ಕರಾವಳಿ

ಅಂಗಡಿಗೆ ನುಗ್ಗಿದ ಕಳ್ಳರು : ಮೊಬೈಲ್‌‌ನ ಜೊತೆಗೆ ಸಿಸಿ ಕೆಮರಾ ಕದ್ದರು.

Pinterest LinkedIn Tumblr

cc_cemara_thefert

ಮಂಗಳೂರು, ಜೂ. 25 : ಬೈಕಂಪಾಡಿ ಎಪಿಎಂಸಿ ಕಟ್ಟಡದಲ್ಲಿ ಮತ್ತೊಮ್ಮೆ ಕಳ್ಳರ ಹಾವಳಿ ಶುರುವಿಟ್ಟಿದೆ. ಕಳೆದ ತಡರಾತ್ರಿ ಮೊಬೈಲ್ ಅಂಗಡಿಯೊಂದರ ಗೋಡೆ ಕೆಡವಿ ನುಗ್ಗಿದ ಕಳ್ಳರು ಲಕ್ಷಾಂತರ ರೂಪಾಯಿ ಮೌಲ್ಯದ ಸೊತ್ತುಗಳನ್ನು ಕಳವುಗೈದಿದ್ದಾರೆ. ಮೊಬೈಲ್‌ಗಳ ಜೊತೆಗೆ ಸಿಸಿ ಕೆಮರಾ, ಲ್ಯಾಪ್‌ಟಾಪ್‌ಗಳನ್ನೂ ಕದ್ದೊಯ್ದಿದ್ದಾರೆ. ಇದರಿಂದಾಗಿ ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸಿರುವ ಅಂಗಡಿ ಮಾಲಕ ಪಣಂಬೂರು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಈ ಹಿಂದೆ ಇದೇ ಅಂಗಡಿಯಲ್ಲಿ ಎರಡು ಬಾರಿ ಕಳ್ಳತನ ಹಾಗೂ ಮೂರು ಬಾರಿ ಕಳ್ಳತನಕ್ಕೆ ಯತ್ನ ನಡೆದಿತ್ತು ಎನ್ನಲಾಗಿದೆ. ಎಪಿಎಂಸಿ ಸ್ವಾಮ್ಯದ ಈ ಕಟ್ಟಡದಲ್ಲಿ ಹಲವಾರು ಮಳಿಗೆಗಳಿದ್ದು, ಕೆಲವೊಂದು ಮಳಿಗೆಗಳು ಕಳ್ಳರ ದೃಷ್ಟಿಗೆ ಈ ಹಿಂದೆಯೇ ಹಲವು ಬಾರಿ ಗುರಿಯಾಗಿದೆ. ಇದೀಗ ಕಳ್ಳತನಕ್ಕೊಳಗಾದ ಮೊಬೈಲ್ ಅಂಗಡಿ ಮಾಲಕ ಸುರಕ್ಷತೆ ದೃಷ್ಟಿಯಿಂದ ಹಾಕಿದ್ದ ಸಿಸಿ ಕೆಮರಾವನ್ನೂ ಕಳ್ಳರು ಕದ್ದೊಯ್ದಿದ್ದಾರೆ.

ಪಣಂಬೂರು ಪೊಲೀಸರ ನಿರ್ಲಕ್ಷ್ಯ ಹಾಗೂ ಎಪಿಎಂಸಿ ಭದ್ರತಾ ಲೋಪದಿಂದಾಗಿ ಪದೇ ಪದೇ ಕಳ್ಳತನವಾಗುತ್ತಿದ್ದರೂ ಕಡಿವಾಣ ಸಾಧ್ಯವಾಗಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.

Comments are closed.