
ಪಾಪ್‌ಕಾರ್ನ್ ಕುರಿತಂತೆ ಈಗಿನ ಜನರೇಷನ್‌ಗೆ ವಿವರಣೆ ನೀಡುವ ಅಗತ್ಯವಿಲ್ಲ. ಅಷ್ಟರ ಮಟ್ಟಿಗೆ ಮೆಕ್ಕೆಜೋಳದ ಪಾಪ್‌ಕಾರ್ನ್ ಜನಪ್ರಿಯವಾಗಿದೆ. ಕೇವಲ ಟೈಂಪಾಸ್‌ಗೆ ಪಾಪ್‌ಕಾರ್ನ್ ತಿನ್ನೋಣ ಎಂದು ಹೇಳುವವರ ಸಂಖ್ಯೆಯೇ ಹೆಚ್ಚು. ಆದರೆ, ಅದರಿಂದ ನಮ್ಮ ದೇಹದ ಆರೋಗ್ಯ ಸುಧಾರಣೆಯಾಗಬಲ್ಲದು ಎಂಬ ವಿಚಾರ ಬಹಳಷ್ಟು ಮಂದಿಗೆ ಗೊತ್ತಿರಲಿಕ್ಕಿಲ್ಲ.
ನಗರೀಕರಣ ವಿಸ್ತಾರವಾದಂತೆಲ್ಲಾ ಪಾಪ್‌ಕಾರ್ನ್ ಹೆಚ್ಚು ಹೆಚ್ಚು ಜನಪ್ರಿಯವಾಗುತ್ತಿದೆ. ಜಾತ್ರೆ, ಪ್ರವಾಸ, ಪ್ರಯಾಣ ಕಾಲದಲ್ಲಿ ಇದಕ್ಕೆ ಎಲ್ಲಿಲ್ಲದ ಬೇಡಿಕೆ ಉಂಟಾಗುತ್ತದೆ. ಬೆಂಗಳೂರಿನಲ್ಲಂತೂ ರಸ್ತೆ ಬದಿ, ಚಿತ್ರಮಂದಿರ, ಮಾಲ್ ಸೇರಿದಂತೆ ಎಲ್ಲೆಂದರಲ್ಲಿ ಪಾಪ್‌ಕಾರ್ನ್ ಮಾರಾಟ ನಡೆಯುತ್ತಿದೆ.
ದರದ ಬಗ್ಗೆ ಹೆಚ್ಚು ಮಾತನಾಡದಿರುವುದೇ ಲೇಸು ಏಕೆಂದರೆ, ಮಾಲ್‌ಗಳಲ್ಲಿ ಅತಿ ದುಬಾರಿ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಆದರೂ ಖರೀದಿ ಮಾತ್ರ ಭರ್ಜರಿಯಾಗಿರುತ್ತದೆ. ಇನ್ನು ಬಿಸಿನೆಸ್ ಏರಿಯಾಗಳಲ್ಲಿ ಆಯಾ ಪ್ರದೇಶಕ್ಕನುಗುಣವಾಗಿ ದರ ನಿಗದಿಯಾಗಿರುತ್ತದೆ.
ಪಾಪ್‌ಕಾರ್ನ್ ತಿನ್ನೋದಕ್ಕೆ ಆಬಾಲವೃದ್ಧರಾದಿಯಾಗಿ ಇಷ್ಟಪಡುತ್ತಾರೆ. ಮಕ್ಕಳಿಗೆ ಪಾಪ್‌ಕಾರ್ನ್ ಪಾಕೆಟ್ ಕೊಟ್ಟರೆ ಸಾಕು ಯಾರನ್ನೂ ಡಿಸ್ಟರ್ಬ್ ಮಾಡಲ್ಲ, ಅಷ್ಟರ ಮಟ್ಟಿಗೆ ಇದು ಜನಪ್ರಿಯ.
ಪಾಪ್‌ಕಾರ್ನ್ ಬೇಡಿಕೆ ಬಗ್ಗೆ ಚರ್ಚೆ ಒಂದೆಡೆಯಾದರೆ, ಮತ್ತೊಂದೆಡೆ ಅದರಲ್ಲಿ ನಮ್ಮ ಆರೋಗ್ಯಕ್ಕೆ ಪೂರಕವಾದ ಅಂಶಗಳಿರುತ್ತವೆ ಎಂಬುದೂ ಗಮನಾರ್ಹ.
ಪಾಪ್‌ಕಾರ್ನ್ ತಿನ್ನೋದ್ರಿಂದ ನಮ್ಮ ಜೀರ್ಣಕ್ರಿಯೆ ಚುರುಕಾಗುತ್ತದೆ. ನಾರಿನಾಂಶ ಇದರಲ್ಲಿ ಹೇರಳವಾಗಿ ಇರುವುದರಿಂದ ಜೀರ್ಣಕ್ರಿಯೆಗೆ ಸಹಕಾರಿ. ಇದು ಸಿಹಿ ರಹಿತವೂ ಆಗಿರುವುದರಿಂದ ಮಧುಮೇಹಿಗಳೂ ಇದನ್ನು ಸವಿಯಬಹುದು.
ಪಾಪ್‌ಕಾರ್ನ್‌ನಲ್ಲಿ ಕೊಬ್ಬಿನಾಂಶ ಕಡಿಮೆ ಇರುತ್ತದೆ ಹಾಗೂ ಕಡಿಮೆ ಪ್ರಮಾಣದ ಕ್ಯಾಲೋರಿಗಳಿರುವುದರಿಂದ ಎಲ್ಲಾ ವಯಸ್ಸಿನವರೂ ತಿನ್ನುವಂತಹ ಪದಾರ್ಥವಾಗಿದೆ.
ವಿಶೇಷವೆಂದರೆ, ಮೆಕ್ಕೆಜೋಳವನ್ನು ನಮ್ಮೆದುರಿಗೇ ಹುರಿಯುವುದರಿಂದ ಯಾವುದ್ ರೀತಿಯ ರಸಾಯನಿಕಗಳ ಬೆರಕೆಗೆ ಅವಕಾಶ ಇರುವುದಿಲ್ಲ. ನಕಲಿ ಬಣ್ಣಗಳ ಬಳಕೆಯೂ ಇದಕ್ಕೆ ಅಗತ್ಯವಿರದ ಕಾರಣ ಹಾನಿಕಾರಕವಂತೂ ಅಲ್ಲ.
ಪಾಪ್‌ಕಾರ್ನ್‌ನಲ್ಲಿ ಶೇಂಗಾ ಹಾಗೂ ಪಾಲಕ್‌ಗಳಲ್ಲಿ ಇರುವುದಕ್ಕಿಂತ ಹೆಚ್ಚು ಕಬ್ಬಿಣದ ಅಂಶಗಳು ಇರುವುದು ದೃಢಪಟ್ಟಿದೆ. ನಮ್ಮ ದೇಹಕ್ಕೆ ಅಗತ್ಯವಾಗಿ ಬೇಕಾಗುವ ಕಾರ್ಬೋಹೈಡ್ರೇಟ್ ಶೇ. 71, ಪ್ರೋಟೀನ್ ಶೇ. 10.5, ಕೇವಲ ಶೇ. 3 ಕೊಬ್ಬು ಹಾಗೂ ಶೇ. 15ರಷ್ಟು ನೀರಿನಾಂಶ ಪಾಪ್‌ಕಾರ್ನ್‌ನಲ್ಲಿರುತ್ತದೆ.
ಪಾಪ್‌ಕಾರ್ನ್‌ನಲ್ಲಿ ಪಿಷ್ಠ ಇರುವುದರಿಂದ ಊಟಕ್ಕಿಂತ ಮೊದಲು ಇದನ್ನು ತಿನ್ನುವುದರಿಂದ ದೇಹಕ್ಕೆ ಅಗತ್ಯ ಸತ್ವ ದೊರೆಯುವುದರ ಜತೆಗೆ ಹೊಟ್ಟೆ ತುಂಬಿದ ಅನುಭವವನ್ನೂ ನೀಡಲಿದೆ.
ಡಯಟ್ ಪ್ರಿಯರಿಗೆ ಪಾಪ್‌ಕಾರ್ನ್ ಒಂದು ವರವಾಗಿದೆ ಎಂದರೂ ತಪ್ಪಾಗಲಾರದು. ಇತ್ತೀಚಿನ ದಿನಗಳಲ್ಲಿ ಪಾಪ್‌ಕಾರ್ನ್ ಡಯಟ್ ಕೂಡಾ ತುಂಬಾ ಜನಪ್ರಿಯವಾಗುತ್ತಿದೆ.
ಮೆಕ್ಕೆಜೋಳವನ್ನು ಮೈಕ್ರೋವೇವ್‌ನಲ್ಲಿ ಹುರಿದು ತಯಾರಿಸಿದ ಪಾಪ್‌ಕಾರ್ನ್‌ನಲ್ಲಿ ಕೇವಲ 4 ಗ್ರಾಂನಷ್ಟು ಕೊಬ್ಬಿನಾಂಶವಿರುತ್ತದೆ. ಸಿನಿಮಾ ಹಾಲ್‌ಗಳಲ್ಲಿ ದೊರೆಯುವ ಪಾಪ್‌ಕಾರ್ನ್‌ಗೆ ಬೆಣ್ಣೆ, ಉಪ್ಪು, ಮಸಾಲೆ ಹಾಕುವುದರಿಂದ ಕೊಬ್ಬಿನಾಂಶ ಸ್ವಲ್ಪ ಮಟ್ಟಿಗೆ ಹೆಚ್ಚಾಗಿರುತ್ತದೆ.
ಕೇವಲ ಬಿಸಿ ಹವೆಯಲ್ಲಿ ಹುರಿದ ಪಾಪ್‌ಕಾರ್ನ್‌ನಲ್ಲಿ ಕೇವಲ 30 ಕ್ಯಾಲೋರಿ ಇರುತ್ತದೆಂದು ಹೇಳಲಾಗಿದೆ.
ಆದರೂ, ಪಾಪ್‌ಕಾರ್ನ್ ಆರೋಗ್ಯಕರ ತಿನಿಸು ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಆದ್ದರಿಂದ ಕುಟುಂಬ ಸದಸ್ಯರೊಡಗೂಡಿ ಎಲ್ಲರೂ ಪಾಪ್‌ಕಾರ್ನ್ ತಿನ್ನಬಹುದಾಗಿದೆ.
Comments are closed.