ಕರಾವಳಿ

ಪೊಲೀಸ್ ಹಿರಿಯ ಅಧಿಕಾರಿಗಳ ಕಿರುಕುಳ ಆರೋಪ: ಭಟ್ಕಳ ಪಿ.ಎಸ್.ಐ. ರೇವತಿ ರಾಜಿನಾಮೆ

Pinterest LinkedIn Tumblr

ಭಟ್ಕಳ: ರಾಜ್ಯದ ಪೊಲೀಸ್ ಇಲಾಖೆಯಲ್ಲಿ ಮತ್ತೆ ರಾಜಿನಾಮೆ ಪರ್ವ ಮುಂದುವರಿದಿದೆ. ಹಿರಿಯ ಅಧಿಕಾರಿಗಳ ಕಿರುಕುಳವೆಂದು ಆರೋಪಿಸಿ ಭಟ್ಕಳ ನಗರ ಠಾಣೆ ಮಹಿಳಾ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ರೇವತಿ ರಾಜಿನಾಮೆ ನೀಡಿದ್ದಾರೆ.

Bhatkala_PSI Revathi_Rajiname

ಅಷ್ಟಕ್ಕೂ ನಡೆದಿದ್ದೇನು..?
ಭಟ್ಕಳದ ಮೊಹಸಿನ್ ಎನ್ನುವವರಿಗೆ ಕೊಲೆ ಬೆದರಿಕೆ ಹಾಗೂ 20 ಲಕ್ಷ ಹಫ್ತಾ ಹಣದ ಬೇಡಿಕೆಯಿಟ್ಟವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳುವಂತೆ ನಗರ ಠಾಣೆ ಪಿ‌ಎಸ್.ಐ ರೇವತಿಗೆ ದೂರನ್ನು ನೀಡಲು ಹೋದಾಗ ಅವರು ಆರೋಪಿಗಳ ಪರ ವಕಾಲತ್ತು ವಹಿಸಿದವರಂತೆ ವರ್ತಿಸಿದ್ದರು ಎನ್ನುವ ಗಂಭೀರ ಆರೋಪ ಮಾಡಿದ ಮೊಹ್ಸಿನ್ ಐಜಿ ಮತ್ತು ಡಿಜಿಯವರ ಬಳಿ ತನ್ನ ರಕ್ಷಣೆ ಹಾಗೂ ನ್ಯಾಯಕ್ಕಾಗಿ ಅಂಗಲಾಚಿದ ನಂತರ ಉತ್ತರಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಂಶಿಕೃಷ್ಣ ಅವರ ಮೂಲಕ ಭಟ್ಕಳದ ಎ.ಎಸ್.ಪಿಯವರಿಗೆ ಅದೇಶ ನೀಡಿದ ಬಳಿಕ ಪ್ರಕರಣ ದಾಖಲಾಗಿ ಕೆಲವು ಆರೋಪಿಗಳ ಬಂಧನವು ಆಗಿತ್ತು. ಆದರೆ ಇಲ್ಲಿ ನ್ಯಾಯ ಆರಸಿ ಬಂದವರಿಗೆ ಕಿರುಕುಳ ನೀಡಿ ಕರ್ತವ್ಯ ಲೋಪ ಎಸಗಿದ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸ್ ಇಲಾಖೆ ರೇವತಿಯವರಿಗೆ ಅಮಾನತ್ತು ಅದೇಶ ನೀಡಿತ್ತು. ಇತ್ತ ತಾನು ಮಾಡದ ತಪ್ಪಿಗೆ ಅಮಾನತ್ತು ಮಾಡಿ ಆದೇಶ ನೀಡುತ್ತಲೇ ಪಿ.ಎಸ್.ಐ. ರೇವತಿಯವರು ತಮ್ಮ ಹುದ್ದೆಗೆ ರಾಜಿನಾಮೆ ಸಲ್ಲಿಸುವುದಾಗಿ ರಾಜಿನಾಮೆ ಪತ್ರ ನೀಡಿದ್ದಾಗಿ ತಿಳಿದುಬಂದಿದೆ.

ಮೇಲಧಿಕಾರಿಗಳ ಕಿರುಕುಳ ಆರೋಪ…
ಇಲಾಖೆಗೆ ಬಂದ ದಿನದಿಂದಲೂ ಮೇಲಾಧಿಕಾರಿಗಳ ಕಿರುಕುಳದಿಂದ ಬೇಸತ್ತಿರುವೆ. ಭಟ್ಕಳ ಪಿ.ಎಸ್.ಐ. ಆಗಿ ಮೂರು ತಿಂಗಳಿನಿಂದ ಕೆಲಸ ಮಾಡುತ್ತಿದ್ದು ಇಲ್ಲಿಯೂ ಹಿರಿಯ ಅಧಿಕಾರಿಗಳು ತಮಗೆ ಕಿರುಕುಳ ನೀಡುತ್ತಿದ್ದಾರೆ ಎಂದು ರಾಜಿನಾಮೆ ಪತ್ರದಲ್ಲಿ ಆರೋಪಿಸಿದ್ದಾರೆ ಎನ್ನಲಾಗಿದೆ.

ಅಲ್ಲದೇ ಭಟ್ಕಳ ಉಪವಿಭಾಗದ ಎ.ಎಸ್ಪಿ ಅವರ ಮೇಲೆ ಆರೋಪ ಮಾಡಿರುವ ರೇವತಿ ಅವರು, ಅವರ ನಿರಂತರ ಕಿರುಕುಳ ಹಾಗೂ ಬೈಗುಳದಿಂದ ಬೇಸತ್ತಿದ್ದು, ಇಲಾಖೆಯಲ್ಲಿ ಕೆಲಸ ಮಾಡುವುದು ಸೂಕ್ತವಲ್ಲ ಎಂಬ ನಿರ್ಧಾರಕ್ಕೆ ಬಂದಿರುವ ಬಗ್ಗೆ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ.

Comments are closed.