ಕರಾವಳಿ

ವಿಮಾನದ ಕ್ಯಾಬಿನ್‍ನಲ್ಲಿ ಕಾಣಿಸಿಕೊಂಡ ಹೊಗೆ;  ತಪ್ಪಿತು ಭಾರೀ ದುರಂತ: ಮಂಗಳೂರಿಗೆ ಹೊರಟಿದ್ದ ಜೆಟ್ ಏರ್‍ವೇಸ್ ವಿಮಾನ ಕೆಂಪೇಗೌಡ ನಿಲ್ದಾಣದಲ್ಲಿಯೇ ಸೇಫ್ ಲ್ಯಾಂಡಿಂಗ್

Pinterest LinkedIn Tumblr

Jet-Airways

ಬೆಂಗಳೂರು: ಬೆಂಗಳೂರಿನ ಆಗಸದಲ್ಲಿ ಭಾರೀ ದುರಂತವೊಂದು ತಪ್ಪಿದೆ. ಇಂದು ಬೆಳಗ್ಗೆ ಬೆಂಗಳೂರಿನಿಂದ ಮಂಗಳೂರಿಗೆ ಹೊರಟಿದ್ದ ಜೆಟ್ ಏರ್‍ವೇಸ್ ವಿಮಾನದ ಕ್ಯಾಬಿನ್‍ನಲ್ಲಿ ಹೊಗೆ ಕಾಣಿಸಿಕೊಂಡಿದೆ.

ಇಂದು ಬೆಳಗ್ಗೆ 10.20ರ ಹೊತ್ತಿಗೆ ವಿಮಾನವನ್ನು ಆದ್ಯತೆ ಮೇರೆಗೆ ತುರ್ತುಭೂಸ್ಪರ್ಶ ಮಾಡಲಾಯಿತು. ಅದೃಷ್ಟವಷಾತ್‌ ಭಾರೀ ಅನಾಹುತವೊಂದು ತಪ್ಪಿ ಹೋಗಿದ್ದು, ವಿಮಾನದಲ್ಲಿ 65 ಪ್ರಯಾಣಿಕರು ಮತ್ತು 4 ಮಂದಿ ಸಿಬ್ಬಂದಿ ಸುರಕ್ಷಿತವಾಗಿ ಹೊರಬಂದಿದ್ದಾರೆ.

ಘಟನೆ ಬಳಿಕ ಜೆಟ್ ಏರ್‍ವೇಸ್ ಸಂಸ್ಥೆ, ಬೆಂಗಳೂರಿನಿಂದ ಮಂಗಳೂರಿಗೆ ಹೊರಟಿದ್ದ ಜೆಟ್ ಏರ್‍ವೇಸ್ 9 ಡಬ್ಲ್ಯೂ 2839 ವಿಮಾನದ ಕ್ಯಾಬಿನ್‍ನಲ್ಲಿ ಹೊಗೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ವಿಮಾನ ಮತ್ತೆ ಬೆಂಗಳೂರಿನಿಂದ ಹೊರಟ ಕೆಲವೇ ಕ್ಷಣಗಳಲ್ಲಿ ವಾಪಸ್ ಬಂದಿದೆ. ವಿಮಾನ ಲ್ಯಾಂಡ್ ಆಗುತ್ತಿದ್ದಂತೆ ಎಲ್ಲಾ ಪ್ರಯಾಣಿಕರು ಹಾಗೂ ಸಿಬ್ಬಂದಿಯನ್ನು ಸುರಕ್ಷಿತವಾಗಿ ಕೆಳಗಿಳಿಸಿದ್ದೇವೆ. ವಿಮಾನದಲ್ಲಿದ್ದ 65 ಪ್ರಯಾಣಿಕರು ಹಾಗೂ ಜೆಟ್ ಏರ್‍ವೇಸ್‍ನ ನಾಲ್ವರು ಸಿಬ್ಬಂದಿ ಸೇಫ್ ಆಗಿದ್ದಾರೆ ಎಂದು ಹೇಳಿದೆ.

ಅಲ್ಲದೇ ಹೊಗೆ ಕಾಣಿಸಿಕೊಂಡ ವಿಮಾನದಲ್ಲಿ ಜೆಟ್ ಏರ್‍ವೇಸ್ ಎಂಜಿನಿಯರಿಂಗ್ ಟೀಂನಿಂದ ಪರಿಶೀಲನೆ ನಡೆಯುತ್ತಿದ್ದು, ಪ್ರಕರಣದ ಬಗ್ಗೆ ನಾಗರಿಕ ವಿಮಾನ ಯಾನ ನಿರ್ದೇಶನಾಲಯಕ್ಕೆ ಮಾಹಿತಿ ನೀಡಿದ್ದೇವೆ ಎಂದು ಜೆಟ್ ಏರ್‍ವೇಸ್ ಪತ್ರಿಕೆ ಹೇಳಿಕೆ ಬಿಡುಗಡೆ ಮಾಡಿದೆ.

Comments are closed.