ಕರಾವಳಿ

ಕುಂದಾಪುರದ ನೂಜಿ ಬಂಟ್ರಾಡಿ ಶಾಲಾ ಮಕ್ಕಳಿಗೆ ಕಾಟ ಕೊಡುತ್ತಿದೆ ಭೂತಬಂಗಲೆಯಂತಿರುವ ಅರಣ್ಯ ಇಲಾಖೆಯ ವಸತಿಗೃಹ

Pinterest LinkedIn Tumblr

ಚಿತ್ರ,ವರದಿ- ಯೋಗೀಶ್ ಕುಂಭಾಸಿ

ಕುಂದಾಪುರ: ಇಲ್ಲೊಂದು ಸುಸಜ್ಜಿತ ಶಾಲೆಯಿದೆ, ಪಕ್ಕದಲ್ಲಿಯೇ ಅಂಗನವಾಡಿಯೂ ಇದೆ. ಆದರೇ ಇವರೆಡರ ಮಧ್ಯೆ ದೃಷ್ಟಿಬೊಂಬೆಯಂತೆ ಉಪಯೋಗಕ್ಕಿಲ್ಲದ ಕಟ್ಟಡವಿದ್ದು ಸದ್ಯ ಅಪಾಯಕಾರಿಯಾಗಿ ಪರಿಣಮಿಸಿದೆ. ಕುಂದಾಪುರದ ಬೆಳ್ಳಾಲದ ನೂಜು ಬಂಟ್ರಾಡಿ ಎಂಬಲ್ಲಿನ ಅರಣ್ಯ ಇಲಾಖೆ ವಸತಿಗೃಹದಿಂದ ಮಕ್ಕಳಿಗಾಗುತ್ತಿರುವ ಸಮಸ್ಯೆ ಕುರಿತ ಸ್ಟೋರಿಯಿದು.

Kundapura_Keradi Nooju Bantradi_School Problem (6) Kundapura_Keradi Nooju Bantradi_School Problem (5) Kundapura_Keradi Nooju Bantradi_School Problem (1) Kundapura_Keradi Nooju Bantradi_School Problem (8)  Kundapura_Keradi Nooju Bantradi_School Problem (4) Kundapura_Keradi Nooju Bantradi_School Problem (3) Kundapura_Keradi Nooju Bantradi_School Problem (7)

ಕುಂದಾಪುರ ತಾಲೂಕಿನ ಅತೀ ಕುಗ್ರಾಮವಾದ ಕೆರಾಡಿ ಗ್ರಾಮಪಂಚಾಯತ್ ವ್ಯಾಪ್ತಿಯ ಬೆಳ್ಳಾಲದ ನೂಜು ಬಂಟ್ರಾಡಿಯ ಹಿರಿಯ ಪ್ರಾಥಮಿಕ ಶಾಲೆ ಊರಿಗೆ ಫೇಮಸ್ಸು. ಅದೆಷ್ಟೋ ಮಕ್ಕಳು ಇಲ್ಲಿ ಉತ್ತಮ ವಿಧ್ಯಾಭ್ಯಾಸ ಮಾಡಿ ಹೊರಹೋಗಿದ್ದಾರೆ. ಶಾಲೆ ಆವರಣದಲ್ಲಿಯೇ ಅಂಗನವಾಡಿಯೂ ಇರುವ ಕಾರಣ ಸ್ಥಳಿಯರಿಗೆ ಇನ್ನಷ್ಟು ಅನುಕೂಲವೂ ಆಗಿದೆ. ಸುಮಾರು ೮೫ಕ್ಕೂ ಅಧಿಕ ವಿದ್ಯಾರ್ಥಿಗಳಿರುವ ಈ ಶಾಲೆ ಈ ವರ್ಷದಿಂದ ಆಂಗ್ಲಮಾಧ್ಯಮದಿಂದ ಮಕ್ಕಳಿಗೆ ವಿದ್ಯಾಭ್ಯಾಸ ನೀಡುತ್ತಿದೆ. ಆದರೇ ಇಷ್ಟೇಲ್ಲಾ ಅನುಕೂಲವಿದ್ರೂ ಕೂಡ ಶಾಲೆಗೆ ಕಪ್ಪುಚುಕ್ಕೆಯಾಗಿ ಶಾಲೆ ಮಕ್ಕಳಿಗೆ ಅಪಾಯಕಾರಿಯಾಗಿರುವುದೇ ಯಾವುದೇ ಉಪಯೋಗಕ್ಕಿಲ್ಲದ ಅರಣ್ಯ ಇಲಾಖೆ ಸಿಬ್ಬಂದಿಗಳ ವಸತಿಗೃಹದ ಕಟ್ಟಡ.

ನೋಡಲು ಪಾಳುಬಿದ್ದ ಮನೆಯಂತಿರುವ ಈ ವಸತಿಗೃಹದ ಕಟ್ಟಡ ಐವತ್ತು ವರ್ಷಕ್ಕೂ ಹಿಂದಿನದಾಗಿದ್ದು ಸುಮಾರು ಹತ್ತು ವರ್ಷಗಳಿಂದ ಯಾರಿಗೂ ಉಪಯೋಗವಿಲ್ಲದೇ ಪಾಳುಬಿದ್ದಿದೆ. ಇಲ್ಲಿ ಯಾರೂ ಕೂಡ ವಾಸಿಸದೇ ಇರುವ ಕಾರಣ ಕಟ್ಟಡ ಸಂಪೂರ್ಣ ಶಿಥೀಲಗೊಂಡು ಹಾವುಚೇಳುಗಳ ವಾಸಸ್ಥಾನವಾಗಿದೆ. ಇನ್ನು ಕಟ್ಟಡದ ಮೇಲ್ಮಾಡು, ಪಕ್ಕಾಸೆಗಳು ಗೆದ್ದಲು ಹಿಡಿದು ಬೀಳುವ ಸ್ಥಿತಿ ತಲುಪಿದೆ. ಕಿಟಕಿಗಳು ಒಡೆದ ಸ್ಥಿತಿಯಲ್ಲಿದೆ, ಇನ್ನು ಕಟ್ಟಡದ ಪಂಚಾಗದ ಇಕ್ಕೆಲಗಳಲ್ಲಿ ದೊಡ್ಡದೊಡ್ಡ ರಂಧ್ರಗಳಾಗಿದ್ದು ಹಾವುಗಳು ಸೇರಿಕೊಂಡಿದೆಯಂತೆ. ಅಲ್ಲದೇ ಶೌಚಾಲಯದ ಹೊಂಡವು ಶಾಲಾ ಮೈದಾನದ ಮಧ್ಯಭಾಗದಲ್ಲೇ ಇದ್ದು ಅಪಾಯಕಾರಿ ಹಾಸುಗಲ್ಲು ಮಕ್ಕಳಿಗೆ ಸಮಸ್ಯೆ ಉಂಟುಮಾಡುತ್ತಿದೆ.

Kundapura_Keradi Nooju Bantradi_School Problem (9)

Kundapura_Keradi Nooju Bantradi_School Problem (2)

ಹತ್ತು ವರ್ಷಗಳಿಂದ ಯಾರೂ ಉಪಯೋಗಿಸದ ಈ ಕಟ್ಟಡ ಬೆಳ್ಳಾಲದ ನೂಜು ಬಂಟ್ರಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೈದಾನದ ಮಧ್ಯಭಾಗದಲ್ಲಿದೆ. ಮಕ್ಕಳು ಸ್ವಚ್ಚಂದವಾಗಿ ಆಟವಾಡಲು ಈ ಕಟ್ಟಡ ಕಾಟ ಕೊಡ್ತಿದೆ. ಅಷ್ಟೇ ಅಲ್ಲ….ಈಗಲೋ ಆಗಲೋ ಬೀಳುವ ಸ್ಥಿತಿಯಲಿರುವ ಕಟ್ಟಡ ನೂರಾರು ಮಕ್ಕಳಿಗೆ ಅಪಾಯಕಾರಿಯಾಗಿದ್ದು ಭಯದಿಂದಲೇ ಶಾಲೆಯ ಆಟೋಟದಲ್ಲಿ ತೊಡಗಿಸಿಕೊಳ್ಳಬೇಕಿದೆ. ಇದೆಲ್ಲಾ ಸಮಸ್ಯೆಗಳ ಕುರಿತು ಶಾಲೆಯ ಎಸ್.ಡಿ.ಎಂ.ಸಿ. ಅವರು ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ಹಲವು ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಕೂಡ ಕಟ್ಟಡ ತೆರವಿನ ಆಶ್ವಾಸನೆ ಸಿಕ್ಕಿದೆಯೇ ಹೊರತು ಈವರೆಗೂ ತೆರವು ಕಾರ್ಯ ಮಾತ್ರ ಆಗಿಲ್ಲ. ಇನ್ನು ಶಾಲೆಯ ಎಸ್.ಡಿ.ಎಂ.ಸಿ.ಯಿಂದ ನಿರ್ಣಯ ಮಾಡಿ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ನೀಡಿ ಅವರ ಮುಖಾಂತರ ಜಿಲ್ಲಾಪಂಚಾಯತಿಗೆ ಮೂಲಕ ಕಟ್ಟಡ ತೆರವಿಗೆ ನಿರ್ಣಯ ಮಾಡಿ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಕಳುಹಿಸಿದರೂ ಕೂಡ ಇಷ್ಟರವರೆಗೆ ಯಾವುದೇ ಪ್ರತಿಕ್ರಿಯೆಯೂ ಬಂದಿಲ್ಲ. ಶಾಲೆಯ ಮುಂಭಾಗದ ಜಾಗ ಅರಣ್ಯ ಇಲಾಖೆಯದ್ದೇ ಆಗಿದ್ದು ಅಲ್ಲಿ ಅವರು ಕಟ್ಟಡ ಕಟ್ಟಬಹುದು ಎನ್ನುವುದು ಶಾಲಾಭಿವೃದ್ಧಿ ಸಮಿತಿಯವರ ವಾದವಾಗಿದೆ.

ಒಟ್ಟಿನಲ್ಲಿ ಮಳೆಗಳಿಗೆ ಕಟ್ಟಡ ಬಿದ್ದು ಅನಾಹುತವಾಗುವ ಮುನ್ನ ಸಂಬಂದಪಟ್ಟವರು ಪರಿಸ್ಥಿತಿಯ ಗಂಭೀರತೆಯನ್ನು ಮನಗೊಂಡು ಸಮಸ್ಯೆಗೆ ಪರಿಹಾರ ನೀಡುತ್ತಾರೆಯೇ ಕಾದುನೋಡಬೇಕಿದೆ.

Comments are closed.