ಕರಾವಳಿ

ಕೇಂದ್ರ ಸಚಿವ ಡಿ.ವಿ.ಎಸ್‌ರ ಹಳೆ ನೋಟು ತಿರಸ್ಕರಿಸಿದ ಕೆ.ಎಂ.ಸಿ : ಚೆಕ್ ನೀಡಿ ಸಹೋದರನ ಶವ ಕೊಂಡೊಯ್ದ ಸಚಿವರು

Pinterest LinkedIn Tumblr

dvs_kmc_contravarsi_1

ಮಂಗಳೂರು, ನ.22: ಐನೂರು ಹಾಗೂ ಸಾವಿರ ರೂ. ನೋಟು ಅಮಾನ್ಯಗೊಂಡಿರುವ ಹಿನ್ನೆಲೆಯಲ್ಲಿ ಇದರ ಬಿಸಿ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಅವರಿಗೂ ತಟ್ಟಿದೆ. ಮಂಗಳೂರಿನ ಆಸ್ಪತ್ರೆಯೊಂದರಲ್ಲಿ ಹಳೆ ನೋಟುಗಳನ್ನು ಪಡೆಯಲು ಹಿಂದೇಟು ಹಾಕಿದ ಪರಿಣಾಮ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡರೂ ಕೆಲವು ಹೊತ್ತು ಮುಜುಗರ ಪಡುವಂತಾಯಿತು.

ಅಸೌಖ್ಯದಿಂದಾಗಿ ಮಂಗಳೂರಿನ ಜ್ಯೋತಿ ವೃತ್ತದ ಬಳಿ ಇರುವ ಕೆಎಂಸಿ ಆಸ್ಪತ್ರೆಗೆ ದಾಖಲಾಗಿದ್ದ ಸಚಿವ ಡಿ.ವಿ. ಸದಾನಂದ ಗೌಡ ಸಹೋದರ ಭಾಸ್ಕರ ಗೌಡ ಅವರು ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ ಮೃತಪಟ್ಟಿದ್ದರು. ತನ್ನ ಸಹೋದರನ ಮೃತದೇಹ ಪಡೆಯಲು ಬಂದಿದ್ದ ಡಿವಿ ಸದಾನಂದ ಗೌಡ ಅವರು ಆಸ್ಪತ್ರೆಗೆ ಬಿಲ್ ಪಾವತಿಸಲು ಹಳೆಯ ನೋಟುಗಳನ್ನು ನೀಡಿದರು ಎನ್ನಲಾಗಿದೆ.

dvs_kmc_contravarsi_2

ಕೆಎಂಸಿ ಆಸ್ಪತ್ರೆ ಸಿಬ್ಬಂದಿಗಳು ಹಳೆ ನೋಟುಗಳನ್ನು ಪಡೆಯಲು ತಿರಸ್ಕರಿಸಿದರಿಂದ ಸಿಟ್ಟುಗೊಂಡ ಸಚಿವ ಸದಾನಂದ ಗೌಡರು ಹಾಗೂ ಆಸ್ಪತ್ರೆ ಸಿಬಂದಿ ಮಧ್ಯೆ ಮಾತಿನ ಚಕಮಕಿ ನಡೆದಿದ್ದು, ಆಸ್ಪತ್ರೆಗಳಲ್ಲಿ ನವೆಂಬರ್ 24ರವರೆಗೆ ಹಳೆ ನೋಟು ಪಡೆಯಲು ಆದೇಶವಿದ್ದರೂ ಆಸ್ಪತ್ರೆಗಳ ಧೋರಣೆ ವಿರುದ್ಧ ಸಚಿವರು ಅಸಮಾಧಾನಗೊಂಡರು.

ಬಳಿಕ ಅವರು ಚೆಕ್ ಮೂಲಕ ಬಿಲ್ ಮೊತ್ತ ಪಾವತಿಸಿದ್ದಾರೆ. ಸಚಿವರಿಗೆ ಹೀಗೆ ಮಾಡಿದರೆ ಇನ್ನು ಜನಸಾಮಾನ್ಯರ ಪಾಡೇನು ಎಂದು ಪ್ರಶ್ನಿಸಿದ ಸಚಿವರು, ಹಳೆ ನೋಟುಗಳನ್ನು ಪಡೆಯುವುದಿಲ್ಲವೆಂದು ಲಿಖಿತವಾಗಿ ನೀಡುವಂತೆ ಆಸ್ಪತ್ರೆಯವರಿಗೆ ತಿಳಿಸಿದ್ದಾರೆ. ಪತ್ರ ಬಂದ ಕೂಡಲೇ ಸಂಬಂಧಪಟ್ಟವರಿಗೆ ದೂರು ನೀಡುವುದಾಗಿ ಸಚಿವ ಡಿವಿಎಸ್‌‌ ಹೇಳಿದ್ದಾರೆ.

Comments are closed.