
ಕುಂದಾಪುರ: ಶಾಲೆಯಿಂದ ಮನೆಗೆ ಮರಳುವಾಗ ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿಯೋರ್ವಳಿಗೆ ಕಳೆದ ಕೆಲವು ದಿನಗಳಿಂದ ಚುಡಾಯಿಸುತ್ತಿದ್ದ ಹಿನ್ನೆಲೆ ಯುವಕರಿಬ್ಬರನ್ನು ಅಡ್ಡಗಟ್ಟಿದ ಸಾರ್ವಜನಿಕರು ಹಾಗೂ ವಿದ್ಯಾರ್ಥಿನಿ ಸಂಬಂಧಿಕರು ಗೂಸಾ ನೀಡಿದ ಘಟನೆ ಕುಂದಾಪುರದಲ್ಲಿ ಬುಧವಾರ ಸಂಜೆ ನಡೆದಿದೆ.
ನಗರದ ಮುಖ್ಯ ರಸ್ತೆಯ ಸಮೀಪದಲ್ಲಿ ಈ ಘಟನೆ ನಡೆದಿದ್ದು ಕೋಟೇಶ್ವರ ಆಸುಪಾಸಿನ ಗ್ರಾಮದ ಇಬ್ಬರು ಯುವಕರೇ ಥಳಿಸಿಕೊಂಡವರು. ಬಳಿಕ ಇಬ್ಬರನ್ನು ಕುಂದಾಪುರ ಪೊಲೀಸರು ಕರೆದೊಯ್ದು ವಿಚಾರಣೆ ನಡೆಸಿದ್ದಾರೆ.
9 ನೇ ತರಗತಿ ಓದುತ್ತಿರುವ ವಿದ್ಯಾರ್ಥಿನಿ ನಿತ್ಯ ಶಾಲೆ ಮುಗಿಸಿ ಮನೆಗೆ ಹೋಗುವ ದಾರಿಯಲ್ಲಿ ಕಿರುಕುಳ ನೀಡುತ್ತಿದ್ದ ಇಬ್ಬರು ಯುವಕರು ಬುಧವಾರ ಆಕೆ ತೆರಳುವ ವೇಳೆ ಮೊಬೈಲ್ ನಂಬರ್ ಬರೆದ ಚೀಟಿ ನೀಡಲು ಮುಂದಾಗಿದ್ದಾರೆ. ಅಲ್ಲಿಂದ ತೆರಳಿದ ವಿದ್ಯಾರ್ಥಿನಿ ಮನೆಗೆ ಹೋಗಿ ವಿಚಾರವನ್ನು ಹೇಳಿದ್ದು ಆಕೆ ಪೋಷಕರು ಹಾಗೂ ಸಾರ್ವಜನಿಕರು ಈ ಇಬ್ಬರು ಯುವಕರನ್ನು ಅಡ್ಡಗಟ್ಟಿ ವಿಚಾರಿಸುವ ವೇಳೆ ಯುವಕರು ಉದ್ದಟತನದ ಮಾತುಗಳನ್ನಾಡಿದ್ದಲ್ಲದೇ ಏನು ಬೇಕಾದರೂ ಮಾಡಿಕೊಳ್ಳಿ ಎಂದು ಅಹಂಕಾರ ಪ್ರದರ್ಶಿಸಿದ್ದಾರೆ. ಇದರಿಂದ ಕೆರಳಿದ ಸಾರ್ವಜನಿಕರು ಇಬ್ಬರಿಗೆ ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಇಬ್ಬರು ಯುವಕರನ್ನು ಠಾಣೆಗೆ ಕರೆದೊಯ್ದ ಕುಂದಾಪುರ ಪೊಲೀಸರು ಇಬ್ಬರನ್ನು ವಿಚಾರಣೆ ನಡೆಸಿದ್ದರು. ಬಾಲಕಿಯ ಪೋಷಕರು ಠಾಣೆಗೆ ದೂರು ನೀಡದ ಹಿನ್ನೆಲೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ.
(ಸಾಂದರ್ಭಿಕ ಚಿತ್ರ)
Comments are closed.