ಕರಾವಳಿ

ರಾಜ್ಯದ ಎಲ್ಲಾ ಕ್ರೀಡಾಂಗಣ ಕಾಮಗಾರಿ ಪರಿಶೀಲನೆಗೆ ತಜ್ಞರ ತಂಡ ರಚನೆ- ಪ್ರಮೋದ್

Pinterest LinkedIn Tumblr

ಉಡುಪಿ: ರಾಜ್ಯದ ಎಲ್ಲಾ ಕ್ರೀಡಾಂಗಣಗಳಲ್ಲಿ ನಡೆದಿರುವ ವಿವಿಧ ಕಾಮಗಾರಿಗಳ ಗುಣಮಟ್ಟ ಪರಿಶೀಲನೆಗಾಗಿ ರಾಜ್ಯ ಪ್ರತಿಷ್ಠಿತ ಇಂಜಿನಿಯರ್ ಕಾಲೇಜುಗಳ ಪ್ರೊಫೆಸರ್ ಗಳು ಮತ್ತು ರಾಜ್ಯದ ನಿವೃತ್ತ ಹಿರಿಯ ಸರಕಾರಿ ಇಂಜಿಯರ್ ಗಳಿಂದ ಪರಿಶೀಲನೆ ನಡೆಸಲು 5 ಜನ ತಾಂತ್ರಿಕ ತಜ್ಞರ ಸಮಿತಿಯನ್ನು ರಚಿಸಲಾಗುವುದು ಎಂದು ರಾಜ್ಯದ ಯುವ ಜನ ಸೇವೆ ಮತ್ತು ಕ್ರೀಡಾ ಇಲಾಖೆಯ ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದ್ದಾರೆ.

udupi_news_madhvaraj-3 udupi_news_madhvaraj-1 udupi_news_madhvaraj-2

ಅವರು ಶನಿವಾರ, ಉಡುಪಿಯ ಅಜ್ಜರಕಾಡು ಒಳಾಂಗಣ ಕ್ರೀಡಾಂಗಣದಲ್ಲಿ, ಡಾ.ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರ, ಉಡುಪಿ , ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಡುಪಿ ಮತ್ತು ಮಂಗಳೂರು ವಿಶ್ವ ವಿದ್ಯಾಲಯ ಇವರ ಸಹಯೋಗದಲ್ಲಿ ಆಯೋಜಿಸಿದ್ದ , ಮಂಗಳೂರು ವಿಶ್ವವಿದ್ಯಾಲಯದ ಅಂತರಕಾಲೇಜು ಮಹಿಳೆಯರ ಮತ್ತು ಪುರುಷರ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್-2016-17 ಕಾರ್ಯಕ್ರಮ ಉದ್ಗಾಟಿಸಿ ಮಾತನಾಡಿದರು.

ರಾಜ್ಯದ ಹಲವು ಕ್ರೀಡಾಂಗಣಗಳಲ್ಲಿ ನಡೆದಿರುವ ಕಾಮಗಾರಿಯ ಮೊತ್ತವು ಅಂತಾರಾಷ್ಟ್ರೀಯ ಕ್ರೀಡಾಂಗಣಗಳಲ್ಲಿ ನಡೆದಿರುವ ಕಾಮಗಾರಿಗಿಂತಲೂ ಹೆಚ್ಚಿನ ವೆಚ್ಚವಾಗಿರುವುದು ಕಂಡು ಬಂದಿದೆ, ಇದರಿಂದ ರಾಜ್ಯದ ಕ್ರೀಡಾ ಕ್ಷೇತ್ರದಲ್ಲಿ ವೆಚ್ಚ ಹೆಚ್ಚಳವಾಗಿ ಗುಣಮಟ್ಟದ ಕೊರತೆ ಕಂಡು ಬರುತ್ತಿದೆ, ಈ ನಿಟ್ಟಿನಲ್ಲಿ ಕಡಿಮೆ ವೆಚ್ಚದಲ್ಲಿ ಉತ್ತಮ ಗುಣಮಟ್ಟದ ಕಾಮಗಾರಿಗಳನ್ನು ಕೈಗೊಳ್ಳುವ ಉದ್ದೇಶದಿಂದ , ಸಮಿತಿಯ ರಚನೆ ಮಾಡಲಾಗುತ್ತಿದೆ, ಈ ಸಮಿತಿಯು ರಾಜ್ಯದ ಎಲ್ಲಾ ಕ್ರೀಡಾಂಗಣಗಳಿಗೆ ಭೇಟಿ, ಕಾಮಗಾರಿಗೆ ಬಿಡುಗಡೆ ಆಗಿರುವ ಮೊತ್ತ, ಕಾಮಗಾರಿ ನಡೆದಿರುವ ವಿವರ, ಗುಣಮಟ್ಟದ ಕುರಿತು ಪರಿಶೀಲನೆ ವರದಿ ನೀಡಲಿದ್ದು, ಆ ವರದಿಯ ಪರಿಶೀಲನೆಯ ನಂತರ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.

ರಾಜ್ಯದ ಯುವ ನೀತಿ ರಚನೆ ಸಂಬಂದಿಸಿದಂತೆ ರಾಜ್ಯದ ಎಲ್ಲಾ ಕ್ರೀಡಾಪಟುಗಳು, ದೈಹಿಕ ಶಿಕ್ಷಕರು ಮತ್ತು ಕ್ರೀಡಾ ಆಸಕ್ತರಿಂದ ಅಭಿಪ್ರಾಯಗಳನ್ನು ಸಂಗ್ರಹಿಸಲು ನಿರ್ದರಿಸಿದ್ದು, ಇದಕ್ಕಾಗಿ ರಾಜ್ಯದ ಬೆಂಗಳೂರು, ಬೆಳಗಾವಿ, ಕಲಬುರಗಿ, ಮೈಸೂರು ಮತ್ತು ಉಡುಪಿಯಲ್ಲಿ ಸಭೆ ನಡೆಸಲು ನಿರ್ಧರಿಸಲಾಗಿದ್ದು, ಉಡುಪಿಯಲ್ಲಿ ಸೆಪ್ಟಂಬರ್ 27 ರಂದು ಪುರಭವನದಲ್ಲಿ ಸಭೆ ಆಯೋಜಿಸಿದ್ದು, ಉಡುಪಿ, ದ.ಕನ್ನಡ ಮತ್ತು ಚಿಕ್ಕಮಗಳೂರು ವ್ಯಾಪ್ತಿಯ ಎಲ್ಲಾ ಕ್ರೀಡಾಪಟುಗಳು, ದೈಹಿಕಶಿಕ್ಷಕರು ಮತ್ತು ಕ್ರೀಡಾ ಆಸಕ್ತರು ತಮ್ಮ ಅಭಿಪ್ರಯ ವ್ಯಕ್ತಪಡಿಸಬಹುದು , ಕ್ರೀಡಾ ನೀತಿಯಲ್ಲಿ ಕ್ರೀಡಾಪಟುಗಳು ಕ್ರೀಡೆಯ ಜೊತೆಗೆ ಶೈಕ್ಷಣಿಕ ಕ್ಷೇತ್ರದಲ್ಲೂ ಉತ್ತಮ ಸಾಧನೆ ತೋರಲು ಅಗತ್ಯವಿರುವ ಅಂಶಗಳನ್ನು ಸೇರಿಸಲಾಗುವುದು ಎಂದು ಸಚಿವರು ಹೇಳಿದರು.

ಉಡುಪಿಯ ಒಳಾಂಗಣ ಕ್ರೀಡಾಂಗಣದಲ್ಲಿ 98 ಲಕ್ಷ ರೂ ವೆಚ್ಚದಲ್ಲಿ ಹವಾ ನಿಯಂತ್ರಣ ವ್ಯವಸ್ಥೆ(ಎಸಿ) ಅಳಡಿಸಲು ಮತ್ತು ಬ್ಯಾಡ್ಮಂಟಿನ್ ಕೋರ್ಟ್‌ಗಳಿಗೆ ಸಿಂಥೆಟಿಕ್ ಮ್ಯಾಟ್ ಅಳವಡಿಸಲು 31 ಲಕ್ಷ ರೂ ಗಳನ್ನು ಮಂಜೂರು ಮಾಡಲಾಗುವುದು ಎಂದು ಸಚಿವರು ಹೇಳಿದರು. ಇದೇ ಸಂದರ್ಭದಲ್ಲಿ ಯುವ ಕ್ರೀಡಾ ಮಿತ್ರ ಯೋಜನೆಯಡಿ ಮತ್ತು ಗ್ರಾಮೀಣ ಕ್ರೀಡೋತ್ಸವ ಯೋಜನೆಯಡಿ ವಿವಿಧ ಸಂಘಗಳಿಗೆ ಅನುದಾನದ ಚೆಕ್ ನ್ನು ಸಚಿವರು ವಿತರಿಸಿದರು.

ಕಾರ್ಯಕ್ರಮದಲ್ಲಿ ಮಂಗಳೂರು ವಿ.ವಿ ಯ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ. ಕಿಶೋರ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಉಡುಪಿ , ದ.ಕ ಮೀನುಗಾರಿಕಾ ಫೆಡರೇಷನ್ ಆದ್ಯಕ್ಷ ಯಶಪಾಲ್ ಸುವರ್ಣ, ಮಂಗಳೂರು ವಿವಿ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ವೇಣುಗೋಪಾಲ್ ಉಪಸ್ಥಿತರಿದ್ದರು. ಡಾ.ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೋ. ಜಗದೀಶ್ ರಾವ್ ಸಗವಾಗತಿಸಿದರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ರೋಶನ್ ಕುಮಾರ್ ವಂದಿಸಿದರು. ನಂತರ ಸಚಿವರು ಜಿಲ್ಲಾ ಈಜುಕೊಳದ ಪರಿಶೀಲನೆ ನಡೆಸಿದರು.

Comments are closed.