ಕರಾವಳಿ

ಗ್ಯಾಸ್ ತುಂಬಿದ ಟ್ಯಾಂಕರ್ ಡಿವೈಡರ್‌ಗೆ ಢಿಕ್ಕಿ ಹೊಡೆದು ಟಯರ್ ಸ್ಫೋಟ..

Pinterest LinkedIn Tumblr

pumwel_tankr_accident_1

ಮಂಗಳೂರು, ಜೂ.2: ಗ್ಯಾಸ್ ಟ್ಯಾಂಕರ್ ಬ್ರೇಕ್ ವೈಫಲ್ಯಗೊಂಡು ಟಯರ್ ಸ್ಫೋಟಗೊಂಡ ಘಟನೆ ಇಂದು ಮಧ್ಯಾಹ್ನ ನಗರದ ಪಂಪ್‌ವೆಲ್ ವೃತ್ತದ ಬಳಿ ನಡೆದಿದ್ದು, ಚಾಲಕನ ಸಮಯ ಪ್ರಜ್ಞೆಯಿಂದ ಟ್ಯಾಂಕರ್‌ನಲ್ಲಿ ತುಂಬಿದ್ದ ಗ್ಯಾಸ್ ಸೋರಿಕೆಯಾಗದೇ ಭಾರೀ ಅನಾಹುತವೊಂದು ತಪ್ಪಿದೆ.

ಪಣಂಬೂರಿನಿಂದ ತಮಿಳುನಾಡು ಹೋಗುತ್ತಿದ್ದ ಗ್ಯಾಸ್ ಟ್ಯಾಂಕರ್ ಪಂಪ್‌ವೆಲ್ ವೃತ್ತದ ಬಳಿ ಬ್ರೇಕ್‌ಫೇಲ್‌ಗೊಂಡು ಚಾಲಕನ ನಿಯಂತ್ರಣ ತಪ್ಪಿದೆ. ತಕ್ಷಣ ಟ್ಯಾಂಕರ್‌ ಚಾಲಕ ಸಂಭವಿಸಬಹುದಾದ ಬಾರೀ ಅನಾಹುತ ತಪ್ಪಿಸುವ ನಿಟ್ಟಿನಲ್ಲಿ ವಾಹನವನ್ನು ಸಂಪೂರ್ಣವಾಗಿ ತಿರುಗಿಸಿ ಅಲ್ಲಿದ್ದ ಡಿವೈಡರ್‌ಗೆ ಢಿಕ್ಕಿ ಹೊಡೆದಿದ್ದಾನೆ. ಈ ಸಂದರ್ಭ ಟ್ಯಾಂಕರ್‌ನ ಟಯರ್ ಸ್ಫೋಟಗೊಂಡಿತ್ತಾದರೂ, ಯಾವೂದೇ ಅನಾಹುತ ಸಂಭವಿಸಲಿಲ್ಲ. ಆದರೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಮಾರು ಅರ್ಧ ತಾಸಿಗೂ ಹೆಚ್ಚು ಸಮಯ ವಾಹನ ಸಂಚಾರಕ್ಕೆ ಅಡಚಣೆಯುಂಟಾಯಿತು.

pumwel_tankr_accident_2

ಸಂಚಾರ ದಟ್ಟವಾಗಿರುವ ಪಂಪ್‌ವೆಲ್ ಜಂಕ್ಷನ್‌ನಲ್ಲಿ ಟ್ಯಾಂಕರ್ ರಸ್ತೆಗೆ ಅಡ್ಡವಾಗಿ ನಿಂತ ಪರಿಣಾಮದಿಂದಾಗಿ ಕೆಲ ಹೊತ್ತು ವಾಹನ ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು. ಪ್ರಯಾಣಿಕರು ಮತ್ತಷ್ಟು ತೊಂದರೆ ಎದುರಿಸಬೇಕಾಯಿತು. ರಾಷ್ಟ್ರೀಯ ಹೆದ್ದಾರಿಯಾಗಿರುವ ಐದಾರು ಪ್ರಮುಖ ರಸ್ತೆಗಳ ಕೂಡು ರಸ್ತೆಯಾಗಿರುವ ಪಂಪ್‌ವೆಲ್‌ನಲ್ಲಿ ಈ ಘಟನೆ ಸಂಭವಿಸಿದ ಕಾರಣ ಸುಗಮ ಸಂಚಾರಕ್ಕೆ ಅಡ್ಡಿಯಾಯಿತು.

ಟ್ಯಾಂಕರ್ ಬ್ರೇಕ್ ವೈಫಲ್ಯಕ್ಕೆ ಕಾರಣ ತಿಳಿದು ಬಂದಿಲ್ಲ. ಗ್ರಾಮಾಂತರ ಠಾಣಾ ಪೊಲೀಸರು ಹಾಗೂ ಸಂಚಾರಿ ಪೊಲೀಸರು ತಕ್ಷಣ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ನಿಯಂತ್ರಿಸುವ ಮೂಲಕ ವಾಹನಗಳ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು.

Comments are closed.