ಕರಾವಳಿ

ಅನುರಾಗ ಪ್ರಶಸ್ತಿಯ ಗರಿ ಬೆಂಗಳೂರಿನ ಡಾ. ಶೋಭಾ ಶಶಿಕುಮಾರ್ ಅವರ ಮುಡಿಗೆ

Pinterest LinkedIn Tumblr

kannada invite

ಕರ್ನಾಟಕದಲ್ಲಿ ನಾಟ್ಯಶಾಸ್ತ್ರದ ಕರಣಗಳನ್ನಷ್ಟೂ ಅಭ್ಯಾಸ ಮಾಡಿ ಅದರ ಆಯಾಮದಲ್ಲಿ ಡಾಕ್ಟರೇಟ್ ಪದವಿಯನ್ನು ಪಡೆದ ಏಕೈಕ ಕಲಾವಿದೆ ಸಂಶೋಧಕಿ ಡಾ.ಶೋಭಾ ಶಶಿಕುಮಾರ್. ಪ್ರಸ್ತುತ ಜೈನ್ ವಿಶ್ವವಿದ್ಯಾನಿಲಯದ ಪ್ರದರ್ಶನಕಲಾವಿಭಾಗದ ಸಂಯೋಜಕಿ, ನಾಟ್ಯಶಾಸ್ತ್ರ ಉಪನ್ಯಾಸಕಿ ಮತ್ತು ಸ್ನಾತಕೋತ್ತರ ವಿದ್ಯಾಭ್ಯಾಸದ ಪ್ರೌಢಪ್ರಬಂಧಗಳಿಗೆ, ಪ್ರೌಢ ನೃತ್ಯಪ್ರದರ್ಶನಗಳಿಗೆೆ ಮಾರ್ಗದರ್ಶಕಿ. ನೃತ್ಯದಲ್ಲಿ ಮನೋಧರ್ಮ ಅಭಿನಯವೆಂಬ ವಿಶೇಷ ವಿಭಾಗಕ್ಕೆ ಹಲವು ವರುಷಗಳಿಂದ ವಿಶೇಷ ಉಪನ್ಯಾಸಕಿಯಾಗಿ ಸೇವೆ ಸಲಿಸುತ್ತಾ ಬಂದವರು. ನೂಪುರ ಭ್ರಮರಿ ಸಂಸ್ಥೆಯ ಪ್ರದಶರ್ಕ ವಿಭಾಗ ಮತ್ತು ನಾಟ್ಯಶಾಸ್ತ್ರ ಪ್ರಯೋಗದ ನಿರ್ದೇಶಕಿಯೂ ಹೌದು. ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ಡಾ.ಶೋಭಾ, ಬನ್ನೇರುಘಟ್ಟ ಸನಿಹದ ಅರಕೆರೆಯಲ್ಲಿ ಮಯೂರಿ ನೃತ್ಯಶಾಲೆಯನ್ನು ಕಟ್ಟಿ ಬೆಳೆಸಿ, ಹಲವು ವಿದ್ಯಾರ್ಥಿಗಳಿಗೆ ಗುರುವೂ ಆಗಿದ್ದಾರೆ.

ಐದು ದಶಕಗಳಿಗೂ ಮೀರಿದ ಸಮೃದ್ಧ ಸಾಹಿತ್ಯ-ಸಾಂಸ್ಕೃತಿಕ ಇತಿಹಾಸ ಹೊಂದಿದೆ ದಕ್ಷಿಣಕನ್ನಡದ ಪುತ್ತೂರಿನ ಕರ್ನಾಟಕ ಸಂಘ. ಒಂದಾನೊಂದು ಕಾಲಕ್ಕೆ ಡಾ.ಶಿವರಾಮ ಕಾರಂತರಂತಹ ಹಿರಿಯ ವಾಗ್ಮಿಗಳ ಸಹವರ್ತಿಯಾಗಿದ್ದ ಕರ್ನಾಟಕ ಸಂಘವು, ಅವಧಾನ ಪ್ರಪಂಚದಲ್ಲಿ ಇಂದಿಗೆ ಮೇರುಶಿಖರವಾಗಿರುವ ಶತಾವಧಾನಿ ಡಾ.ಆರ್. ಗಣೇಶರ ಕನ್ನಡದಲ್ಲಿ ಅವಧಾನ ಕಲೆಯೆಂಬ ಗ್ರಂಥದ ಸಹಿತ ಅನೇಕಾನೇಕ ಮಹನೀಯ ಸಾಹಿತಿಗಳ, ಕಲಾವಿದರ ಕೃತಿಗಳನ್ನು ಪ್ರಕಾಶಿಸಿತ್ತು. ಪ್ರಸ್ತುತ ದಿನಗಳಲ್ಲಿಯೂ ಲಕ್ಷ್ಮೀಶ ತೋಳ್ಪಾಡಿ, ಪುರಂದರ ಭಟ್ ಮುಂತಾದ ಮಹನೀಯರು ಕರ್ನಾಟಕ ಸಂಘದ ಚಟುವಟಿಕೆಗಳನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಬರುತ್ತಿದ್ದಾರೆ. ಇದೀಗ ಕರ್ನಾಟಕ ಸಂಘ ಮತ್ತು ಅನ್ಯಾನ್ಯ ಸಂಘಸಂಸ್ಥೆಗಳ ಕೂಡುವಿಕೆಯಲ್ಲಿ ನಡೆಯುತ್ತಿರುವ (20ರಿಂದ 28ಫೆಬ್ರವರಿ 2015ರವರೆಗೆ) 9 ದಿನಗಳ ಸಾಹಿತ್ಯ ಕಲಾ ಕುಶಲೋಪರಿ ಎಂಬ ಸಾಹಿತ್ಯ ಸಂಸ್ಕೃತಿಯ ಪರ್ವದಲ್ಲಿ ಡಾ.ಶೋಭಾ ಶಶಿಕುಮಾರ್ ಅವರಿಗೆ ಅನುರಾಗ ಪ್ರಶಸ್ತಿ-2015ಯನ್ನು ನೀಡಲಾಗುತ್ತಿದೆ.

shob

002

ತಮಿಳ್ನಾಡಿನ ತಿರುಚಿರಾಪಳ್ಳಿಯಲ್ಲಿ ಭರತನಾಟ್ಯ ವಳವೂರ್ ಶೈಲಿಯ ಗುರು ಶ್ರೀಮತಿ ಶಾಂತಿ ರಾಮಮೋಹನ್ ಅವರಿಂದಲೂ, ಕರ್ನಾದಲ್ಲಿ ಕರ್ನಾಟಕಕಲಾಶ್ರೀ ಗುರು ರೇವತಿ ನರಸಿಂಹನ್ ಅವರಿಂದಲೂ ಭರತನಾಟ್ಯದ ವಿದ್ಯಾಭ್ಯಾಸ ಪಡೆದ ಶೋಭಾ; ಭರತನಾಟ್ಯ ಸ್ನಾತಕೋತ್ತರ ಪದವಿಯಲ್ಲಿ ಪ್ರಥಮ ರ್ಯಾಂಕ್ ಪುರಸ್ಕೃತೆ. ನಾಟ್ಯಶಾಸ್ತ್ರದ ಕರಣಾಭ್ಯಾಸವನ್ನು ಸುಂದರೀ ಸಂತಾನಂ ಅವರ ಬಳಿ ಪಡೆದು, ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಏಸ್ತೇಟಿಕ್ಸ್ ಆಫ್ ಆನ್ಗಿಕ ಅಂಡ್ ಸಾತ್ವಿಕ ಅಭಿನಯ ಇನ್ ಭರತನಾಟ್ಯ ವಿಷಯಕ್ಕೆ 2009ರಲ್ಲಿ ಡಾಕ್ಟರೇಟ್ ಪದವಿ ಪಡೆದರು. ಯುಜಿಸಿಯ ಜೂನಿಯರ್ ಮತ್ತು ಸೀನಿಯರ್ ಫೆಲೊಶಿಪ್‌ಗೆ ಭಾಜನರಾದರು. ಯುಜಿಸಿ ನೆಟ್ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿರುವ ಶೋಭಾ ಎಂಕಾಂ ಪದವೀಧರೆಯೂ ಕೂಡಾ. ಸದ್ಯ ಡಾ.ಪದ್ಮಾ ಸುಬ್ರಹ್ಮಣ್ಯಂ ಅವರ ನಾಟ್ಯದ ಕುರಿತಾಗಿ ಶೋಭಾ ಬರೆದ ಭಾವಾನುವಾದ ಪ್ರಕಟಣೆಯ ಹಂತದಲ್ಲಿದೆ. ನೂಪುರ ಭ್ರಮರಿಯ ರಾಷ್ಟ್ರೀಯ ನೃತ್ಯಶೋಧನಾ ವಿಚಾರಸಂಕಿರಣಗಳ ಸಂಚಾಲಕಿಯಾಗಿಯೂ ಕರ್ತವ್ಯ ನಿರ್ವಹಿಸಿರುವ ಇವರು ಹಲವಾರು ಉಪನ್ಯಾಸ-ಪ್ರಾತ್ಯಕ್ಷಿಕೆ, ಸಂಶೋಧನಾ ಲೇಖನಗಳನ್ನು ಪ್ರಸ್ತುತಪಡಿಸುತ್ತಲೇ ಬಂದಿದ್ದಾರೆ. ಕರ್ನಾಟಕ ಮತ್ತು ತಮಿಳ್ನಾಡಿನ ಹಲವಾರು ದೇವಾಲಯ ಮತ್ತು ನೃತ್ಯೋತ್ಸವಗಳಲ್ಲಿ ಅವರ ನೃತ್ಯಾನುಭೂತಿ ಸಲ್ಲುತ್ತಲೇ ಬಂದಿದೆ.

ಡಾ.ಶೋಭಾ- ಭಾರತೀಯ ಅಲಂಕಾರಶಾಸ್ತ್ರ, ನಾಟ್ಯಶಾಸ್ತ್ರ, ವೇದಾಂತವನ್ನು ಓದಿ ಅರಿತು ಅದರ ಸಾರಸರ್ವಸ್ವವನ್ನು ನೃತ್ಯದ ಆಯಾಮದಲ್ಲಿ ಬೆಳಗಿಸಿ ಮುನ್ನಡೆಯುತ್ತಿರುವವರು. ಸ್ವತಃ ಶತಾವಧಾನಿ ಡಾ.ಆರ್.ಗಣೇಶರ ಶಿಷ್ಯೆಯಾಗಿ ಅಲಂಕಾರಶಾಸ್ತ್ರದ ಪಾಠ ಹೇಳಿಸಿಕೊಂಡು ಇವರು ನಂತರದಲ್ಲಿ ಅದನ್ನು ನೃತ್ಯಾಭಿಮುಖವಾಗಿ ಬೆಳೆಸಿದವರು. ಡಾ.ಗಣೇಶರ ಕಾವ್ಯ-ಸಾಹಿತ್ಯ-ಅವಧಾನಗಳಲ್ಲಿ ಸ್ವಯಂ ಅವರಿಗೇ ಬೆರಗು ಹುಟ್ಟಿಸುವಷ್ಟು ನೂತನ ದೃಷ್ಟಿಕೋನ, ಆಯಾಮಗಳನ್ನು ನೀಡುತ್ತಿರುವ ಅಸಾಮಾನ್ಯ ಪ್ರತಿಭಾವಂತೆ.

ಶೋಭಾ ಅವರ ಮನೆಭಾಷೆ ತೆಲುಗು ; ವ್ಯಾವಹಾರಿಕ ಭಾಷೆ ತಮಿಳು ಆಗಿದ್ದರೂ ಇವರ ಬಹುಪಾಲು ನೃತ್ಯಸಂಯೋಜನೆೆಗಳಲ್ಲಿ ಕನ್ನಡಕ್ಕೇ ಪ್ರಥಮ ಮನ್ನಣೆ. ಶತಾವಧಾನಿ ಡಾ.ಆರ್ ಗಣೇಶರ ಹಲವು ಕನ್ನಡ ಭಾಷೆಯ ಕಾವ್ಯಕೌಸ್ತುಭವು ಇವರ ಕಲಾಸೌಂದರ್ಯದಲ್ಲೇ ಅರಳಿ ಪರಿಮಳ ಸೂಸಿವೆ. ಸದ್ಯ ಭಾರತೀಯ ನೃತ್ಯ ಪರಂಪರೆಯ ಶೋಧ ಮತ್ತು ವಿಶ್ಲೇಷಣೆಯ ಕಾರ್ಯಗಳಲ್ಲಿ ಉದ್ಯುಕ್ತರಾಗಿದ್ದು; ಗುರು ಸುಂದರೀ ಸಂತಾನಂ ಅವರ ದೇಶೀಕರಣಗಳ ಸಂಶೋಧನ ಕಾರ್ಯದ ಪ್ರಕಟಣೆಯಲ್ಲಿಯೂ ಗಮನಾರ್ಹ ಪಾತ್ರ ವಹಿಸಿದ್ದಾರೆ.

ಸತ್ತ್ವೋಚಿತವಾಗಿ ಆಂಗಿಕ ಮೈದಳೆಯಬೇಕು ಎನ್ನುವ ಶೋಭಾ ಅವರ ನಿಲುವಿನಂತೆಯೇ ಅವರ ನೃತ್ಯವೂ ಕೂಡಾ. ರಂಗದಲ್ಲಿ ಆಗಿಂದಾಗ್ಗೆ, ಆಶುವಾಗಿ ಕ್ಷಣಾರ್ಧದಲ್ಲಿ ನಾಟ್ಯವನ್ನು ಔಚಿತ್ಯಪೂರ್ಣವಾಗಿ ಸೃಷ್ಟಿಸುವ ಇವರ ಕಲೆಗೆ ಹಲವು ಬಾರಿ ರಾಷ್ಟ್ರೀಯಮಟ್ಟದಲ್ಲಿ ಗೌರವ ಪಡೆದಿದ್ದಾರೆ. ಅಷ್ಟನಾಯಿಕೆಯರಿಗಷ್ಟೇ ಸೀಮಿತವಾಗದೆ ಹಲವು ಬಗೆಯ ನಾಯಿಕಾ-ನಾಯಕಾಭಿವ್ಯಕ್ತಿಯನ್ನು ಹಾಗೂ ಅಲಂಕಾರಶಾಸ್ತ್ರದ ಸಹಸಂಬಂಧವನ್ನು ಕುರಿತು ಪ್ರಗಲ್ಭ ಉಪನ್ಯಾಸ-ಪ್ರಾತ್ಯಕ್ಷಿಕೆಗಳನ್ನು ನೀಡುವ ಡಾ.ಶೋಭಾ ರಸಸಂವಾದಿಯಾಗಿ ನೃತ್ಯಪ್ರದರ್ಶನಗಳನ್ನು ಕಳೆಗಟ್ಟಿಸುವುದರಲ್ಲಿ ನಿಷ್ಣಾತರು. ಸಾಮಾನ್ಯ ಕಲಾವಿದರಿಗೆ ಅಷ್ಟಾಗಿ ಕೈಗೆಟುಕದಂತಿರುವ ಕಾಳಿದಾಸ, ಲೀಲಾಶುಕನಂತಹ ಮೇರುಕವಿಗಳ ಕಾವ್ಯಕ್ಕೆ ಸಾಹಿತ್ಯೋಚಿತವಾಗಿ ಜೀವ ತುಂಬುವ ಜಾಣೆ. ಅದರಲ್ಲೂ ನೃತ್ಯರೂಪಕಗಳನ್ನು ನಿರ್ವಹಿಸುವ ಇವರ ವಿಶಿಷ್ಟ ಆಯಾಮದ ದೃಷ್ಟಿ ನಾಟ್ಯಕ್ಷೇತ್ರದಲ್ಲಿ ಹೊಸ ಅಲೆಯನ್ನೇ ಎಬ್ಬಿಸಿದೆ. ಅವುಗಳ ಪೈಕಿ ಸ್ತ್ರೀಶಕ್ತಿ ಯೆಂಬ ಏಕವ್ಯಕ್ತಿ ಭಾಣಿಕಾಶೈಲಿಯ ನೃತ್ಯರೂಪಕವು ಭರತನಾಟ್ಯದ ಮೂಲಕವಾಗಿ ಜನಸಾಮಾನ್ಯರಿಗೆ ಸಂದೇಶ ಮತ್ತು ಸುಲಭವಾಗಿ ಅರಿವು ಮೂಡಿಸುವ ಸಾಮಾಜಿಕ ಸಂವಹನದ ಹಾದಿಗೆ ಮಹತ್ತ್ವದ ಕೊಡುಗೆ ನೀಡಿದ್ದು ಮನೋರಮಾ ಬಿ.ಎನ್ ಅವರ ಅಧ್ಯಯನ ಪ್ರಸ್ತುತಿ ಮತ್ತು ಡಾ.ಹೇಮಾ ದಿವಾಕರ್ ಅವರ ಸಂಘಟನೆಯ ಉತ್ಸವದಲ್ಲಿ ಪ್ರದರ್ಶಿತವಾಗಿ ಅಪಾರ ಮೆಚ್ಚುಗೆ ಗಳಿಸಿದೆ. ಅಂತೆಯೇ ಶೋಭಾರವರು ನಿರ್ವಹಿಸುವ ಭರತನಾಟ್ಯದ ವರ್ಣ ಸಂಯೋಜನೆಗಳು ಒಟ್ಟಂದದಲ್ಲಿ ಭಾರತೀಯ ಅಲಂಕಾರಶಾಸ್ತ್ರದ ಸಾರವನ್ನು ಒಳಗೊಳ್ಳುತ್ತಾ ಬಂದಿವೆ.

ಕರಣ ಮತ್ತು ಅಡವುಗಳ ಔಚಿತ್ಯಪೂರ್ಣ ಸಾಂಗತ್ಯಕ್ಕೆ ಶೋಭಾಗೆ ಶೋಭಾ ಅವರೇ ಸರಿಸಾಟಿ. ಅಷ್ಟರಮಟ್ಟಿಗೆ ಇವರ ಶೈಲಿ, ಅಭಿನಯಪೂರ್ಣ ಶುದ್ಧನೃತ್ತ ನಿರ್ವಹಣೆ ವೈಶಿಷ್ಟ್ಯಪೂರ್ಣ. ಮಾತ್ರವಲ್ಲ ವಾಕ್ಯರ್ಥಾಭಿನಯ, ಸ್ಥಾಯಿಭಾವಪೋಷಣೆ, ಸಾಹಿತ್ಯವಸ್ತುವನ್ನು ನಿರ್ವಹಿಸುವ ರೀತಿ ಮತ್ತು ಅದಕ್ಕೆ ನೃತ್ಯರೂಪದಲ್ಲಿ ನೀಡುವ ಆಯಾಮಗಳಲ್ಲೂ ಶೋಭಾ ಕರ್ನಾಟಕ ನೃತ್ಯಪ್ರಪಂಚದ ಶೃಂಗಗಳಲ್ಲೊಂದಾಗಿದ್ದಾರೆ. ಅದರಲ್ಲೂ ಬರಬರುತ್ತಾ ಭರತನಾಟ್ಯವೆಂದರೆ ಪೂಜ್ಯ ; ಆದರೆ ಯಾರಿಗೂ ಅರ್ಥವಾಗದ ಶುಷ್ಕ ಶಾಸ್ತ್ರೀಯನೃತ್ಯ ಎಂಬ ಭಾವನೆಯೇ ಪ್ರಬಲವಾಗಿ ಬೆಳೆಯುತ್ತಿರುವ ಸಂದರ್ಭದಲ್ಲಿ ಸಾಮಾನ್ಯ ಪ್ರೇಕ್ಷಕನಿಗೂ ನಾಟ್ಯವನ್ನು ಅರ್ಥ ಮಾಡಿಸುವಷ್ಟರ ಮಟ್ಟಿಗೆ ರಸಸ್ವೋಪಜ್ಞತೆಯಿರುವ, ಭಾರತೀಯ ಕಲಾಗರ್ಭದ ಆಳವಾದ ಪರಿಶೋಧ ಇರುವ ಕಲಾವಿದೆ ಡಾ.ಶೋಭಾ. ಹಾಗಾಗಿಯೇ ವಿದ್ವದ್ರಸಿಕರಿಂದ ಮೊದಲ್ಗೊಂಡು ಸಾಮಾನ್ಯ ಸಹೃದಯನ ವರೆಗೂ, ದೊಡ್ಡವರಿಂದ ಚಿಣ್ಣರ ವರೆಗೂ ಇವರ ನಾಟ್ಯವನ್ನು ನೋಡಿ ಅರ್ಥೈಸಿ ಆಸ್ವಾದಿಸುತ್ತಾರೆ.

ಶ್ರೀಮತಿ ಲೀಲಾವತಿ ಮತ್ತು ಶ್ರೀ ಕೃಷ್ಣಮೂರ್ತಿ ದಂಪತಿಗಳ ಎರಡನೆಯ ಕುವರಿ ಡಾ. ಶೋಭಾ. ಇವರ ಪತಿ ಶಶಿಕುಮಾರ್ ಸಮಾಜಸೇವೆಯಲ್ಲಿಯೂ ಗುರುತಿಸಿಕೊಂಡಿರುವ ಮೈಕ್ರೋಸಾಪ್ಟ್ ಕಂಪೆನಿಯ ಹಿರಿಯ ಉದ್ಯೋಗಿ. ಮಗಳು ಮಯೂರಿ ನಿವೇದಿತಾ ಆರನೇ ತರಗತಿ ಕಲಿಯುತ್ತಿರುವ ಉದಯೋನ್ಮುಖ ನೃತ್ಯಕಲಾವಿದೆ.

28 ಫೆಬ್ರವರಿ 2015, ಸಮಯ ಸಂಜೆ 4.30ಕ್ಕೆ ಪುತ್ತೂರಿನ ಎಂ ವಿ ಭಟ್ ಸಭಾಭವನ, ಅನುರಾಗ ವಠಾರದ ಆವರಣದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಅದಾದ ಬಳಿಕ ಸಂಜೆ 6 ಗಂಟೆಯಿಂದ ಡಾ.ಶೋಭಾ ಶಶಿಕುಮಾರ್ ಅವರ ಭರತನೃತ್ಯ ಪ್ರಸ್ತುತಿಯೂ ಇದೆ. ಶತಾವಧಾನಿ ಡಾ. ಆರ್. ಗಣೇಶ್ ವಿರಚಿತ ವಿಶೇಷ ನೃತ್ಯರೂಪಕ ನವರಸ ಕೃಷ್ಣ ಮತ್ತು ತ್ಯಾಗರಾಜ, ಪುರಂದರದಾಸರಂತಹ ವಾಗ್ಗೇಯಕಾರರ ಕೀರ್ತನೆಗಳೂ ಪ್ರಸ್ತುತಗೊಳ್ಳಲಿವೆ.
– ಮನೋರಮಾ ಬಿ.ಎನ್,
ಸಂಪಾದಕರು ಮತ್ತು ಸಂಶೋಧಕರು- ನೂಪುರ ಭ್ರಮರಿ

Write A Comment