
ಮಂಗಳೂರು, ಜು. 9; ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣವನ್ನು ರಾಜ್ಯ ಸರಕಾರ ಪ್ರಕರಣ ಗಂಭೀರವಾಗಿ ಪರಿಗಣಿಸದೇ ಮುಚ್ಚಿಹಾಕಲು ಪ್ರಯತ್ನಿಸುತ್ತಿದೆ ಎಂದು ಕಾಂಗ್ರೆಸ್ನ ಹಿರಿಯ ಮುಖಂಡ ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ ಆರೋಪಿಸಿದ್ದಾರೆ.
ಮಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣ ಸಾವಿಗೂ ಮುನ್ನ ನೀಡಿದ ಹೇಳಿಕೆ ಮಹತ್ವವಿದೆ. ಇದಕ್ಕೆ ಸುಪ್ರೀಂ ಕೋರ್ಟ್ ಮಾನ್ಯತೆ ಇದೆ. ಈ ಹೇಳಿಕೆಯ ಪ್ರಕಾರ ಎಫ್ ಐ ಆರ್ ದಾಖಲಿಸಬೇಕು. ಆರೋಪಿತ ಸಚಿವರು, ಅಧಿಕಾರಿಗಳನ್ನು ಬಂಧಿಸಬೇಕಿತ್ತು. ಅದು ಬಿಟ್ಟು ಪ್ರಕರಣವನ್ನು ಸಿಐಡಿ ತನಿಖೆಗೆ ನೀಡಿರುವುದು ಸರಿಯಲ್ಲ. ಸಿಐಡಿ ಇಲಾಖೆ ಮುಖ್ಯಮಂತ್ರಿಗಳ ಅಧೀನದಲ್ಲಿಯೇ ಇರುವುದರಿಂದ ನಿಷ್ಪಕ್ಷಪಾತ ತನಿಖೆ ನಡೆಯಲು ಸಾಧ್ಯವಿಲ್ಲ. ಸಿಬಿಐ ತನಿಖೆ ನಡೆದರೆ ಪ್ರಕರಣದ ನೈಜಾಂಶ ಹೊರಬರಲು ಸಾಧ್ಯ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷವು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ತಂದೊಡ್ಡಿದ್ದಾರೆ. ಇನ್ನು ಕಾಂಗ್ರೆಸ್ ಆತ್ಮಹತ್ಯೆ ಮಾಡಿಕೊಳ್ಳುವುದು ಮಾತ್ರ ಬಾಕಿ ಇದೆ. ಮುಖ್ಯಮಂತ್ರಿಗಳದ್ದು ಕಾಂಗ್ರೆಸ್ ಸಂಸ್ಕೃತಿಯಲ್ಲ. ಅವರು ಇನ್ನು ಹದಿನೈದು ವರ್ಷಗಳ ಕಾಲ ಮುಖ್ಯಮಂತ್ರಿಗಳಾಗಲಿ ಎಂದು ಬಯಸಿದ್ದ ನಾನು ಪಶ್ಚಾತಾಪ ಪಡುತ್ತಿದ್ದೇನೆ ಎಂದು ಹೇಳಿದರು.

ಒಬ್ಬ ವ್ಯಕ್ತಿಗೋಸ್ಕರ ಕಾಂಗ್ರೆಸ್ ಪಕ್ಷವನ್ನು ಮುಗಿಸುವ ಕೆಲಸ ಮಾಡಬೇಡಿ ಪಕ್ಷಕ್ಕಿಂತ ಒಬ್ಬ ವ್ಯಕ್ತಿ ದೊಡ್ಡನಾಗಿ ಬಿಟ್ಟರಾ? ನಿಮ್ಮ ಕೈಯ್ಯಲ್ಲಿರುವ ಸಿಐಡಿಗಳಿಂದ ಮಂತ್ರಿಗಳ ವಿರುದ್ಧ ನಿಷ್ಪಕ್ಷಪಾತ ತನಿಖೆ ಆಗುವುದಿಲ್ಲ. ಸಿಬಿಐ ತನಿಖೆಗೆ ಒಳಪಡಿಸಿದರೆ ನಿಮ್ಮನ್ನು ಜನರು ನಂಬುತ್ತಾರೆ. ಅಧಿಕಾರವೇ ಮುಖ್ಯವಲ್ಲ, ಜನ ಸೇವೆಯೇ ಮುಖ್ಯ ಎಂದು ಪೂಜಾರಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಜಾರ್ಜ್ ಅವರೇ, ನಿಮಗೆ ನೈತಿಕತೆ ಇದ್ದರೆ ತನಿಖೆ ಎದುರಿಸಿ. ಪಕ್ಷವನ್ನು ಬಲಿಕೊಡುವ ಕೆಲಸ ಮಾಡಬೇಡಿ. ಇಂದಲ್ಲ ನಾಳೆ, ಸಿಬಿಐ ತನಿಖೆ ನಡೆಯುತ್ತದೆ. ಅಧಿಕಾರದಲ್ಲಿದ್ದವರು ಪುರಾವೆ ನಾಶ ಮಾಡುವುದಲ್ಲಾ, ಮೈಸೂರು ಜಿಲ್ಲಾಧಿಕಾರಿಗೆ ಕಿರುಕುಳ ಪ್ರಕರಣ, ಮರಳು ವಿಚಾರದಲ್ಲಿ ಸಚಿವರ ಮಗ ಜಿಲ್ಲಾಧಿಕಾರಿಗೆ ಒತ್ತಡ ಹೇರುತ್ತಿದ್ದಾರೆ. ಮುಖ್ಯಮಂತ್ರಿಗಳೇ ಲೇಡಿ ಜಿಲ್ಲಾಧಿಕಾರಿಗೆ ಕಿರುಕುಳ ಕೊಟ್ಟರೆ ನಿಮ್ಮ ರಾಜಕೀಯ ಭವಿಷ್ಯವೇ ಅಂತ್ಯವಾಗುತ್ತದೆ. ಯಾರೂ ಕೇಳುವವರು ಇಲ್ಲ ಎಂದು ಅಂದುಕೊಳ್ಳಬೇಡಿ ಎಂದು ಅವರು ಅಕ್ರೋಷ ವ್ಯಕ್ತಪಡಿಸಿದರು.

ಮುಖ್ಯಮಂತ್ರಿಗಳೆ ಜಾರ್ಜ್ ಅವರನ್ನು ಸಂಪುಟದಿಂದ ವಜಾ ಮಾಡಿ. ನಿಮಗೆ ನೈತಿಕತೆ ಇದ್ದರೆ ಈ ಪ್ರಕರಣವನ್ನು ಸಿಬಿಐ ತನಿಖೆಗೊಪ್ಪಿಸಿ, ತಪ್ಪಿತಸ್ಥರನ್ನು ಸಿಬಿಐ ಬಂಧಿಸಲಿ. ತನಿಖೆಯನ್ನು ದಿಕ್ಕು ತಪ್ಪಿಸುವ ಯತ್ನವನ್ನು ಮಾಡಬೇಡಿ ಎಂದು ಪೂಜಾರಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸಲಹೆ ನೀಡಿದರು.
ಕಾಂಗ್ರೆಸ್ ಮುಖಂಡರಾದ ಸುಧೀರ್ ಟಿ.ಕೆ, ಕಳ್ಳಿಗೆ ತಾರನಾಥ ಶೆಟ್ಟಿ, ಕರುಣಾಕರ್ ಶೆಟ್ಟಿ, ಮುಹಮ್ಮದ್ ನವಾಝ್, ನೀರಜ್ ಪಾಲ್, ದೀಪಕ್ ಕುಮಾರ್ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು
Comments are closed.