ಕರಾವಳಿ

ಪೊಲೀಸ್ ಸಿಬ್ಬಂದಿಯ ಲಂಚ ಪ್ರಕರಣಕ್ಕೆ ಹೊಸ ತಿರುವು : ದುಷ್ಕರ್ಮಿಗಳಿಂದ ಸಂಚು : ಆರೋಪ

Pinterest LinkedIn Tumblr

police_bribe_bajpe

ಮಂಗಳೂರು, ಡಿಸೆಂಬರ್.7 : ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಪೊಲೀಸ್ ಸಿಬ್ಬಂದಿಯ ಲಂಚ ಪ್ರಕರಣದ ವಿಡಿಯೋ ಕುರಿತಂತೆ ಹಿರಿಯ ಅಧಿಕಾರಿಗಳು ವರದಿ ಕೇಳಿದ್ದಾರೆ.

ಬಜ್ಪೆ ಸರ್ಕಲ್ ಇನ್‌ಸ್ಪೆಕ್ಟರ್ ಟಿ.ಡಿ.ನಾಗರಾಜ್ ನೇತೃತ್ವದಲ್ಲಿ ಪ್ರಕರಣದ ತನಿಖೆ ನಡೆಯುತ್ತಿದ್ದು ಸಿಬ್ಬಂದಿಯನ್ನು ಈಗಾಗಲೇ ವಿಚಾರಣೆಗೆ ಒಳಪಡಿಸಲಾಗಿದೆ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿರುವ ವಿಡಿಯೋವನ್ನು ತೆಗೆದವರು ದೂರು ನೀಡಲು ಮುಂದಾಗದೇ ಇರುವುದು ಅನೇಕ ಸಂಶಯಕ್ಕೆಡೆ ಮಾಡಿಕೊಟ್ಟಿದ್ದು ನಿಷ್ಠಾವಂತ ಪೊಲೀಸ್ ಸಿಬ್ಬಂದಿಯನ್ನು ಉದ್ದೇಶಪೂರ್ವಕವಾಗಿಯೇ ಪ್ರಕರಣದಲ್ಲಿ ಸಿಲುಕಿಸುವ ಪ್ರಯತ್ನ ನಡೆದಿದೆಯೇ ಎಂಬ ಸಂಶಯ ನಾಗರಿಕರನ್ನು ಕಾಡುತ್ತಿದೆ.

ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಸ್ತುತ ವರ್ಷದಲ್ಲಿ ನಡೆದಿದ್ದ ೨೦ಕ್ಕೂ ಹೆಚ್ಚು ಪ್ರಮುಖ ಪ್ರಕರಣಗಳನ್ನು ಬೇಧಿಸುವಲ್ಲಿ ಶ್ರಮ ವಹಿಸಿದ್ದ ಪೊಲೀಸ್ ಸಿಬ್ಬಂದಿ ಇದಕ್ಕಾಗಿ ಹಿರಿಯ ಪೊಲೀಸ್ ಅಧಿಕಾರಿಗಳಿಂದ ಪ್ರಶಂಸಾಪತ್ರವನ್ನೂ ಪಡೆದಿದ್ದರು.

7ಕ್ಕೂ ಹೆಚ್ಚು ಮನೆಗಳವು ಪ್ರಕರಣ, ದನಕಳ್ಳತನ ಪ್ರಕರಣ, ಕಟೀಲು ಅಸ್ರಣ್ಣ ಮನೆ ದರೋಡೆ ಪ್ರಕರಣದ ಆರೋಪಿಗಳನ್ನು ಬಂಧಿಸುವಲ್ಲಿ ಇದೇ ಪೊಲೀಸ್ ಸಿಬ್ಬಂದಿ ಹಗಲು-ರಾತ್ರಿ ದುಡಿದಿದ್ದರು. ಕಿನ್ನಿಗೋಳಿ ಪೇಟೆಯಲ್ಲಿ ನಡೆದಿದ್ದ ಬ್ಯಾಂಕ್ ದರೋಡೆ ಪ್ರಕರಣದ ತನಿಖೆಗಾಗಿ ರಚಿಸಿದ್ದ ವಿಶೇಷ ತನಿಖಾದಳದಲ್ಲಿ ಒಬ್ಬರಾಗಿದ್ದ ಈ ಸಿಬ್ಬಂದಿ ಒಂದೂವರೆ ತಿಂಗಳ ಕಾಲ ತಮಿಳ್ನಾಡಿನಲ್ಲಿ ಆರೋಪಿಗಳ ಪತ್ತೆಗೆ ಶ್ರಮಿಸಿದ್ದರು ಎನ್ನಲಾಗಿದೆ.

ಇತ್ತೀಚೆಗೆ ಅಡ್ಡೂರು ಬಳಿ ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದ ಸಂದರ್ಭವೂ ಇದೇ ಸಿಬ್ಬಂದಿ ಮರಳು ದಂಧೆಯನ್ನು ಹಿಮ್ಮೆಟ್ಟಿಸಿ ದಂಧೆಕೋರರ ವಿರೋಧ ಕಟ್ಟಿಕೊಂಡಿದ್ದರು. ದನಗಳ್ಳರು ಹಾಗೂ ಮರಳು ದಂಧೆಕೋರರನ್ನು ಎದುರು ಹಾಕಿಕೊಂಡಿದ್ದ ಸಿಬ್ಬಂದಿಯನ್ನು ಮಣಿಸಲು ಪೊಲೀಸ್ ಸಿಬ್ಬಂದಿಯ ವಿಡಿಯೋ ತೆಗೆದು ಜಾಲತಾಣಗಳಲ್ಲಿ ಹರಿಯಬಿಡಲಾಗಿದೆ ಎಂದು ಸ್ಥಳೀಯರು ಆಡಿಕೊಳ್ಳುತ್ತಿದ್ದಾರೆ.

ಅಸ್ಪಷ್ಟವಾಗಿ ಕಾಣುವ ವಿಡಿಯೋದಲ್ಲಿ ಏನನ್ನೋ ಪಡೆಯುವುದನ್ನೇ ಹಣ ಪಡೆಯುವುದು ಎಂಬುದಾಗಿ ಬಿಂಬಿಸಿ ಪ್ರಚಾರ ಮಾಡುತ್ತಿರುವವರ ಬಗ್ಗೆಯೂ ಕಠಿಣ ಕ್ರಮ ಜರುಗಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಈ ಮಧ್ಯೆ ಪೊಲೀಸ್ ಸಿಬ್ಬಂದಿ ಪ್ರಕರಣವನ್ನು ನಿರಾಕರಿಸಿದ್ದು, ‘ನನ್ನ ಬಳಿ ಬಂದ ಲಾರಿ ಚಾಲಕ ದಂಡ ಕಟ್ಟಲು ಹಣವಿಲ್ಲವೆಂದು ಆರ್‌ಸಿ ಕೊಟ್ಟು ಹೋಗಿದ್ದ, ಇದನ್ನೇ ಚಿತ್ರಿಸಿ ಲಂಚ ಪಡೆದಿರುವಂತೆ ಬಿಂಬಿಸಿದ್ದಾರೆ’ ಎಂದು ವಿಚಾರಣೆ ಸಂದರ್ಭ ತಿಳಿಸಿದ್ದಾರೆ ಎನ್ನಲಾಗಿದೆ.

ಘಟನೆ ವಿವರ – ( ಈ ಹಿಂದೆ ಪ್ರಕಟಗೊಂಡ ವರದಿ)

ಮಂಗಳೂರು: ಬಜ್ಪೆ ಪೊಲೀಸ್ ಠಾಣೆಯ ಸಿಬ್ಬಂದಿಯೊಬ್ಬರು ಅಕ್ರಮ ಮರಳು ಸಾಗಾಟಕ್ಕೆ ಸಂಬಂಧಿಸಿ ಲಂಚ ಸ್ವೀಕರಿಸಿಕೊಳ್ಳುತ್ತಿರುವ ವಿಡಿಯೋ ಸಾಮಾಜಿಕ ತಾಲತಾಣದಲ್ಲಿ ವೈರಲ್ ಆಗಿದೆ. ಈ ಬಗ್ಗೆ ವಿಚಾರಣೆ ನಡೆಸುವಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಬಜ್ಪೆ ಠಾಣಾಧಿಕಾರಿಗೆ ಸೂಚನೆ ನೀಡಿದ್ದಾರೆ.

ಪೊಲೀಸ್ ಸಿಬ್ಬಂದಿಯೊಬ್ಬರು ಅಕ್ರಮ ಮರಳು ಸಾಗಾಟದ ಲಾರಿಯೊಂದನ್ನು ತಡೆದು ನಿಲ್ಲಿಸಿ ತಪಾಸಣೆಗೆ ಮುಂದಾದ ವೇಳೆ ಇದು ಅಕ್ರಮ ಸಾಗಾಟ ಎನ್ನುವುದು ಖಚಿತವಾಗಿದೆ. ಅಲ್ಲದೆ ಲಾರಿ ಚಾಲಕ ಸಮವಸ್ತ್ರ ಹಾಕಲಿಲ್ಲ ಎಂದು ಲಾರಿಯನ್ನು ನಿಲ್ಲಿಸಿದ್ದಾನೆ. ಆತ ಲಾರಿಯಿಂದ ಕೆಳಗಿಳಿದು ಬಂದು, ಜೀಪಿನ ಹಿಂಭಾಗಕ್ಕೆ ಆತನನ್ನು ಕರೆದುಕೊಂಡು ಹೋಗಿ ಅಲ್ಲಿ ತನ್ನ ವ್ಯವಹಾರವನ್ನು ಕುದುರಿಸಿಕೊಂಡಿದ್ದಾನೆ.

ಲಾರಿ ಚಾಲಕ ತನ್ನ ಜೇಬಿನಿಂದ ದುಡ್ಡು ತೆಗೆದು ಪೊಲೀಸಿಗೆ ನೀಡುವ, ಆತ ಹಣ ಪಡೆದುಕೊಂಡು ಜೇಬಿಗೆ ಹಾಕುವ ದೃಶ್ಯಗಳು ವಿಡಿಯೋ ರೆಕಾರ್ಡ್ ಆಗಿದೆ.

ಈ ವಿಡಿಯೋವನ್ನು ಇದೀಗ ಸಾಮಾಜಿಕ ಜಾಲ ತಾಣದಲ್ಲಿ ಹಾಕಲಾಗಿದ್ದು, ಇದನ್ನು ಕಂಡ ಹಿರಿಯ ಪೊಲೀಸ್ ಅಧಿಕಾರಿಗಳು ಸಿಬ್ಬಂದಿಯ ವಿಚಾರಣೆ ನಡೆಸುವಂತೆ ಠಾಣಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಲಂಚ ಸ್ವೀಕರಿಸಿಕೊಂಡ ಪೊಲೀಸ್ ಸಿಬ್ಬಂದಿ ಬಜ್ಪೆ ಠಾಣಾ ವ್ಯಾಪ್ತಿಯಲ್ಲಿ ನಡೆದ ದರೋಡೆ ಪ್ರಕರಣ, ದನ ಸಾಗಾಟ ಸೇರಿದಂತೆ ಹಲವು ಪ್ರಕರಣಗಳ ಆರೋಪಿಗಳ ಬಗ್ಗೆ ಬಹಳಷ್ಟು ಶ್ರಮ ವಹಿಸಿದ್ದರು. ನಗರ ಪೊಲೀಸ್ ಆಯುಕ್ತರಿಂದ ಪ್ರಶಂಸನಾ ಪತ್ರವನ್ನೂ ಪಡೆದುಕೊಂಡಿದ್ದರು ಎನ್ನಲಾಗಿದೆ.

Comments are closed.