ಕರಾವಳಿ

ಬುರ್ಖಾ ಹಾಗೂ ಕೇಸರಿ ಶಾಲು ವಿವಾದಕ್ಕೆ ಕಾರಣವಾಗಿದ್ದ ಪೆರುವಾಜೆ ಕಾಲೇಜಿನಲ್ಲಿ ಇದೀಗ ಆರ್‌ಎಸ್‌ಎಸ್ ಶಾಖೆ ವಿವಾದ

Pinterest LinkedIn Tumblr

bhurka_vivada_rss_1

ಮಂಗಳೂರು, ಸೆ.22 :ಇತ್ತೀಚೆಗೆ ಕಾಲೇಜ್ ವಿದ್ಯಾರ್ಥಿನಿಯರು ಬುರ್ಖಾ ಧರಿಸಿ ತರಗತಿ ಪ್ರವೇಶಿಸುತ್ತಿರುವುದರ ವಿರುದ್ಧ ಕಾಲೇಜ್‌ನ ಒಂದು ಸಮುದಾಯದ ವಿದ್ಯಾರ್ಥಿಗಳು ಕೇಸರಿ ಶಾಲು ಹಾಕಿಕೊಂಡು ತರಗತಿ ಪ್ರವೇಶಿಸುವ ಮೂಲಕ ವಿವಾದಕ್ಕೆ ಕಾರಣವಾಗಿದ್ದ ಸುಳ್ಯ ತಾಲೂಕಿನ ಗ್ರಾಮೀಣ ಭಾಗವಾದ ಪೆರುವಾಜೆ ಸರಕಾರಿ ಕಾಲೇಜು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದೆ.

ಈ ಕಾಲೇಜಿನಲ್ಲೇ ಒಂದು ಸಮುದಾಯಕ್ಕೆ ಸೇರಿದ ವಿದ್ಯಾರ್ಥಿಗಳು ಆರೆಸ್ಸೆಸ್ ಶಾಖೆ ನಡೆಸುತ್ತಿರುವ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ನಾಗರಿಕ ವಲಯದಲ್ಲಿ ಭಾರೀ ಚರ್ಚೆಯನ್ನು ಹುಟ್ಟುಹಾಕಿದೆ.

ಪೆರುವಾಜೆ ಕಾಲೇಜಿನಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಬುರ್ಖಾ ಧರಿಸಿಕೊಂಡು ತರಗತಿ ಪ್ರವೇಶಿಸುತ್ತಿದ್ದರು. ಈ ಬಗ್ಗೆ ಪ್ರಸ್ತುತ ವರ್ಷ ಕಾಲೇಜ್ ಪ್ರಾರಂಭವಾದಾಗಲೇ ಅಪಸ್ವರ ಕೇಳಿಬಂದಿತ್ತು. ಹಿಂದೂ ಸಮುದಾಯದ ವಿದ್ಯಾರ್ಥಿಗಳು ಇದನ್ನು ವಿರೋಧಿಸಿ ಕಾಲೇಜ್ ಆಡಳಿತ ಮಂಡಳಿಗೆ ದೂರನ್ನೂ ನೀಡಿದ್ದರು. ಆಡಳಿತ ಮಂಡಳಿಯೂ ತರಗತಿಗೆ ಬುರ್ಖಾ ಧರಿಸಿ ಪ್ರವೇಶಿಸಬೇಡಿ, ಕೇವಲ ಸ್ಕಾರ್ಫ್ ಮಾತ್ರ ಇರಲಿ ಎಂದು ಹೇಳಿತ್ತು. ಆದರೆ ಇದನ್ನು ಗಣನೆಗೆ ತೆಗೆದುಕೊಳ್ಳದ ವಿದ್ಯಾರ್ಥಿನಿಯರು ಬುರ್ಖಾ ಧರಿಸಿ ಪ್ರವೇಶಿಸುತ್ತಿದ್ದರು. ಇದರ ವಿರುದ್ಧ ಕಾಲೇಜಿನ ವಿದ್ಯಾರ್ಥಿಗಳಲ್ಲಿ ಪರ, ವಿರೋಧ ಅಭಿಪ್ರಾಯ ಹುಟ್ಟಿಕೊಂಡಿತ್ತು.

bhurka_vivada_rss_2

ಎರಡು ವಾರಗಳ ಹಿಂದೆ ಕಾಲೇಜಿನ ಒಂದು ಸಮುದಾಯಕ್ಕೆ ಸೇರಿದ ವಿದ್ಯಾರ್ಥಿಗಳು ಸಮವಸ್ತ್ರದ ಮೇಲೆ ಕೇಸರಿ ಶಾಲು ಹಾಕಿಕೊಂಡು ತರಗತಿ ಪ್ರವೇಶಿಸಿದ್ದರು. ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆ ನಡೆದಿದ್ದು, ವಿದ್ಯಾರ್ಥಿಗಳು ಕೇಸರಿ ಶಾಲು ಹಾಕಿಕೊಂಡು ಕಾಲೇಜಿನಲ್ಲಿ ಅಡ್ಡಾಡುವ ಚಿತ್ರಗಳು ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್, ವಾಟ್ಸ್‌ಆಪ್‌ನಲ್ಲಿ ಹರಿದಾಡಿ ಆತಂಕಕ್ಕೆ ಕಾರಣವಾಗಿತ್ತು.

ಆಗ ಎಚ್ಚೆತ್ತುಕೊಂಡಿದ್ದ ಕಾಲೇಜ್ ಆಡಳಿತ ಮಂಡಳಿ ತುರ್ತಾಗಿ ಮೀಟಿಂಗ್ ಕರೆದು ಕಾಲೇಜಿನ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇಂಥ ಕೃತ್ಯಕ್ಕೆ ಇಳಿದವರ ವಿರುದ್ಧ ದೂರು ನೀಡುವುದಾಗಿ ಹೇಳಿಕೊಂಡಿತ್ತು. ಈ ಘಟನೆ ಹಸಿರಾಗಿರುವಾಗಲೇ ಕಾಲೇಜಿನ ಮೈದಾನದಲ್ಲಿ ಆರೆಸ್ಸೆಸ್ ಶಾಖೆ ನಡೆಸುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಪೆರುವಾಜೆ ಸರಕಾರಿ ಕಾಲೇಜಿನಲ್ಲಿ ಬುರ್ಖಾ, ಕೇಸರಿ ಶಾಲು ವಿವಾದದ ಬೆನ್ನಿಗೆ ಆರೆಸ್ಸೆಸ್ ಶಾಖೆ ನಡೆಸುತ್ತಿರುವ ಘಟನೆ ಖೇದಕರ ಎಂದು ಶಾಂತಿಪ್ರಿಯ ನಾಗರಿಕರು ಹೇಳುತ್ತಿದ್ದಾರೆ. ಸರ್ವಧರ್ಮದ ವಿದ್ಯಾರ್ಥಿಗಳು ಒಂದಾಗಿ ಕಲೆತು ಶಿಕ್ಷಣ ಪಡೆಯುವ ಕಾಲೇಜಿನಲ್ಲಿ ಇಂಥ ಧಾರ್ಮಿಕ ನಂಬಿಕೆಯನ್ನು ಬಲವಾಗಿ ಬೇರೂರುವಂತೆ ಮಾಡುವಲ್ಲಿ ಹೊರಗಿನ ಕಾಣದ ಕೈಗಳ ಕೈವಾಡವೂ ಇರುವ ಶಂಕೆ ವ್ಯಕ್ತವಾಗಿದೆ.

ವಿದ್ಯಾರ್ಥಿಗಳಲ್ಲಿ ಹಿಂದೂ-ಮುಸ್ಲಿಂ ಎಂದು ವಿಂಗಡಣೆ ಮಾಡಿ ಬೇಳೆ ಬೇಯಿಸಿಕೊಳ್ಳಲು ಕೆಲ ರಾಜಕೀಯ ಪಕ್ಷ, ಸಂಘಟನೆಗಳು ಮುಂದಾಗಿರುವ ಬಗ್ಗೆಯೂ ಮಾಹಿತಿಯಿದೆ. ಕಾಲೇಜ್ ಕ್ಯಾಂಪಸ್ ಹೊರಗೆ ನಿಂತು ವಿದ್ಯಾರ್ಥಿಗಳು ಮತಾಂಧತೆಯ ಕಡೆಗೆ ಪ್ರೇರೇಪಿಸುವ ಶಕ್ತಿಗಳ ವಿರುದ್ಧ ಪೊಲೀಸ್ ಇಲಾಖೆ ಕಠಿಣ ಕ್ರಮ ಜರುಗಿಸಬೇಕು ಎನ್ನುವುದ ನಾಗರಿಕರ ಮಾತುಗಳು.

ಇನ್ನು ಕಾಲೇಜ್ ಕ್ಯಾಂಪಸ್‌ನಲ್ಲೇ ಕೇಸರಿ ಶಾಲು, ಆರೆಸ್ಸೆಸ್ ಶಾಖೆ ನಡೆಸಲು ಅವಕಾಶ ಕೊಟ್ಟಿರುವ ಸದ್ರಿ ಕಾಲೇಜ್ ಆಡಳಿತ ಮಂಡಳಿ ಕೂಡಾ ಈ ಬಗ್ಗೆ ಗಂಭೀರ ಚಿಂತಿಸುವ ಅಗತ್ಯವಿದೆ. ಈಗಾಗಲೇ ವಿವಾದದ ಗೂಡಾಗಿರುವ ಕಾಲೇಜ್‌ಗೆ ಮತ್ತಷ್ಟು ವಿವಾದ ಮೆತ್ತಿಕೊಳ್ಳುವ ಮುನ್ನ ಪ್ರಕರಣವನ್ನು ಸೌಹಾರ್ದಯುತವಾಗಿ ಮುಗಿಸಲು ಮುಂದಾಗಬೇಕಿದೆ.

ವರದಿ ಕೃಪೆ : ಸಂಜೆವಾಣಿ

Comments are closed.