ಕರಾವಳಿ

ಗಂಗೊಳ್ಳಿ ಅಂಗಡಿಗೆ ಬೆಂಕಿ ಪ್ರಕರಣ: ಶಾಸಕ ಗೋಪಾಲ ಪೂಜಾರಿ ಭೇಟಿ; ಆರೋಪಿಗಳನ್ನು ಮುಲಾಜಿಲ್ಲದೇ ಬಂಧಿಸಿ: ಪೊಲೀಸರಿಗೆ ಸೂಚನೆ

Pinterest LinkedIn Tumblr

DSC_-2176

ಕುಂದಾಪುರ: ಗಂಗೊಳ್ಳಿಯಲ್ಲಿ ಕೆಲವೊಂದು ಕಿಡಿಗೇಡಿಗಳು ನಡೆಸುತ್ತಿರುವ ಕುಕೃತ್ಯದಿಂದಾಗಿ ಶಾಂತಿ ನೆಮ್ಮದಿ ಹಾಳಾಗುತ್ತಿದ್ದು, ಇದರಿಂದ ಇಡೀ ಗ್ರಾಮದಲ್ಲಿ ಅಶಾಂತಿ ವಾತಾವರಣ ಸೃಷ್ಟಿಯಾಗಿದೆ. ಪೊಲೀಸ್ ಲಾಖೆ ಇಂತಹ ವ್ಯಕ್ತಿಗಳ ವಿರುದ್ಧ ಯಾವುದೇ ಮುಲಾಜಿಲ್ಲದೇ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಈ ಬೆಂಕಿ ಪ್ರಕರಣದಲ್ಲಿ ಕೇವಲ ಆಶ್ವಾಸನೆ ನೀಡುವುದರಿಂದ ಯಾವುದೇ ಪ್ರಯೋಜನವಿಲ್ಲ. ಯಾವುದೇ ರಾಜಕೀಯವನ್ನು ಈ ಪ್ರಕರಣದಲ್ಲಿ ಎಳೆಯಬಾರದು ಎಂದು ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದ್ದಾರೆ.

ಗುರುವಾರ ಬೆಳಿಗ್ಗೆ ಗಂಗೊಳ್ಳಿಗೆ ಭೇಟಿ ನೀಡಿದ ಅವರು ಗಂಗೊಳ್ಳಿಯಲ್ಲಿ ಬುಧವಾರ ಮುಂಜಾನೆ ದುಷ್ಕರ್ಮಿಗಳಿಂದ ಹಾನಿಗೀಡಾಗಿರುವ ಅಂಗಡಿಯನ್ನು ಪರಿಶೀಲಿಸಿ, ಸಿಸಿಟಿವಿಯಲ್ಲಿ ಸೆರೆಯಾಗಿರುವ ದುಷ್ಕರ್ಮಿಗಳ ಕೃತ್ಯವನ್ನು ವೀಕ್ಷಿಸಿದ ಶಾಸಕರು, ಅಂಗಡಿ ಮಾಲೀಕರಿಗೆ ಹಾಗೂ ಕುಟುಂಬ ವರ್ಗದವರಿಗೆ ಧೈರ್ಯ ತುಂಬಿದರು.

DSC_2175

DSC_2172

ಬಳಿಕ ತ್ರಾಸಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶಾಸಕ ಗೋಪಾಲ ಪೂಜಾರಿ, ಇದೊಂದು ಶಾಂತಿ ಕದಡುವ ಸುವ್ಯವಸ್ಥಿತ ತಂತ್ರವಾಗಿದೆ, ಘಟನೆಯಿಂದ ಅಪಾರ ನೋವಾಗಿದ್ದು ಈ ಘಟನೆ ಖಂಡನೀಯವಾದುದು. ಘಟನೆಯಲ್ಲಿ ಭಾಗಿಯಾದ ಆರೋಪಿಗಳನ್ನು ಬಂಧಿಸಿ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಈಗಾಗಲೆ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ತಪ್ಪು ಯಾರೇ ಮಾಡಿದ್ದರೂ, ಯಾವುದೇ ಕೋಮಿಗೆ ಸೇರಿದವರಾಗಿದ್ದರೂ ಕೂಡ ಕಠಿಣ ಕ್ರಮ ಕೈಗೊಳ್ಳಬೆಕು. ಘಟನೆಯಲ್ಲಿ ಮೆಲ್ನೋಟಕ್ಕೆ ಲಕ್ಷಾಂತರ ರೂ. ಹಾನಿಯಾದ ಬಗ್ಗೆ ಕಂಡುಬಂದಿದ್ದು, ಆದ ಹಾನಿಯ ಬಗ್ಗೆ ವರದಿ ನೀಡುವಂತೆ ಉಪವಿಭಾಗಾಧಿಕಾರಿ ಮತ್ತು ತಹಶೀಲ್ದಾರ್ ಅವರಿಗೆ ದೂರವಾಣಿ ಮೂಲಕ ಸೂಚನೆ ನೀಡಿದರು. ಸರಕಾರದಿಂದ ಹಾಗೂ ಜಿಲ್ಲಾಡಳಿತದಿಂದ ಪರಿಹಾರ ದೊರಕಿಸಿಕೊಡಲು ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿ ಭರವಸೆ ನೀಡಿದರು.

ಗಂಗೊಳ್ಳಿಯಲ್ಲಿ ಇತ್ತೀಚೆಗೆ ಗಲಭೆ ಪ್ರಕರಣಗಳು ಹೆಚ್ಚುತ್ತಿದ್ದು, ತ್ರಾಸಿಯಲ್ಲಿರು ಪೊಲಿಸ್ ಠಾಣೆಯನ್ನು ಅತೀ ಶೀಘ್ರದಲ್ಲಿ ಗಂಗೊಳ್ಳಿಗೆ ಸ್ಥಳಾಂತರಿಸುವ ಬಗ್ಗೆ ಈಗಾಗಲೇ ಸಚಿವರ ಗಮನಕ್ಕೆ ತಂದಿದ್ದು, ಅವರು ಕೂಡ ಒಪ್ಪಿಗೆ ಸೂಚಿಸಿದ್ದಾರೆ ಎಂದು ಅವರು ಈ ಸಂಧರ್ಭ ಹೇಳಿದರು. ಕಳೆದ ಎರಡು ಘಟನೆಗಳಿಂದ ಗಂಗೊಳ್ಳಿಯಲ್ಲಿ ಶಾಂತಿ ಸುವ್ಯವಸ್ಥೆಗೆ ಧಕ್ಕೆಯಾಗಿದೆ. ಆದುದರಿಂದ ಗಂಗೊಳ್ಳಿಯ ಜನರು ಶಾಂತಿ ಕಾಪಾಡಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದ ನೀಡದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಜನರಲ್ಲಿ ಮನವಿ ಮಾಡಿದರು.

ಗಂಗೊಳ್ಳಿ ಭಾಗದಲ್ಲಿ ಸೌಹಾರ್ಧ ವಾತಾವರಣ ಸ್ರಷ್ಟಿಸುವ ನಿಟ್ಟಿನಲ್ಲಿ ಸ್ಥಳೀಯ ಮುಖಂಡರ ಹಾಗೂ ಪ್ರಗತಿಪರರ ನೇತೃತ್ವದಲ್ಲಿ ಸಮಿತಿಯೊಂದನ್ನು ನಿರ್ಮಿಸುವ ಕುರಿತು ಈಗಾಗಲೇ ಚಿಂತನೆ ನಡೆಸಿದ್ದೇವೆ. ಮತ್ತು ಅಂಗಡಿ ಮಾಲಕರು ಹಾಗೂ ಕಟ್ಟಡ ಮಾಲೀಕರೊಂದಿಗೆ ಮುಂಜಾಗ್ರತಾ ಕ್ರಮವನ್ನು ಅನುಸರಿಸುವ ಬಗ್ಗೆ ಪೊಲೀಸರು ಸಭೆ ನಡೆಸಬೆಕು. ಗಮಗೊಲ್ಳಿಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ನಾಗರೀಕರ ಸಹಕಾರವು ಅಗತ್ಯವಾಗಿದೆ ಎಂದರು.

ಗಂಗೊಳ್ಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ವೈಪಲ್ಯತೆ ಕಾಣುತ್ತಿದೆಯೇ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು ಪೊಲೀಸ್ ಇಲಾಖೆ ಉತ್ತಮ ಕಾರ್ಯಚರಣೆ ನಡೆಸುತ್ತಿದ್ದು, ಈಗಾಗಲೇ ಪ್ರಕರಣದ ಜಾಡು ಹಿಡಿದಿದೆ. ಉಡುಪಿ, ಕುಂದಾಪುರ ಹಾಗೂ ಬೈಂದೂರು ಭಾಗಕ್ಕೆ ಇಗಾಗಲೇ ಉತ್ತಮ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎ.ಗಫೂರ್ ಮಾತನಾಡಿ, ಪದೇಪದೇ ಗಂಗೊಳ್ಳಿಯನ್ನೇ ಗುರಿಯಾಗಿಸಿಕೊಂಡು ಅಶಾಂತಿ ಸೃಷ್ಟಿಸಲಾಗುತ್ತಿದೆ. ಗುಂಪುಘರ್ಷಣೆ ನಡೆಸಿ ಶಾಂತಿ ಕದಡುವವರ ವಿರುದ್ಧ ಕಠಿಣ ಕ್ರಮವನ್ನು ಇಲಾಖೆ ಕೈಗೊಳ್ಳಬೇಕು. ಯಾವುದೇ ನಿರಫರಾಧಿಗಳಿಗೂ ಶಿಕ್ಷೆಯಾಗಬಾರದು. ಸದ್ಯ ಗಂಗೊಳ್ಳಿಯಲ್ಲಿ ನಿಷೇದಾಜ್ಞೆ ಜಾರಿಯಲ್ಲಿದ್ದು ಶೀಘ್ರ ಪರಿಸ್ಥಿತಿ ಸುದರಿಸಿ ಸಮತಿ ನೆಲೆಸಬೇಕು.

ಜಿಪಂ ಮಾಜಿ ಉಪಾಧ್ಯಕ್ಷ ರಾಜು ದೇವಾಡಿಗ, ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ದುರ್ಗರಾಜ ಪೂಜಾರಿ ,ಗಂಗೊಳ್ಳಿ ಮೀನುಗರರ ಸಹಕಾರಿ ಸಂಘದ ಅದ್ಯಕ್ಷ ನಾಗರಾಜ ಖಾರ್ವಿ ಮೊದಲಾದವರು ಉಪಸ್ಥಿತರಿದ್ದರು.

Write A Comment