ಕರಾವಳಿ

ಚಿದು ಬರೆಯುವ ಪ.ಗೋ ಸರಣಿ-11: ಪತ್ರಕರ್ತರ ಸಂಘದ ಸ್ಥಾಪನೆಯ ಸೂತ್ರಧಾರ

Pinterest LinkedIn Tumblr

SKWJA inaguration function  06 Oct 1976

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾರ್ಯನಿರತ ಪತ್ರಕರ್ತರ ಸಂಘವನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧೀನದಲ್ಲಿ ಅಸ್ತಿತ್ವಕ್ಕೆ ತಂದವರಲ್ಲಿ ಪ.ಗೋ ಸ್ಥಾಪಕ ಕಾರ್ಯದರ್ಶಿ ಮತ್ತು ಕೆ.ಎಸ್.ಉಪಾಧ್ಯಾಯ ಅಧ್ಯಕ್ಷರು ಎನ್ನುವುದನ್ನು ಗಮನಿಸಬೇಕಾಗಿದೆ. ಆ ಕಾಲದಲ್ಲಿ ವಡ್ಡರ್ಸೆ ರಘುರಾಮ ಶೆಟ್ಟಿ ಅವರು ಬೆಂಗಳೂರಲ್ಲಿ ಪ್ರಜಾವಾಣಿಯಲ್ಲಿದ್ದರು ಮತ್ತು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಮುಂಚೂಣಿ ನಾಯಕರು.

ಅಲ್ಲಿಯವರೆಗೆ ಮಂಗಳೂರಲ್ಲಿ ಪತ್ರಕರ್ತರ ಸಂಘ ಅಸ್ತಿತ್ವದಲ್ಲಿರಲಿಲ್ಲ. ಪ.ಗೋ ಅವರೇ ಸಂಗ್ರಹಿಸಿಟ್ಟಿದ್ದ ದಾಖಲೆಗಳ ಪ್ರಕಾರ ದ.ಕ.ಕಾರ್ಯನಿರತ ಪತ್ರಕರ್ತರ ಸಂಘ 1976 ಅಕ್ಟೋಬರ್ 6 ರಂದು ಉದ್ಘಾಟನೆಯಾಗಿತ್ತು. ಪಿವಿಎಸ್ ಕಲಾಕುಂಜದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಂದು ಸಚಿವರಾಗಿದ್ದ ಬಿ.ಸುಬ್ಬಯ್ಯ ಶೆಟ್ಟಿ ಸಂಘವನ್ನು ಉದ್ಘಾಟಿಸಿದ್ದರು ಎಂದು ನವಭಾರತ ಪತ್ರಿಕೆಯಲ್ಲಿ ಪ್ರಕಟವಾದ ವರದಿ ಹೇಳುತ್ತದೆ.ಈ ಕಾರ್ಯಕ್ರಮದಲ್ಲಿ ಪ.ಗೋ ಅವರು ತಮ್ಮ ಇಬ್ಬರು ಮಕ್ಕಳಾದ ಪ.ವಿಶ್ವೇಶ್ವರ ಹಾಗೂ ಪ. ರಾಮಚಂದ್ರ ಅವರನ್ನೂ ಕರೆದುಕೊಂಡು ಹೋಗಿದ್ದರಂತೆ.

ಮಂಗಳೂರಲ್ಲಿ ರಾಜ್ಯಮಟ್ಟದ ಸಮ್ಮೇಳನವನ್ನೂ ಸಂಘಟಿಸಿದ್ದರು ಅದರಲ್ಲಿ ಪ.ಗೋ ಕ್ರಿಯಾಶೀಲವಾಗಿ ದುಡಿದಿದ್ದರು ಎನ್ನುವುದನ್ನು ಮರೆಯಲು ಸಾಧ್ಯವಿಲ್ಲ. ಈ ಸಂಘ ಆರಂಭದಲ್ಲಿ ಕ್ರಿಯಾಶೀಲವಾಗಿದ್ದರು ಮತ್ತೆ ಅದು ಅಷ್ಟೇನೂ ಕ್ರಿಯಾಶೀಲವಾಗಿರಲಿಲ್ಲ. ನಾನು, ಮನೋಹರ್ ವೃತ್ತಿಗೆ ತೊಡಗಿಸಿಕೊಂಡಾಗ ಸಂಘವನ್ನು ಕ್ರಿಯಶೀಲಗೊಳಿಸುವ ಅಗತ್ಯವನ್ನು ಮನಗಂಡು 1985ರಲ್ಲಿ ದ.ಕ.ಕಾರ್ಯನಿರತ ಪತ್ರಕರ್ತರ ಸಂಘವನ್ನು ಮತ್ತೆ ಕಟ್ಟುವ ಕನಸು ಕಂಡೆವು. ಆಗ ನೆರವಿಗೆ ಬಂದದ್ದು ಪ.ಗೋ ಅವರು ಮತ್ತು ಅವರ ಅನುಭವ.

ಆಗ ಅವಳಿ ಜಿಲ್ಲೆಯಲ್ಲಿದ್ದ ಪತ್ರಕರ್ತರನ್ನು ಪಟ್ಟಿ ಮಾಡಿದರೆ ನೆನಪಿಗೆ ಬರುವ ಹೆಸರುಗಳು ಹೀಗಿವೆ. ಯು.ನರಸಿಂಹರಾವ್, ಪ.ಗೋಪಾಲಕೃಷ್ಣ, ಎನ್.ಆರ್.ಉಭಯ, ಎ.ವಿ.ಮಯ್ಯ, ವಸಂತ ನಾಯಕ್ ಪಲಿಮಾರ್ಕರ್, ಬಿ.ವಿ.ಬಾಳಿಗ, ವಿ.ಬಿ.ಹೊಸಮನೆ, ರಾಮಚಂದ್ರರಾವ್, ಮನೋಹರ್ ಪ್ರಸಾದ್, ಚಿದಂಬರ ಬೈಕಂಪಾಡಿ, ಮಂಜುನಾಥ ಭಟ್,ಯಜ್ನ, ಜಿ.ಪಿ.ಬಸವರಾಜ್, ವಿಜಯ ಭಟ್, ಕಾಸರಗೋಡಲ್ಲಿ ಎಂ.ವಿ.ಬಳ್ಳುಳ್ಳಾಯ, ಬಂಟ್ವಾಳದಲ್ಲಿ ಬಾಲಕೃಷ್ಣ ಗಟ್ಟಿ, ಪುತ್ತೂರಲ್ಲಿ ಪುರಂದರ ಭಟ್, ಅರ್ತಿಕಜೆ, ಸುಳ್ಯದಲ್ಲಿ ಎಂ.ಬಿ.ಸದಾಶಿವ, ಉಡುಪಿಯಲ್ಲಿ ವಾಸುದೇವ ರಾವ್, ಕುಂದಾಪುರದಲ್ಲಿ ಎ.ಎಮ್.ಎನ್.ಹೆಬ್ಬಾರ್. ಇಷ್ಟೂ ಮಂದಿ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರು.(ಹೆಸರು ಬಿಟ್ಟು ಹೋಗಿದ್ದರೆ ಉದ್ದೇಶಪೂರ್ವಕವಾಗಿ ಅಲ್ಲ.)

ನಾನು ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿಯಾದ ಮೇಲೆ ರಾಜ್ಯ ಸಂಘದ ಜೊತೆಗೆ ಮತ್ತೆ ಸಂಬಂಧ ಸ್ಥಾಪಿಸಿ ಅಧಿಕೃತವಾಗಿ ಮಾನ್ಯತೆ ಪಡೆದುಕೊಳ್ಳಲಾಯಿತು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜೊತೆಗೆ ಸಂಪರ್ಕ ಅಥವಾ ಅದರ ಅಧೀನದಲ್ಲಿ ಸೇರ್ಪಡೆ ಮಾಡುವ ವಿಚಾರದಲ್ಲಿ ನಮ್ಮೊಳಗೇ ಒಮ್ಮತವಿರಲಿಲ್ಲ. ಇದಕ್ಕೆ ಮುಖ್ಯಕಾರಣವೆಂದರೆ ರಾಜ್ಯಸಂಘಕ್ಕೆ ಸದಸ್ಯತನದ ಶುಲ್ಕದ ಶೇ.50ರಷ್ಟನ್ನು ಪಾವತಿಸಬೇಕಾಗುತ್ತಿತ್ತು. ಆದರೆ ರಾಜ್ಯಸಂಘದಿಂದ ನಮಗೆ ಯಾವುದೇ ಸವಲತ್ತೂ ಸಿಗುತ್ತಿರಲಿಲ್ಲ. ಆದರೆ ಮಂಗಳೂರು ವಿಶ್ವವಿದ್ಯಾನಿಲಯದ ಸೆನೆಟ್ ಗೆ ಪತ್ರಕರ್ತರ ನೇಮಕಕ್ಕೆ ಶಿಫಾರಸು ಮಾಡುವ ಅಧಿಕಾರವಿದ್ದುದು ರಾಜ್ಯ ಸಂಘಕ್ಕೆ ಮಾತ್ರ. ಇದನ್ನು ಹೊರ ಜಿಲ್ಲೆಯವರೇ ಕಬಳಿಸುತ್ತಿದ್ದರು. ನಮ್ಮ ಜಿಲ್ಲೆಯ ಪತ್ರಕರ್ತರಿಗೆ ಅವಕಾಶವೇ ಸಿಗುತ್ತಿರಲಿಲ್ಲ. ಈ ಕಾರಣಕ್ಕಾಗಿ ರಾಜ್ಯಸಂಘದ ಮಾನ್ಯತೆ ಪಡೆಯುವ ನಿರ್ಧಾರ ಮಾಡಿದೆವು. ಆಗ ಪ.ಗೋ ಈ ವಿಚಾರದಲ್ಲಿ ಸಹಮತ ಮೂಡಿಸುವುದರಲ್ಲಿ ಮುಖ್ಯಪಾತ್ರ ವಹಿಸಿದ್ದರು. ಆದರೆ ಸಂಘದ ಮೂಲಕ ಯಾವುದೇ ಕಮಿಟಿಗೆ ನೇಮಕವಾಗಲು ನಿರಾಕರಿಸಿದ್ದರು ಪ.ಗೋ ಎನ್ನುವುದನ್ನು ದಾಖಲಿಸುತ್ತೇನೆ.

ನಿವೃತ್ತಿಯ ಅಂಚಿನಲ್ಲಿದ್ದಾಗಲೇ ವಾರ್ತಾ ಇಲಾಖೆ ಮೂಲಕ ಪತ್ರಕರ್ತರ ನಿವೃತ್ತಿ ವೇತನ ಸೌಲಭ ಪಡೆಯಲು ಖುದ್ದು ನಾನೇ ಅವರನ್ನು ಒತ್ತಾಯಿಸಿದ್ದಾಗಲೂ ಪ.ಗೋ ನಿರಾಕರಿಸಿದ್ದರು. ನನ್ನ ಕೈಕಾಲು ಗಟ್ಟಿಯಾಗಿದೆ, ನನ್ನ ಪೆನ್ನಿಗೆ ಬರೆಯುವ ಸಾಮರ್ಥ್ಯವಿದೆ. ಪೆನ್ನಿನ ಮೂಲಕವೇ ಸಂಪಾದನೆ ಮಾಡಿ ನನ್ನ ಹೊಟ್ಟೆ ತುಂಬಿಸಿಕೊಳ್ಳುತ್ತೇನೆ ಮಗು ನನಗೆ ಯಾರ ಔದಾರ್ಯವೂ ಬೇಕಾಗಿಲ್ಲ ಎಂದಿದ್ದರು. ಕೊನೆತನಕವೂ ಅವರು ಪೆನ್ಷನ್ ಗೆ ಅರ್ಜಿ ಹಾಕಲಿಲ್ಲ.

ಪ.ಗೋ ದ.ಕ.ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ನಿವೇಶನ ಮಂಜೂರಾದ ಮೇಲೆ ಕಟ್ಟಡ ಕಟ್ಟಲು ನಗರದ ಉದ್ಯಮಿಗಳನ್ನು ಒಳಗೊಂಡ ಪ್ರಮುಖರ ಸಮಿತಿ ರಚಿಸಲು ಸಲಹೆ ಕೊಟ್ಟಿದ್ದರು. ಅವರು ಯಾವ ಕಾರಣಕ್ಕೆ ಇಮ್ಥ ಸಲಹೆ ಕೊಟ್ಟಿದ್ದರೆನ್ನುವುದನ್ನು ಒತ್ತಾಯ ಮಾಡಿದಾಗ ಹೇಳಿದ್ದರು ಕೂಡಾ.

ನೀನು ಪ್ರ.ಕಾರ್ಯದರ್ಶಿಯಾಗಿ ರಾಯರು ಅಧ್ಯಕ್ಷರಾಗಿ ನಾವೆಲ್ಲ ಇದ್ದುಕೊಂಡು ದೇಣಿಗೆ ಸಂಗ್ರಹಿಸಿ ಕಟ್ಟಡ ಕಟ್ಟಿದರೆ ಆ ನಂತರ ಅಪವಾದಗಳಿಗೆ ಗುರಿಯಾಗಬೇಕಾಗುತ್ತದೆ. ಕಟಡಕ್ಕೆಂದೇ ಸಾರ್ವಜನಿಕರ, ಗಣ್ಯರ ಸಮಿತಿಯಿದ್ದರೆ ಆ ಸಮಿತಿಯೇ ಕಟ್ಟಡ ನಿರ್ಮಾಣದ ಹೊಣೆ ನಿಭಾಯಿಸುತ್ತದೆ, ಕೊಡುವುದು, ತರುವುದು, ಸಂಗ್ರಹಿಸುವುದು ಎಲ್ಲವೂ ಆ ಸಮಿತಿಯದ್ದೇ ಆದಾಗ ನಮ್ಮ ಯಾರ ಮೇಲೂ ಕಳಂಕ ಬರುವುದಿಲ್ಲವೆಂದಿದ್ದರು. ಇದು ನನಗೂ ಸರಿಯೆನಿಸಿತು.

ದ.ಕ.ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗಿದ್ದವರು ಬಿ.ಸಂಕಪ್ಪ ರೈ. ಅವರನ್ನು ಭೇಟಿ ಮಾಡಿ ಪತ್ರಕರ್ತರ ಸಂಘಕ್ಕೆ ನಿವೇಶನ ಮಂಜೂರಾಗಿದೆ. ಕಟ್ಟಡ ನಿರ್ಮಿಸಲು ನಿಮ್ಮ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸುವ ಸಲಹೆ ಬಂದಿದೆ ಒಪ್ಪಿಕೊಳ್ಳಬೇಕು ಎಂದು ಕೇಳಿದೆ. ಅವರು ಒಪ್ಪಿದರು. ಭಾರತ್ ಬೀಡಿ ಕಂಪೆನಿಯ ಬಿ.ಗಣಪತಿ ಪೈ ಅವರನ್ನು ನಾನು, ನರಸಿಂಹ ರಾವ್, ಪ.ಗೋ ಭೇಟಿ ಮಾಡಿ ಅವರನ್ನೂ ಸಮಿತಿಯಲ್ಲಿರಬೇಕೆಂದು ಕೇಳಿಕೊಂಡೆವು. ಅವರೂ ಒಪ್ಪಿದ್ದು ಮಾತ್ರವಲ್ಲ ಮೊದಲ ಸಭೆಯನ್ನು ತಮ್ಮ ಕಚೇರಿಯಲ್ಲೇ ಮಾಡುವಂತೆ ಸೂಚಿಸಿದರು. ಶ್ರೀನಿವಾಸ ಕುಡ್ವರನ್ನು ಭೇಟಿ ಮಾಡಿ ಅವರನ್ನೂ ಸಮಿತಿಯಲ್ಲಿರಲು ಕೇಳಿದಾಗ ಅವರೂ ಒಪ್ಪಿದರು. ಭಾರತ ಬೀಡಿ ಸಂಸ್ಥೆ ಕಚೇರಿಯಲ್ಲಿ ಸಭೆ ನಡೆದಾಗ ಪ.ಗೋ ಪತ್ರಕರ್ತರ ಸಂಘದ ಕಟ್ಟಡ ಹೇಗಿರಬೇಕೆನ್ನುವ ಕುರಿತು ಪ್ರಾಸ್ತಾವಿಕವಾಗಿ ವಿಚಾರ ಮಂಡನೆ ಮಾಡಿದ್ದರು.

ಆ ಸಭೆಯಲ್ಲಿ ಭಾಗವಹಿಸಿದ್ದರು ಧಾರಾಳವಾಗಿ ದೇಣಿಗೆ ಕೊಡಲು ಮೂಂದೆ ಬಂದು ಭರವಸೆ ಕೊಟ್ಟರು. ಆದರೆ ಅವರೆಲ್ಲರ ಏಕಮಾತ್ರ ಸಲಹೆ ಅಂದರೆ ಸಂಘವನ್ನು ರಿಜಿಸ್ಟರ್ಡ್ ಮಾಡಿಸಿ ತಾವು ಕೊಡುವ ದೇಣಿಗೆಗೆ ತೆರಿಗೆ ವಿನಾಯಿತು ಸೌಲಭ್ಯ ಕೊಡಿಸಬೇಕೆಂದರು.

ನೋಂದಾವಣೆ ಮಾಡಬೇಕಾದರೆ ಏನೆಲ್ಲ ಆಗಬೇಕೆನ್ನುವ ಮಾಹಿತಿಯನ್ನು ಪ.ಗೋ ಹುಡುಕಾಡಿ ತಂದು ನನ್ನ ಮುಂದಿಟ್ಟು ಇಕೋ ಎಲ್ಲಾ ವಿವರ ಇದೆ, ಇನ್ನು ನಿನ್ನ ಜವಾಬ್ದಾರಿ ಎಂದಿದ್ದರು. ಸಂಘವನ್ನು ನೋಂದಾವಣೆ ಮಾಡಿಸಬೇಕಿದ್ದರೆ ಮೂರು ವರ್ಷಗಳ ಲೆಕ್ಕಪತ್ರವನ್ನು ಆಡಿಟ್ ಮಾಡಿಸಿ ಕೊಡಬೇಕಿತ್ತು. ನರಸಿಂಹರಾವ್ ಮತ್ತು ಪ.ಗೋ ಇಬ್ಬರೂ ಸೇರಿ ಚಾರ್ಟರ್ಡ್ ಅಕೌಂಟೆಂಟ್ ಗೊತ್ತುಪಡಿಸಿ ಲೆಕ್ಕಪತ್ರ ಆಡಿಟ್ ಮಾಡಿಸಿಕೊಟ್ಟ ಮೇಲೆ ನೋಂದಣಿ ಕೂಡಾ ಮಾಡಿಸಿದೆವು.

ಪ.ಗೋ ಕೇವಲ ಸಂಘದ ಸದಸ್ಯರಾಗಿದ್ದರೂ ಜವಾಬ್ದಾರಿ ಹೊತ್ತುಕೊಂಡಿದ್ದ ನನಗೆ ಬೆಂಬಲವಾಗಿ ನಿಂತು ಎಲ್ಲಾ ಕೆಲಸಗಳನ್ನು ಮಾಡಿಸುತ್ತಿದ್ದರು. ಶ್ರೀನಿವಾಸ ಕುಡ್ವ ಅವರು ಪ್ರತೀ ವರ್ಷ ತಮ್ಮ ಸಂಸ್ಥೆಯಿಂದ ಒಂದೊಂದು ಲಕ್ಷ ರೂಪಾಯಿಯನ್ನು ಸಂಘಕ್ಕೆ ದೇಣಿಗೆಯಾಗಿ ಕೊಡುವುದಾಗಿ ಭರವಸೆ ಕೊಟ್ಟಿದ್ದರು. ಕಟ್ಟಡ ನಿರ್ಮಾಣ ಸಮಿತಿ ಮೂಲಕ ಕಟ್ಟಡ ನಿರ್ಮಾಣವಾಗುವುದು ಖಾತ್ರಿಯಾಗಿತ್ತು. ನಿವೇಶನವನ್ನು ಜುಗುಲ್ ಕಂಪೆನಿಯ ಜಾನ್ ಸಲ್ಡಾನ ಉಚಿತವಾಗಿ ಸಮತಟ್ಟು ಮಾಡಿಕೊಟ್ಟು ನೆರವಾದರು. ಅಲ್ಲಿಯ ತನಕ ಲೆಕ್ಕಪತ್ರಗಳನ್ನು ಅಚ್ಚಕಟ್ಟಾಗಿ ಇಡುವ ಜವಾಬ್ದಾರಿ ನನ್ನದಾಗಿದ್ದ ಕಾರಣ ಪ.ಗೋ ತಮಗೆ ಬಿಡುವಾದಾಗ ಬಂದು ಲೆಕ್ಕಪತ್ರಗಳನ್ನು ಪರಿಶೀಲಿಸಿ ಒಂದೇ ಒಂದು ರೂಪಾಯಿ ಆಚೀಚೆಯಾಗದಂತೆ ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಿದ್ದರು.

ನಿವೇಶನ ಸಿಕ್ಕಿತು ರಾಜ್ಯ ಸರ್ಕಾರದಿಂದ ಮೊದಲ ಕಂತಾಗಿ ಎಂ.ವೀರಪ ಮೊಯ್ಲಿ ಅವರು ಮೂರು ಲಕ್ಷರೂಪಾಯಿ ದೇಣಿಗೆ ಚೆಕ್ ತಂದುಕೊಟ್ಟರು. ಶಂಕುಸ್ಥಾಪನೆಯನ್ನು ಖುದ್ದು ವೀರಪ ಮೊಯ್ಲಿ ಅವರೇ ಮಾಡಿದ್ದರು. ಈ ಪ್ರಕ್ರಿಯೆ ಮುಗಿಯುತ್ತಿದ್ದಂತೆಯೇ ಸಂಘದೊಳಗೆ ಹೊಸ ಹೊಸ ಪತ್ರಕರ್ತರ ಎಂಟ್ರಿಯಾಯಿತು. ಭಿನ್ನಾಭಿಪ್ರಾಯಗಳು ಮೂಡಿದವು. ಆಗ ಪ.ಗೋ ಹೇಳಿದ ಮಾತು ಈಗಲೂ ನೆನಪಿನಲ್ಲಿದೆ.

ಸಂಘದಲ್ಲಿ ದುಡ್ಡಿರಬಾರದು ಆಗಸಂಘದಲ್ಲಿ ಸಹಮತ ಇರುತ್ತದೆ. ಹಣ ಬಂದರೆ ಒಡಕು ಆರಂಭವಾಗುತ್ತದೆ. ಇನ್ನು ನೀನಾಗಲೀ, ನರಸಿಂಹರಾಯರಾಗಲಿ ಈ ಸಂಘದಲ್ಲಿ ಜವಾಬ್ದಾರಿ ಹುದ್ದೆಯಲ್ಲಿರಬೇಡಿ. ನಿಮ್ಮ ಹೆಸರಿಗೆ ಕಳಂಕ ಅಂಟಿಸುವ ಕೆಲಸವಾಗುತ್ತದೆ ಎಂದು ಉಪದೇಶ ಕೊಟ್ಟರು. ಸಂಘದ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ನಾನು, ಅಧ್ಯಕ್ಷ ಹುದ್ದೆಯಿಂದ ನರಸಿಂಹರಾವ್ ನಿರ್ಗಮಿಸಿದೆವು. ಒಂದು ವೇಳೆ ಪ.ಗೋ ಸುಮ್ಮನಿದ್ದರೆ ನಾವು ಸಂಘದಲ್ಲಿದ್ದುಕೊಂಡು ಭಿನ್ನರಜೊತೆ ಕಾದಾಡಿ ಕಳಂಕ ಅಂಟಿಸಿಕೊಳ್ಳಬೇಕಿತ್ತು. ಪ.ಗೋ ನಮ್ಮನ್ನು ಕಳಂಕಮುಕ್ತರಾಗಿಸಿದರು ಎನ್ನುವುದನ್ನು ಹೇಳದಿರಲು ಸಾಧ್ಯವೇ?.

ಪ.ಗೋ ಸಂಘದ ಅಧ್ಯಕ್ಷರಾಗಿದ್ದವರು, ಲೆಕ್ಕಪತ್ರವನ್ನು ನೀಟಾಗಿಟ್ಟು ಸ್ವಾಭಿಮಾನ ಮೆರೆದವರು. ಆದರೆ ಕೆಲವೊಮ್ಮೆ ಸಿಡುಕಿನಿಂದ ದುಡುಕಿ ಬಿಡುತ್ತಿದ್ದರು. ಮತ್ತೆ ಅವರನ್ನು ಸಮಾಧಾನಪಡಿಸಿ ಮತ್ತೆ ಸಂಘದಲ್ಲಿ ಸಕ್ರಿಯರಾಗುವಂತೆ ಮಾಡುವುದು ಪ್ರಯಾಸದ ಕೆಲಸವಾಗುತ್ತಿತ್ತು. ಮುಂಗೋಪಿಯೂ ಅಲ್ಲ, ಅತಿಯಾದ ತಾಳ್ಮೆಯೂ ಅವರಿಗಿರಲಿಲ್ಲ. ಆದರೆ ಯಾವುದೇ ನಿರ್ಧಾರವನ್ನು ಮಾಡಿದರೆ ಅದರಿಂದ ಹಿಂದೆ ಸರಿಯುವಂಥ ಜಾಯಮಾನವೇ ಅವರದ್ದಾಗಿರಲಿಲ್ಲ. ಆದ್ದರಿಂದಲೇ ನಗುನಗುತ್ತಾ ಸಂಘದ ಜವಾಬ್ದಾರಿ ವಹಿಸಿಕೊಳ್ಳುತ್ತಿದ್ದರು, ಸಿಟ್ಟಾದಾಗ ಮುಲಾಜಿಲ್ಲದೆ ತ್ಯಜಿಸಿ ನಿರ್ಗಮಿಸುತ್ತಿದ್ದರು.

ಏನೇ ಆದರೂ ಪ.ಗೋ ದಕ್ಷಿಣ ಕನ್ನಡ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಭದ್ರ ಬುನಾದಿ ಹಾಕಿಕೊಟ್ಟವರು, ಕಳಂಕರಹಿತವಾಗಿ ಬದುಕುವ ಪಾಠ ಹೇಳಿಕೊಟ್ಟವರು. ಯಾರು ಮರೆತರೂ ಪ.ಗೋ ಅವರನ್ನು ನಾನು ಮರೆಯಲು ಸಾಧ್ಯವಿಲ್ಲ. ಯಾಕೆಂದರೆ ಪತ್ರಕರ್ತರ ಸಂಘದ ಕಟ್ಟಡದ ನಿವೇಶನದಿಂದ ಹಿಡಿದು ವೀರಪ್ಪ ಮೊಯ್ಲಿ ಅವರಿಂದ ಶಂಕುಸ್ಥಾಪನೆ ಮಾಡಿಸುವ ತನಕ ನನ್ನ ಮತ್ತು ನರಸಿಂಹರಾಯರ ಹೆಗಲಿಗೆ ಹೆಗಲುಕೊಟ್ಟು ದುಡಿದವರು ಪ.ಗೋ ಎನ್ನುವುದನ್ನು ಬಹಿರಂಗವಾಗಿ ಹೇಳಿಕೊಳ್ಳದಿದ್ದರೆ ಸತ್ಯ ಸಾಯುತ್ತದೆ, ನಾನು ಆತ್ಮವಂಚನೆ ಮಾಡಿಕೊಂಡಂತಾಗುತ್ತದೆ.

Chidambara-Baikampady

-ಚಿದಂಬರ ಬೈಕಂಪಾಡಿ

Write A Comment