ಕರಾವಳಿ

ಬಾಳಿಗಾ ಹತ್ಯೆ ಪ್ರಕರಣ : ಮಂಜುನಾಥ ಶೆಣೈಗೆ ಶರತ್ತುಬದ್ಧ ಜಾಮೀನು ಮಂಜೂರು

Pinterest LinkedIn Tumblr

Baliga_Protest_Meravang_2

ಮಂಗಳೂರು, ಮೇ 31: ಆರ್‌ಟಿಐ ಕಾರ್ಯಕರ್ತ ಬಾಳಿಗಾ ಹತ್ಯೆ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ರವಿವಾರ ಪೊಲೀಸರಿಂದ ಬಂಧಿಸಲ್ಪಟ್ಟ ಮಂಜುನಾಥ ಶೆಣೈ ಯಾನೆ ಮಂಜು ಎಂಬಾತನಿಗೆ ಸೋಮವಾರ ಜಿಲ್ಲಾ ನ್ಯಾಯಾಲಯವು ಶರತ್ತು ಬದ್ಧ ಜಾಮೀನು ನೀಡಿದೆ.

ಬಾಳಿಗಾ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ನಮೋ ಬ್ರಿಗೇಡ್ ಸಂಸ್ಥಾಪಕ ನರೇಶ್ ಶೆಣೈಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದ ಹಾಗೂ ಆತನಿಗೆ ನೆರವು ನೀಡುತ್ತಿದ್ದ ಮತ್ತು ನರೇಶ್ ಶೆಣೈಯನ್ನು ಅಡಗಿಕೊಳ್ಳಲು, ಆತನ ಅಡಗುದಾಣ ಬದಲಾಯಿಸಲು ಸಹಾಯ ಮಾಡುತ್ತಿದ್ದ ಎಂಬ ಆರೋಪದಲ್ಲಿ ಮಂಗಳೂರು ಸಿಸಿಬಿ ಇನ್ಸ್ ಪೆಕ್ಟರ್ ರವರ ತಂಡ ಮಂಜುನಾಥ ಶೆಣೈಯನ್ನು ರವಿವಾರ ವಿಚಾರಣೆಗಾಗಿ ವಶಕ್ಕೆ ಪಡೆದಿದ್ದರು.

ಸೋಮವಾರ ಪೊಲೀಸರು ಮಂಜುನಾಥನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆತನಿಗೆ ಶರತ್ತುಬದ್ಧ ಜಾಮೀನು ನೀಡಿದೆ.

ಬಾಳಿಗಾ ಹತ್ಯೆ ಪ್ರಕರಣ : ಒಟ್ಟು ಐವರ ಬಂಧನ :

ಮಾಹಿತಿ ಹಕ್ಕು ಕಾರ್ಯಕರ್ತ ಬಾಳಿಗ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ 4 ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ., ಇದೀಗ ಮೇ 29ರಂದು ಮಂಜು ಎಂಬವರನ್ನು ಬಂಧಿಸುವ ಮೂಲಕ ಈ ಪ್ರಕರಣದಲ್ಲಿ ಬಂಧಿತರಾದ ಆರೋಪಿಗಳ ಸಂಖೆ 5 ಕ್ಕೇರಿದೆ.

ಮಾರ್ಚ್ 21ರಂದು ಮಂಗಳೂರು ನಗರದ ಬೆಸೆಂಟ್ ಕಾಲೇಜಿನ ಸಮೀಪ, ಪಿ.ವಿ.ಎಸ್.ಕಲಾಕುಂಜದ ಎದುರಿನ ಓಣಿಯೊಂದರಲ್ಲಿ ವಿನಾಯಕ ಪಾಂಡುರಂಗ ಬಾಳಿಗರನ್ನು ಅವರ ನಿವಾಸದ ಎದುರೆ ದುಷ್ಕರ್ಮಿಗಳು ಹತ್ಯೆಗೈದಿದ್ದರು. ಮಾರ್ಚ 21ರಂದು ವಿನಾಯಕ ಪಾಂಡುರಂಗ ಬಾಳಿಗರವರು ಪ್ರತೀ ದಿನದಂತೆ ಬೆಳಿಗ್ಗೆ 05-45 ಗಂಟೆಗೆ ವೆಂಕಟರಮಣ ದೇವಸ್ಥಾನಕ್ಕೆ ಹೋಗಲು ತನ್ನ ಸ್ಕೂಟರ್ ಹೋಂಡಾ ಪ್ಲೆಸರ್ ಕೆ.ಎ.19.ಇ.ಡಿ 3098 ರಲ್ಲಿ ಮನೆಯಿಂದ ಹೊರಟು ಸುಮಾರು 75 ಮೀಟರ್ ದೂರ ಹೋಗುವಷ್ಟರಲ್ಲಿ ವಿನಾಯಕ ಪಾಂಡುರಂಗ ಬಾಳಿಗರನ್ನು ತಡೆದು ನಿಲ್ಲಿಸಿದ ಮೂವರು ವ್ಯಕ್ತಿಗಳು ಯದ್ವಾತದ್ವಾ ತಲವಾರಿನಿಂದ ಕಡಿದು ಅವರು ಬಂದ ಬೈಕ್ ನಲ್ಲಿ ಪರಾರಿಯಾಗಿದ್ದರು,

ಈ ಕೃತ್ಯಕ್ಕೆ ಸಂಬಂಧಿಸಿ ಮಂಗಳೂರು ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿ ವಿನಿತ್ ಪೂಜಾರಿ, ನಿಶಿತ್ ದೇವಾಡಿಗ, ಶಿವ @ ಶಿವಪ್ರಸಾದ್, ಶೈಲೇಶ್ @ ಶೈಲು ಹಾಗೂ ಇದೀಗ ಮಂಜು ಸೇರಿದಂತೆ ಐವರನ್ನು ಬಂಧಿಸಲಾಗಿದೆ. ಪ್ರಕರಣದಲ್ಲಿ ಉಳಿದ ಆರೋಪಿಗಳ ಪತ್ತೆ ಕಾರ್ಯ ಮುಂದುವರಿದಿರುತ್ತದೆ.

Comments are closed.