ಅಂತರಾಷ್ಟ್ರೀಯ

ವಾಟ್ಸಪ್ ಬಳಕೆದಾರರೇ ಎಚ್ಚರ ! ವಾಟ್ಸಪ್ ನಲ್ಲಿ ಹರಿದಾಡುವ ನಕಲಿ ಸಂದೇಶಗಳ ಲಿಂಕ್ ಕ್ಲಿಕ್ ಮಾಡಿ ವೈರಸ್‌ಗೆ ಬಲಿಯಾಗದಿರಿ…

Pinterest LinkedIn Tumblr

watsapp virus

ಸಾಮಾಜಿಕ ತಾಣಗಳಲ್ಲಿ ಲಭಿಸುವ ಸಂದೇಶಗಳ ಪೂರ್ವಾಪರ ತಿಳಿದುಕೊಳ್ಳದೆ ಕ್ಲಿಕ್ ಮಾಡಿ ಎಡವಟ್ಟು ಮಾಡಿಕೊಳ್ಳುವ ಮಂದಿ ನಮ್ಮ ನಡುವೆ ಇದ್ದೇ ಇರುತ್ತಾರೆ. ಇಂಥಾ ಫೇಕ್ ಸಂದೇಶಗಳು ಹೆಚ್ಚಾಗಿ ವಾಟ್ಸಪ್ನಲ್ಲಿ ಹೆಚ್ಚಾಗಿ ಹರಡುತ್ತವೆ. ಇತ್ತೀಚೆಗೆ ವಾಟ್ಸಪ್ ನಲ್ಲಿ ಅಲ್ಟ್ರಾ ಲೈಟ್ ವೈಫೈ ವೈಶಿಷ್ಟ್ಯದಿಂದ ಕೂಡಿದ ಸೇವೆ ನಿಮ್ಮ ಸ್ಮಾರ್ಟ್ ಫೋನ್ ನಲ್ಲಿ ಲಭಿಸುವಂತೆ ಮಾಡಲು ಕೆಳಗೆ ನೀಡಿರುವ ಲಿಂಕ್ ಕ್ಲಿಕ್ ಮಾಡಿ ಎಂಬ ಸಂದೇಶವೊಂದು ಹರಿದಾಡಿತ್ತು. ಇಂಥಾ ಸಂದೇಶಗಳನ್ನು ವಾಟ್ಸಾಪ್ ಸಂಸ್ಥೆ ಕಳಿಸುವುದಿಲ್ಲ ಎಂದು ತಿಳಿಯದಿರುವ ಮಂದಿ ಈ ಲಿಂಕ್ ಕ್ಲಿಕ್ ಮಾಡಿ ತಮ್ಮ ಫೋನ್‌ಗೆ ವೈರಸ್‌ನ್ನು ಆಹ್ವಾನಿಸಿದ್ದಾರೆ.

ಅದ್ಯಾವುದೇ ಲಿಂಕ್‌ಗಳೊಂದಿಗೆ ಬರುವ ಸಂದೇಶಗಳ ಪೂರ್ವಪರ ತಿಳಿಯದೆ ಕ್ಲಿಕ್ ಮಾಡಿದರೆ, ವೈರಸ್‌ಗಳನ್ನು ಸ್ವತಃ ನೀವೇ ಬಳಿ ಕರೆದುಕೊಂಡಂತಾಗುತ್ತದೆ.

ಇನ್ನೊಂದು ಸಂದೇಶದ ಒಕ್ಕಣೆ ಹೀಗಿದೆ…
ಈ ಸಂದೇಶದಲ್ಲಿ ಕ್ಲಿಕ್ ಮಾಡಿದಾಗ ಈ ಸೇವೆಯನ್ನು ನಿಮ್ಮದಾಗಿಸಿಕೊಳ್ಳಬೇಕಾದರೆ 15 ಮಂದಿಗೆ ಈ ಸಂದೇಶ ಕಳಿಸಿ ಆಮಂತ್ರಿಸಿ ಎಂದು ಹೇಳಿರುತ್ತದೆ. ನೀವೆಲ್ಲಿಯಾದರೂ 15 ಮಂದಿಯನ್ನು ಆಮಂತ್ರಿಸಿದ್ದಾದರೆ ಆ 15 ಮಂದಿಗೂ ಸ್ಪಾಮ್ ಸಂದೇಶಗಳು ರವಾನೆಯಾಗುತ್ತದೆ. ಅಷ್ಟೇ ಅಲ್ಲ ವಿವಿಧ ಆನ್‌ಲೈನ್ ಸಮೀಕ್ಷಾ ಪೋರ್ಟಲ್‌ಗಳಿಗೆ ಈ ವಿಷಯ ರವಾನೆಯಾಗುವುದು ಮಾತ್ರವಲ್ಲದೆ ನಿಮ್ಮ ಫೋನ್‌ನಲ್ಲಿರುವ ರಹಸ್ಯ ವಿಷಯಗಳೂ ಸೋರಿಕೆಯಾಗುವ ಸಾಧ್ಯತೆ ಇವೆ.

ಸಂದೇಶದಲ್ಲಿ ಹೇಳಿದಂತೆ 15 ಮಂದಿಗೆ ಇನ್ವಿಟೇಷನ್ ಕಳುಹಿಸಿ ಆಕ್ಟಿವೇಷನ್ ಬಟನ್ ಕ್ಲಿಕ್ ಮಾಡಿದ ಕೂಡಲೇ ನೀವು ಒಂದು ಅಥವಾ ಅದಕ್ಕಿಂತ ಹೆಚ್ಚು ಆನ್‌ಲೈನ್ ಸರ್ವೆ (ಸಮೀಕ್ಷೆ)ಯಲ್ಲಿ ಭಾಗವಹಿಸಿ ಆ ಹಂತವನ್ನೂ ಪೂರ್ಣಗೊಳಿಸಬೇಕೆಂಬ ಸಂದೇಶ ಲಭಿಸುತ್ತದೆ.

ಈ ಸಮೀಕ್ಷೆಗಳಲ್ಲಿ ನೀವು ನಿಮ್ಮ ಹೆಸರು, ಇಮೇಲ್ ಐಡಿ, ವಿಳಾಸವನ್ನು ನಮೂದಿಸುವಂತೆ ಹೇಳಲಾಗುತ್ತದೆ. ಈ ಸಮೀಕ್ಷೆಗಳಲ್ಲಿ ನೀವು ನಮೂದಿಸಿರುವ ಇಮೇಲ್ ಐಡಿ ಸ್ಪಾಮ್‌ಗೆ ಆಹಾರವಾಗುತ್ತದೆ. ಹೀಗಾಗುವಾಗ ನಿಮ್ಮ ಇನ್‌ಬಾಕ್ಸ್‌ಗೆ ಈ ಸರ್ವೇ ಸಾಫ್ಟ್‌ವೇರ್ ಯಾವುದಾದರೂ ಮೇಲ್ ಮೂಲಕ ನುಸುಳಿ ನಿಮ್ಮ ಇಮೇಲ್ ಐಡಿ ಹ್ಯಾಕ್ ಆಗುವ ಸಾಧ್ಯತೆಯಿದೆ. ನಿಮ್ಮ ಮೇಲ್ ಐಡಿ ಹ್ಯಾಕ್ ಆದರೆ ನಿಮ್ಮ ಅಡ್ರೆಸ್ ಲಿಸ್ಟ್ ನಲ್ಲಿರುವ ಎಲ್ಲರಿಗೂ ನಿಮ್ಮ ಅಕೌಂಟ್ ನಿಂದ ಸ್ಪಾಮ್ ಇಮೇಲ್ ರವಾನೆಯಾಗುತ್ತದೆ.

ಹೀಗೆ ಯಾವುದೇ ಲಿಂಕ್ ಬಂದರೂ ಅದನ್ನು ಕ್ಲಿಕ್ ಮಾಡುವ ಮೂಲಕ ನಿಮ್ಮ ಸ್ಮಾರ್ಟ್‌ಫೋನ್ ಅಥವಾ ಕಂಪ್ಯೂಟರ್‌ನಲ್ಲಿ ಮಾಲ್‌ವೇರ್‌ಗಳಿಗೆ ನೀವೇ ದಾರಿ ಮಾಡಿಕೊಟ್ಟಂತಾಗುತ್ತದೆ.

ಗಮನಿಸಿ: ಫೇಸ್‌ಬುಕ್ ಅಥವಾ ವಾಟ್ಸಪ್ ಸಾಮಾಜಿಕ ತಾಣಗಳು ಹೊಸ ಸೇವೆಗಳನ್ನು ನೀಡುವುದಾದರೆ ಆ ವಿಷಯವನ್ನು ಅವರ ಅಧಿಕೃತ ವೆಬ್‌ಸೈಟ್ ಅಥವಾ ಬ್ಲಾಗ್‌ನಲ್ಲಿ ಪ್ರಕಟಿಸುತ್ತವೆ. ಹೊಸ ಸೇವೆಗಳ ಬಗ್ಗೆ ಮಾಧ್ಯಮಗಳೂ ಸುದ್ದಿ ಮಾಡುತ್ತವೆ. ಆದಾಗ್ಯೂ, ಸಂದೇಶದ ಮೇಲೆ ಕ್ಲಿಕ್ ಮಾಡುವ ಮುನ್ನ ಆ ಸಂದೇಶ ನಿಜವೇ? ಎಂಬುದನ್ನು ಪರಿಶೀಲಿಸಬೇಕು. ಫ್ರೀ ರೀಚಾರ್ಜ್, ಫ್ರೀ ಎಸ್‌ಎಂಎಸ್ ಸಿಗುತ್ತದೆ ಎಂಬ ಆಫರ್‌ಗಳೊಂದಿಗೆ ಬರುವ ಸಂದೇಶಗಳಲ್ಲಿರುವ ಲಿಂಕ್ ಕ್ಲಿಕ್ ಮಾಡುವ ಮುನ್ನ ಗಮನಿಸಿ…

ಅವು ಫೇಕ್ ಮೆಸೇಜ್‌ಗಳಾಗಿದ್ದು, ಆ ಒಂದು ಕ್ಲಿಕ್ ನಿಮ್ಮ ಸ್ಮಾರ್ಟ್‌ಫೋನ್ ನಲ್ಲಿರುವ ಮಾಹಿತಿಗಳನ್ನು ನಿಮಗೆ ಗೊತ್ತಿಲ್ಲದಂತೆ ಕದಿಯಬಲ್ಲದು!

Write A Comment