ಬಂಟ್ವಾಳ, ಜು.02: ತಾಲೂಕಿನ ಕೆಳಗಿನ ತುಂಬೆಯ ಬಿ.ಎ.ಕಾಲೇಜಿನ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ತಿರುವಿನಲ್ಲಿ ಮಳೆಗಾಲ ಆರಂಭವಾದ ಬಳಿಕದಿಂದ ನೀರು ನಿಂತು ವಾಹನ ಸವಾರರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದು ನಿನ್ನೆ ಬೆಳಗ್ಗೆ ಈ ಪ್ರದೇಶದಲ್ಲಿ ಯಾರೋ ಹಾಕಿದ್ದ ಬ್ಯಾನರೊಂದು ಎಲ್ಲರ ಗಮನ ಸೆಳೆಯಿತು.
”ಎಚ್ಚರಿಕೆ” ಎಂದು ದೊಡದಾಗಿ ಬರೆದ ಈ ಬ್ಯಾನರಿನ ಕೆಳಗೆ ”ನಿಧಾನವಾಗಿ ಚಲಿಸಿ ನಂ. 1 ಸಂಸದರ ಈಜುವ ಕೊಳ ಇದೆ” ಮುದ್ರಿಸಿ ಬ್ಯಾನರ್ ಹಾಕುವ ಮೂಲಕ ಇಲ್ಲಿವ ಸಮಸ್ಯೆಯ ವಿರುದ್ಧ ಅಸಮಾಧಾನವನ್ನು ಹೊರಹಾಕಿದ್ದಾರೆ.
ಮಂಗಳೂರು-ಬಿ.ಸಿ.ರೋಡ್ ರಾಷ್ಟ್ರೀಯ ಹೆದ್ದಾರಿ ನಿರ್ಮಾಣವಾದ ಬಳಿಕದಿಂದ ಇಲ್ಲಿಯವರೆಗೂ ಈ ತಿರುವಿನಲ್ಲಿ ಮಳೆಗಾಲ ಆರಂಭದಿಂದ ಕೊನೆಯವರೆಗೂ ನೀರು ನಿಂತು ವಾಹನ ಸಾವಾರರು ಇನ್ನಿಲ್ಲದ ತೊಂದರೆ ಅನುಭವಿಸುತ್ತಾರೆ. ಈ ತಿರುವು ಅಪಾಯಾಕಾರಿಯೂ ಆಗಿದ್ದು ತಿರುವಿನಲ್ಲಿ ವೇಗವಾಗಿ ಬರುವ ವಾಹನ ಸವಾರರಿಗೆ ನೀರು ನಿಂತಿರುವುದು ಒಮ್ಮೆಲೆ ಗೋಚರವಾಗುದರಿಂದ ಅಪಘಾತಗಳು ಸಂಭವಿಸುವ ಸಾಧ್ಯತೆಗಳೂ ಇವೆ. ಹೆದ್ದಾರಿಯಲ್ಲಿ ಮಳೆಗಾಲ ಪೂರ್ತಿ ನೀರು ನಿಲ್ಲುವುದರಿಂದ ಇಲ್ಲಿನ ರಸ್ತೆಯ ಡಾಂಬರು ಕಿತ್ತು ಹೋಗಿದ್ದು ರಸ್ತೆಯ ಮಧ್ಯೆ ಭಾಗದಲ್ಲೇ ಬೃಹತ್ ಹೊಂಡಗಳಾಗಿವೆ. ನೀರಿನಿಂದಾಗಿ ಹೊಂಡಗಳು ಗೋಚರವಾಗದೆ ದ್ವಿಚಕ್ರ ಹಾಗೂ ತ್ರಿಚಕ್ರ ವಾಹನಗಳ ಚಕ್ರಗಳು ಗುಂಡಿಗೆ ಬಿದ್ದು ಮೇಲೆ ಬರಲಾಗದೆ ಚಾಲಕರು ನರಳುತ್ತಿರುವ ದೃಶ್ಯಗಳು ಮಾಮೂಲಿಯಾಗಿವೆ.
ಇಲ್ಲಿನ ಸಮಸ್ಯೆಗಳಿಂದ ಕಂಗೆಟ್ಟ ಸಾರ್ವಜನಿಕರು, ವಾಹನ ಚಾಲಕರು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಹಿಡಿ ಶಾಪ ಹಾಕಿದರೆ ಆಕ್ರೋಶಿತ ಯಾರೋ ಸ್ಥಳೀಯರು ಗುರುವಾರ ಮಧ್ಯ ರಾತ್ರಿ ವೇಳೆ ”ನಂ. 1 ಸಂಸದ ಈಜುವ ಕೊಳ ಇದೆ… ನಿಧಾನವಾಗಿ ಚಲಿಸಿ” ಎಂಬ ಬ್ಯಾನರ್ ಅಳವಡಿಸುವ ಮೂಲಕ ತಮ್ಮ ಆಕ್ರೋಶ ವ್ಯಾಕ್ತಪಡಿಸಿದ್ದಾರೆ. ಶುಕ್ರವಾರ ಬೆಳಗ್ಗೆ ಈ ಬ್ಯಾನರನ್ನು ನೋಡಿದವರೆಲ್ಲರೂ ಮೊಬೈಲ್ ಮೂಲಕ ಫೋಟೊ ಕ್ಲಿಕ್ಕಿಸುತ್ತಿದ್ದ ದೃಶ್ಯಗಳು ಕಂಡು ಬಂದವು. ಇನ್ನಾದರೂ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಇಲ್ಲಿನ ಸಮಸ್ಯೆಗೆ ಶಾಸ್ವತ ಪರಿಹಾರ ಕಂಡುಕೊಳ್ಳುವರೋ ಎಂಬುದನ್ನು ಕಾದು ನೋಡಬೇಕಾಗಿದೆ.

Comments are closed.