಾ ಈ ಕಠಿಣ ನಿರ್ಧಾರ ಕೈಗೊಳ್ಳುವ ಮೊದಲು ಡೆತ್ ನೋಟ್ ಬರೆದಿಟ್ಟಿದ್ದಳು. ಅದರಲ್ಲಿ ಆಕೆ ಉಲ್ಲೇಖಿಸಿದ ಅಂಶಗಳಿಷ್ಟು..‘ ನನ್ನ ಸಾವಿಗೆ ನಾನೇ ಕಾರಣ. ಅಮ್ಮಾ, ಅಪ್ಪಾ, ತಮ್ಮ ನನ್ನನ್ನು ಕ್ಷಮಿಸಿ’ ಎಂದಷ್ಟಿತ್ತು. ಮನೆಯ ಮಗಳು ಮನೆಯಲ್ಲಿಯೇ ಆತ್ಮಹತ್ಯೆಗೆ ಶರಣಾದ ಬಳಿಕ ಇಡೀ ಕುಟುಂಬ ಕಣ್ಣೀರಲ್ಲಿ ಕೈತೊಳೆಯುತ್ತಿದೆ.

ಚುಡಾವಣೆ ನಡೆದಿತ್ತೇ..?
ಇನ್ನು ಆತ್ಮಹತ್ಯೆಗೆ ಶರಣಾದ ಕವನಾ ಡೆತ್ ನೋಟಿನಲ್ಲಿ ಬೇರ್ಯಾವುದೇ ವಿಚಾರವನ್ನು ಉಲ್ಲೇಖ ಮಾಡಿಲ್ಲವಾದರೂ ಕೂಡ ಆಕೆಗೆ ಒಂದಷ್ಟು ದಿನಗಳಿಂದ ಪುಂಡರಿಬ್ಬರು ಚುಡಾಯಿಸಿ ಕಿರುಕುಳ ನೀಡುತ್ತಿದ್ದರೆಂಬ ಮಾತುಗಳು ಬಿದ್ಕಲಕಟ್ಟೆ ಭಾಗದ ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ. ಆದರೇ ಇಂತಹ ಯಾವುದೇ ದೂರನ್ನು ಆಕೆ ಮನೆಯವರು ಠಾಣೆಗೆ ನೀಡಿಲ್ಲ.

ಕೋಟ ಪೊಲೀಸ್ ಠಾಣೆಯಲ್ಲಿ ಯುವತಿ ಆತ್ಮಹತ್ಯೆ ಬಗ್ಗೆ ಪ್ರಕರಣ ದಾಖಲಾಗಿದೆ.

Comments are closed.