ಉಡುಪಿ: ದೇಶಾದ್ಯಂತ ಆಹಾರ ಪದ್ದತಿ ಬಗ್ಗೆ ಚರ್ಚೆ ಆಗುತ್ತಿರುವ ಮಧ್ಯೆ ರಾಜ್ಯ ಮೀನುಗಾರಿಕೆ, ಯುವಜನಸೇವೆ ಮತ್ತು ಕ್ರೀಡೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿಕೆಯೊಂದು ನೀಡಿದ್ದು, ಶ್ರೀ ಕೃಷ್ಣ ಹಾಗು ಶ್ರೀ ರಾಮ ಮಾಂಸಹಾರಿಯಾಗಿದ್ದರು ಎಂದಿದ್ದಾರೆ.
ಶನಿವಾರ ಉಡುಪಿ ಜಿಲ್ಲಾಡಳಿತದ ವತಿಯಿಂದ ಆದಿಉಡುಪಿ ಅಂಬೇಡ್ಕರ್ ಭವನದಲ್ಲಿ ಜರಗಿದ ವಾಲ್ಮೀಕಿ ದಿನಾಚರಣೆಯನ್ನು ಉದ್ಘಾಟಿಸಿ, ಮಾತನಾಡುತಿದ್ದ ಅವರು, ರಾಮಾಯಣ ಬರೆದ ಬೇಡ ಸಮುದಾಯಕ್ಕೆ ಸೇರಿದ ವಾಲ್ಮೀಕಿ, ಕ್ಷತ್ರೀಯ ಸಮಾಜದ ಶ್ರೀರಾಮ ಹಾಗೂ ಶ್ರೀಕೃಷ್ಣ ಮಾಂಸಹಾರಿಗಳಾಗಿದ್ದರು. ದೇಶದಾದ್ಯಂತ ಪ್ರಸಕ್ತ ನಡೆಯುತ್ತಿರುವ ಆಹಾರ ಪದ್ದತಿಯ ಕುರಿತ ಚರ್ಚೆಗೆ ಇದು ಪ್ರಸ್ತುತ. ಸಾಕಷ್ಟು ಮಂದಿ ವಿದ್ವಾಂಸರಿದ್ದಾರೆ, ಇದರ ಬಗ್ಗೆಯೂ ಚರ್ಚೆ ನಡೆಯಲಿ ಎಂದು ಅವರು ಆಗ್ರಹಿಸಿದರು.
ಮಹಾ ಸಾಧನೆ ಮಾಡಲು ಜಾತಿ ಮುಖ್ಯವಲ್ಲ ಎಂಬುದಕ್ಕೆ ವ್ಯಾಸರಾಯರು ಉದಾಹರಣೆ. ಮಹಾಭಾರತವನ್ನು ಬರೆದ ಅವರು ಮದುವೆಯಾಗದ ಮೀನುಗಾರ ಮಹಿಳೆಯ ಪುತ್ರ. ಈ ಕಾಲದಲ್ಲಿ ಅಂತವರು ಇರುತ್ತಿದ್ದರೆ ಸಮಾಜವು ಬಹಿಷ್ಕಾರ ಹಾಕುತ್ತಿತ್ತು. ಜಾತಿ ಬಗ್ಗೆ ಮಾತನಾಡುವವರು ಒಮ್ಮೆ ಪುರಾಣ, ಇತಿಹಾಸಗಳತ್ತ ಕಣ್ಣಾಯಿಸುದು ಒಳಿತು ಎಂದರು.