ಕುಂದಾಪುರ: ಕುಂದಾಪುರ ತಾಲೂಕಿನಾದ್ಯಂತ ಶನಿವಾರ ರಾತ್ರಿ ಹಾಗೂ ಭಾನುವಾರ ಮುಂಜಾನೆಯಿಂದ ಸತತವಾಗಿ ಸುರಿದ ಮಳೆಯಿಂದಾಗಿ ತಾಲೂಕಿನ ಪಂಚಗಂಗಾವಳಿ ನದಿಗಳು ಉಕ್ಕಿ ಹರಿಯುತ್ತಿದ್ದು, ನದಿಪಾತ್ರದ ಪ್ರದೇಶಗಳಲ್ಲಿ ನೆರೆ ಕಂಡು ಬಂದಿದ್ದು ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ತಗ್ಗು ಪ್ರದೇಶಗಳು ಜಲಾವೃತಗೊಂಡಿದೆ. ಕೆಲವು ಕಡೆ ಕೃತಕ ನೆರೆಯಿಂದಾಗಿ ಜನಸಂಚಾರ ಹಾಗೂ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು. ಮಳೆ ಹಾನಿಗೆ ಓರ್ವ ಸಾವನ್ನಪ್ಪಿದ ಘಟನೆಯೂ ನಡೆದಿದೆ.

ಭಾನುವಾರ ಸುರಿದ ಭಾರೀ ಮಳೆಯಿಂದಾಗಿ ಕುಂದಾಪುರ ತಾಲೂಕಿನಾದ್ಯಂತ 2325 ಎಕರೆ ಪ್ರದೇಶದ ಕೃಷಿಭೂಮಿಗಳು ಸಂಪೂರ್ಣ ಜಲಾವೃತಗೊಂಡಿದ್ದು ಕೃಷಿ ಇಲಾಖೆ, ಕಂದಾಯ ಇಲಾಖೆ ಹಾಗೂ ಮೆಸ್ಕಾಂ ಇಲಾಖೆಗಳ ಅಂದಾಜಿನ ಪ್ರಕಾರ ಸುಮಾರು 45 ಲಕ್ಷ ಅಂದಾಜು ನಷ್ಟ ಸಂಭವಿಸಿದೆ. ಶಿರೂರು ಪ್ರದೇಶದಲ್ಲಿ 7 ಜಾನುವಾರುಗಳು ಹಾಗೂ ನಾವುಂದದಲ್ಲಿ 2 ಜಾನುವಾರುಗಳು ಕಣ್ಮರೆಯಾಗಿರುವ ಬಗ್ಗೆಯೂ ಮಾಹಿತಿಯಿದೆ. ತಾಲೂಕಿನಲ್ಲಿ ಮಳೆ ಹಾಗೂ ಗಾಳಿಯ ಹೊಡೆತಕ್ಕೆ ಸಿಕ್ಕು ಆರು ಮನೆಗಳು ಹಾನಿಗೊಳಗಾಗಿದ್ದು ಅವುಗಳ ಪೈಕಿ ಮೂರು ಮನೆಗಳು ಸಂಪೂರ್ಣ ಹಾಗೂ ಮೂರು ಮನೆಗಳು ಭಾಗಶಃ ಹಾನಿಗೊಳಗಾಗಿದೆ. ಉಳಿದಂತೆ ಕೆಲವಾರು ಮನೆಗಳ ಗೃಹೋಪಯೋಗಿ ವಸ್ತುಗಳು, ದಿನಸಿ ಸಾಮಾನುಗಳು, ಅಕ್ಕಿ ಮೊದಲಾದವುಗಳು ಮಳೆಯಿಂದ ಹಾನಿಗೊಳಗಾದ ಬಗ್ಗೆಯೂ ಮಾಹಿತಿಯಿದೆ.
20 ದಿನದ ಮಗು ಹಾಗೂ ಬಾಣಂತಿ ರಕ್ಷಣೆ: ಭಾನುವಾರ ರಾತ್ರಿ ಸುಮಾರಿಗೆ ಉಡುಪಿ ತಾಲೂಕಿನ ಶಿರಿಯಾರ ಕೊಳ್ಕೆಬೈಲು ಎಂಬಲ್ಲಿ ಕೆಲವು ಮನೆಗಳು ನೆರೆಯಿಂದ ಜಲಾವೃತಗೊಂಡು ಮನೆಗಳಿಗೆ ನೀರು ನುಗ್ಗಿತ್ತು. ಈ ಹಿನ್ನೆಲೆಯಲ್ಲಿ ಕೋಟ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಸಹಾಯಕ್ಕಾಗಿ ತೆಕ್ಕಟ್ಟೆ ಫ್ರೆಂಡ್ಸ್ಗೆ ಕರೆಮಾಡಿದ್ದು ಕೂಡಲೇ ದೋಣಿ ವ್ಯವಸ್ಥೆ ಮಾಡಿಕೊಂಡು ತಮ್ಮ ‘ಗೆಳೆಯ ಆಂಬುಲೆನ್ಸ್ನ್ನು ತೆಗೆದುಕೊಂಡು ಇವರ ತಂಡ ಕೊಳ್ಕೆಬೈಲಿಗೆ ತೆರಳಿದೆ. ಅಷ್ಟೊತ್ತಿಗಾಗಲೇ ಪೊಲೀಸರು ಹಾಗೂ ಅಗ್ನಿಶಾಮಕದಳ ಕಾರ್ಯನ್ಮುಖರಾಗಿದ್ದು ದೋಣಿಯ ಮೂಲಕ ಸಂಘದ ಸದಸ್ಯರು ರಕ್ಷಣಾ ಕಾರ್ಯಾಚರಣೆಗೆ ಮುಂದಾಗುತ್ತಾರೆ. ಈ ಸಂದರ್ಭ 20 ದಿನಗಳ ಹಸುಗೂಸು, ಬಾಣಂತಿ ತಾಯಿ, 80 ವರ್ಷದ ವೃದ್ಧೆ, 4 ವರ್ಷದ ಮಗು ಸೇರಿದಂತೆ ಹತ್ತಕ್ಕೂ ಹೆಚ್ಚು ಜನರನನು ದೋಣಿ ಮೂಲಕ ಕರೆತಂದು ಸುರಕ್ಷಿತ ಸ್ಥಳಕ್ಕೆ ಅವರನ್ನು ಬಿಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಬೆಳಿಗ್ಗೆ 4 ಗಂಟೆವರೆಗೂ ಈ ರಕ್ಷಣಾ ಕಾರ್ಯ ಮುಂದುವರೆದಿದ್ದು ಕುಂದಾಪುರ ಅಗ್ನಿಶಾಮಕ ದಳ, ಕೋಟ ಪೊಲೀಸರು, ತೆಕ್ಕಟ್ಟೆ ಫ್ರೆಂಡ್ಸ್ ತೆಕ್ಕಟ್ಟೆ (ರಿ.) ಇದರ ಸದಸ್ಯರು, ಜೈ ಭಾರ್ಗವ ಸಂಘದವರು ಇದ್ದರು.
ತಾಲೂಕಿನಲ್ಲಿ ಹರಿಯುತ್ತಿರುವ ನದಿಗಳ ನೀರಿನ ಮಟ್ಟ ಹೆಚ್ಚುತ್ತಿದ್ದು ನದಿ ಪಕ್ಕದ ತಗ್ಗು ಪ್ರದೇಶಗಳು ಹಾಗೂ ಕೃಷಿ ಭೂಮಿಗಳು ಜಲಾವೃತಗೊಂಡಿದೆ. ನದಿಯ ನೀರು ಅಪಾಯದ ಮಟ್ಟದಲ್ಲಿ ಉಕ್ಕಿ ಹರಿಯುತ್ತಿದ್ದು ಅರಾಟೆ, ಕಳವಿನಬಾಗಿಲು, ಮೂವತ್ತುಮುಡಿ, ಕನ್ನಡಕುದ್ರು, ಮರವಂತೆ ಸಾಲ್ಬುಡ, ಸೇನಾಪುರ, ರಾತಿಬೇರು, ಹಕ್ಲಾಡಿ, ಬಟ್ಟೆಕುದ್ರು, ಚುಂಗಿಗುಡ್ಡೆ, ಹಡವು, ಕುರು, ಕೋಣ್ಕಿ, ಬಡಾಕೆರೆ, ಪಡುಕೋಣೆ ಸಹಿತ ಹಲವೆಡೆ ನೆರೆ ಕಾಣಿಸಿಕೊಂಡಿದ್ದು, ಗ್ರಾಮಗಳಲ್ಲಿ ನೆರೆ ತನ್ನ ಉಗ್ರ ಸ್ವರೂಪ ತೋರಿದೆ.
ನೆರೆ ಹಾವಳಿಯಿಂದ ಮೂವತ್ತುಮುಡಿ-ಕನ್ನಡಕುದ್ರು, ಬಂಟ್ವಾಡಿ-ಪಡುಕೋಣೆ, ನಾವುಂದ-ಬಡಾಕೆರೆ-ಪಡುಕೋಣೆ ನಡುವಿನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದ್ದು, ಈ ಪ್ರದೇಶಗಳಲ್ಲಿ ಜನರು ಜಲದಿಗ್ಭಂದನದಲ್ಲಿದ್ದಾರೆ. ಹಲವೆಡೆ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸಾಗಿಸಲಾಗಿದ್ದು, ಜಾನುವಾರು ಮತ್ತಿತರ ವಸ್ತುಗಳನ್ನು ಸುರಕ್ಷಿತ ಸ್ಥಳಗಳಿಗೆ ಸಾಗಿಸುವ ಕಾರ್ಯ ಭರದಿಂದ ಸಾಗಿದೆ. ಕಂದಾಯ ಇಲಾಖೆಯ ಅಧಿಕಾರಿಗಳು, ಪೊಲೀಸ್ ಇಲಾಖೆಯ ಅಧಿಕಾರಿಗಳು, ಅಗ್ನಿಶಾಮಕ ದಳದ ಅಧಿಕಾರಿಗಳು ರಕ್ಷಣಾ ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದಾರೆ.
ಬೀಜಾಡಿ, ಕೋಟೇಶ್ವರ, ಕೋಣಿ, ಆನಗಳ್ಳಿ, ತೆಕ್ಕಟ್ಟೆ, ಕುಂದಾಪುರ, ತಲ್ಲೂರು, ಹೇರಿಕುದ್ರು ಮೊದಲಾದ ಕಡೆಗಳಲ್ಲಿ ಕೃಷಿಭೂಮಿಯಲ್ಲಿ ವ್ಯಾಪಕ ಪ್ರಮಾಣದಲ್ಲಿ ಮಳೆ ನೀರು ನಿಂತು ಕೊಂಡಿದ್ದು, ಮಧ್ಯಾಹ್ನದ ಬಳಿಕ ಕೊಂಚ ಇಳಿಮುಖವಾಗಿದೆ. ಭಾನುವಾರ ರಾತ್ರಿಯಿಂದ ಮಳೆ ಇಳಿಕೆಯಾದುದರಿಂದ ನೆರೆ ಹಾವಳಿ ಪ್ರದೇಶಗಳಲ್ಲಿ ನೀರಿ ಮಟ್ಟದಲ್ಲಿ ಇಳಿಕೆಯಾಗುತ್ತಿದ್ದು, ರಕ್ಷಣಾ ಕಾರ್ಯ ನಡೆಯುತ್ತಿದೆ. ಮೊಳಹಳ್ಳಿಯಲ್ಲಿ ವಾರಾಹಿ ಕಾಲುವೆ ಒಡೆದು ಹೋಗಿರುವ ಕಾರಣದಿಂದ ವ್ಯಾಪಕ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು ತಾಲೂಕಿನ ಪ್ರಮುಖ ನದಿಗಳಾದ ಸೌಪರ್ಣಿಕಾ, ವಾರಾಹಿ, ಚಕ್ರಾ, ಕುಬ್ಜಾ ಹಾಗೂ ಖೇಟಾ ನದಿಗಳು ಉಕ್ಕಿ ಹರಿಯುತ್ತಿದೆ.

































































