ಯೋಜನೆಗಳ ಸದುಪಯೋಗ ಫಲಾನುಭವಿಗಳ ಗುರಿಯಾಗಬೇಕು. ಸರಕಾರ ಇವತ್ತು ನರೇಗಾ, ಮಡಿಲು ಮೊದಲಾದ ಉತ್ತಮ ಯೋಜನೆಗಳನ್ನು ನೀಡುತ್ತಿದೆ. ಅವುಗಳ ಪ್ರಯೋಜನವನ್ನು ಪರಿಣಾಮಕಾರಿಯಾಗಿ ಪಡೆದುಕೊಳ್ಳುವ ಮೂಲಕ ಅಭಿವೃದ್ಧಿ ಹೊಂದಬೇಕು. ಧರ್ಮದ ಮೇಲೆ ನಂಬಿಕೆ, ಮಾಡುವ ಕೆಲಸದಲ್ಲಿ ಶೃದ್ಧೆ, ಸದಾಚಾರದ ಗುಣಗಳನ್ನು ಮೈಗೂಡಿಸಿಕೊಂಡು ಪ್ರಗತಿಯನ್ನು ಕಾಣಬೇಕು. ಯೋಜನೆಯೊಂದು ಸತ್ಪಾತ್ರರಿಗೆ ತಲುಪಿದಾಗಲೇ ಅದರ ನಿರ್ಮಾತೃರಿಗೆ ಸಂತೋಷ ಕೊಡುತ್ತದೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.
ಕೋಟೇಶ್ವರ ವಕ್ವಾಡಿಯಲ್ಲಿರುವ ಗುರುಕುಲ ವಿದ್ಯಾಸಂಸ್ಥೆಯ ಆವರಣದಲ್ಲಿ ಜರುಗಿದ ಶ್ರೀ ಕ್ಷೇತ್ರ ಗ್ರಾಮಾಭಿವೃದ್ಧಿ ಯೋಜನೆ, ಕುಂದಾಪುರ ತಾಲೂಕು, ಬಸ್ರೂರು ಅಪ್ಪಣ್ಣ ಹೆಗ್ಡೆ ಪ್ರತಿಷ್ಟಾನ, ಗುರುಕುಲ ವಿದ್ಯಾ ಸಂಸ್ಥೆ ವಕ್ವಾಡಿ, ಕೋಟೇಶ್ವರ ಹಾಗೂ ಕುಂದಾಪುರ ತಾಲೂಕು ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟದ ಸಹಯೋಗದಲ್ಲಿ ಹಮ್ಮಿಕೊಳ್ಳಲಾದ ಕೃಷಿ ಉತ್ಸವ, ಬಸ್ರೂರು ಅಪ್ಪಣ್ಣ ಹೆಗ್ಡೆಯವರ 80ರ ಸಂಭ್ರಮ ಕಾರ್ಯಕ್ರಮದಲ್ಲಿ ಅಪ್ಪಣ್ಣ ಹೆಗ್ಡೆ ಅವರನ್ನು ಅಭಿನಂದಿಸಿ, ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಗ್ರಾಮಾಭಿವೃದ್ಧಿ ಯೋಜನೆ ಉತ್ತಮವಾಗಿ ಬೆಳೆದಿದೆ. 5001 ಸಂಘಗಳ ಮೂಲಕ 55620 ಸದಸ್ಯರನ್ನು ತಾಲೂಕು ಹೊಂದಿದೆ. ಸದಸ್ಯರು ರೂ. 21.93ಲಕ್ಷ ಉಳಿತಾಯ ಮಾಡಿದ್ದಾ ೆ. 58,000 ಮಂದಿ ಜೀವನ ಮಧುರ ವಿಮಾದಾರರಾಗಿದ್ದಾರೆ. ಪ್ರಗತಿಬಂಧು ಗುಂಪುಗಳ ಮೂಲಕ ಕೃಷಿಯಲ್ಲಿ ಸಾಧನೆ ಮಾಡಿದ್ದಾರೆ. ಒಟ್ಟಾರೆಯಾಗಿ ಯೋಜನೆ ಇಲ್ಲಿ ಸತ್ಪಾತ್ರರನ್ನು ಪಡೆದಿದೆ ಎಂದರು.
ಸಹನೆ, ದೃಢತೆ, ಆತ್ಮವಿಶ್ವಾಸ ಅಪ್ಪಣ್ಣ ಹೆಗ್ಡೆಯವರಲ್ಲಿ ಇದೆ. ಆತ್ಮಸಾಕ್ಷಿಗೆ ಅನುಗುಣವಾಗಿ ನ್ಯಾಯ ನೀಡುವ ಗುಣ ಅಪ್ಪಣ್ಣ ಹೆಗ್ಡೆಯವರ ಹಿರಿಮೆ. 2004ರಲ್ಲಿ ಕುಂದಾಪುರದಲ್ಲಿ ಗ್ರಾಮಾಭಿವೃದ್ಧಿ ಯೋಜನೆಗೆ ಚಾಲನೆ ನೀಡಿದ ಅಪ್ಪಣ್ಣ ಹೆಗ್ಡೆಯವರ 80ರ ಸಂಭ್ರಮದಲ್ಲಿ 5001ನೇ ಸಂಘ ಉದ್ಘಾಟನೆಯಾಗುವ ಮೂಲಕ ಅಪ್ಪಣ್ಣ ಹೆಗ್ಡೆಯವರು ಸರ್ವಮಾನ್ಯರಾದರು ಎಂದು ಹೆಗ್ಗಡೆಯವರು ಹೇಳಿದರು.
ಬೆಂಗಳೂರಿನ ಶ್ರೀ ರಾಮಕೃಷ್ಣ ಮಠಾಧೀಶ ಶ್ರೀ ತ್ಯಾಗೇಶ್ವರಾನಂದ ಸ್ವಾಮಿಯವರು ಬಸ್ರೂರು ಅಪ್ಪಣ್ಣ ಹೆಗ್ಡೆ ಪ್ರತಿಷ್ಟಾನದ ವತಿಯಿಂದ ಕೊಡಮಾಡುವ ಮೂರು ಲಕ್ಷಕ್ಕೂ ಹೆಚ್ಚು ಸಹಾಯಧನ ವಿತರಣೆಯ ಸಾಂಕೇತಿಕವಾಗಿ ವಿತರಿಸಿ ಮಾತನಾಡಿ, ಋಷಿ ಮುನಿಗಳು ನಮ್ಮ ಪೂರ್ವಿಕರು ಹೇಳಿದ ಶ್ರೇಷ್ಠ ತತ್ವಗಳನ್ನು ಪಾಲಿಸುಉವುದರ ಜೊತೆಯಲ್ಲಿ ನಮ್ಮೊಳಗಿನ ಒಳ್ಳೆಯ ಮನಸ್ಸು ಜಾಗೃತವಾದಾಗ ನಮ್ಮ ಏಳ್ಗೆಗೆ ನಾವೇ ಶಿಲ್ಪಿಗಳಾಗುತ್ತೇವೆ. ಸನ್ನಡತೆ, ಸದಾಚಾರ, ಸತ್ಕರ್ಮಗಳನ್ನು ಪಾಲಿಸುವುದರ ಜೊತೆಗೆ ಮುಂದಿನ ಜನಾಂಗಕ್ಕೆ ಈ ಮೌಲ್ಯಗಳನ್ನು ಹಸ್ತಾಂತರಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.
ಸತ್ಯತೆ, ನಿಸ್ವರ್ಥತೆ, ಪವಿತ್ರ್ಯತೆ ವ್ಯಕ್ತಿಯನ್ನು ಶ್ರೇಷ್ಠತೆಗೇರಿಸುತ್ತದೆ. ಸಮಾಜಕ್ಕೆ ತಮ್ಮಿಂದಾದ ಸಹಕಾರ ನೀಡುವ ಮನೋವೃತ್ತಿ, ಮೌಲ್ಯಯುತ ಜೀವನ ನಡೆಸುವುವ ಮೂಲಕ ಸಾರ್ಥಕ ಜೀವನ ನಡೆಸಲು ಸಾಧ್ಯವಿದೆ. ನಮ್ಮ ಬಾಹ್ಯ ಶ್ರೀಮಂತಿಗೆಗಿಂತ ಹೃದಯ ಶ್ರೀಮಂತಿಗೆ ದೊಡ್ಡದು. ನಾವು ಹೃದಯ ಶ್ರೀಮಂತರಾಗೋಣ ಎಂದು ಶ್ರೀಗಳು ಹೇಳಿದರು.
ಇದೇ ಸಂದರ್ಭದಲ್ಲಿ ಪ್ರೊ. ಬಿ.ಕೆ.ಕೊಣ್ಣೂರು ಯಲ್ಲಟ್ಟಿಯವರಿಗೆ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಬಿ. ಅಪ್ಪಣ್ಣ ಹೆಗ್ಡೆ ಶಿಕ್ಷಣ ಪ್ರಶಸ್ತಿ ಪ್ರಥಮ ಪ್ರಶಸ್ತಿಯನ್ನು ಪ್ರದಾನ ಮಾಡಿ ಗೌರವಿಸಿದರು. ಈ ಸಂದರ್ಭದಲ್ಲಿ ತಾಲೂಕಿನ 5001ನೇ ಪ್ರಗತಿಬಂಧು ತಂಡವನ್ನು ಹೆಗ್ಗಡೆಯವರು ಉದ್ಘಾಟಿಸಿ, ಸರ್ವಮಾನ್ಯ ಎಂದು ನಾಮಕರಣ ಮಾಡಿದರು.
ನಿಟ್ಟೆ ವಿಶ್ವವಿದ್ಯಾನಿಲಯದ ಸಹ ಕುಲಾಧಿಪತಿ ಡಾಎಂ.ಶಾಂತಾರಾಮ ಶೆಟ್ಟಿ ಶುಭಾಶಂಸನೆ ಮಾಡಿದರು. ಮಾಜಿ ಸಚಿವ ಅಮರನಾಥ ಶೆಟ್ಟಿ, ನಾಗರತ್ನ ಅಪ್ಪಣ್ಣ ಹೆಗ್ಡೆ, ಗುರುಕುಲ ವಿದ್ಯಾ ಸಂಸ್ಥೆ ವಕ್ವಾಡಿ ಇದರ ಮ್ಯಾನೇಜಿಂಗ್ ಟ್ರಸ್ಟಿಗಳಾದ ಬಾಂಡ್ಯ ಸುಭಾಶ್ಚಂದ್ರ ಶೆಟ್ಟಿ ಉಪಸ್ಥಿತರಿದ್ದರು.
ಪ್ರಾಂಶುಪಾಲ ಜಯಪ್ರಕಾಶ್ ಮಾವಿನಕುಳಿ ಪ್ರಶಸ್ತಿ ಪುರಸ್ಕೃತರ ಪರಿಚಯಿಸಿದರು. ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಜಿಲ್ಲಾ ನಿರ್ದೇಶಕರ ದುಗ್ಗೆಗೌಡ, ಯೋಜನಾಧಿಕಾರಿ ಅಮರಪ್ರಸಾದ ಶೆಟ್ಟಿ, ಕೇಂದ್ರ ಒಕ್ಕೂಟದ ಅಧ್ಯಕ್ಷ ಚಂದ್ರಶೇಖರ್ ಅಪ್ಪಣ್ಣ ಹೆಗ್ಡೆಯವರನ್ನು ಅಭಿನಂದಿಸಿದರು. ಬಾಂಡ್ಯ ಎಜ್ಯುಕೇಶನ್ ಟ್ರಸ್ಟ್ ಹಾಗೂ ಗುರುಕುಲ ಸಮೂಹ ಸಂಸ್ಥೆಯ ವತಿಯಿಂದ ವೀರೇಂದ್ರ ಹೆಗ್ಗಡೆ ಅವರನ್ನು ಗೌರವಿಸಲಾಯಿತು.
ಪ್ರತಿಷ್ಟಾನದ ಅಧ್ಯಕ್ಷ ರಾಮಕಿಶನ್ ಹೆಗ್ಡೆ ವರದಿ ವಾಚಿಸಿದರು. ಅನುಪಮಾ ಎಸ್ ಶೆಟ್ಟಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಉಪನ್ಯಾಸಕ ಹಳ್ನಾಡು ಪ್ರತಾಪ್ಚಂದ್ರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಗ್ರಾಮಾಭಿವೃದ್ಧಿ ಯೋಜನೆ ಅನುಷ್ಠಾನದಿಂದ ಪರಿವರ್ತನೆಯಾಗಿದೆ. ಕೃಷಿ, ಶಿಕ್ಷಣ, ಮಹಿಳಾ ಜಾಗೃತಿಯ ಮೂಲಕ ಸಚ್ಚಾರೀತ್ರ್ಯತೆ, ಸನ್ನಡತೆಗೆ ಒತ್ತು ಕೊಡುವ ಕೆಲಸ 10ವರ್ಷದಿಂದ ಆಗಿದೆ. ತಾಲೂಕಿನ ಜನರ ಏಳ್ಗೆಯಲ್ಲಿ ನಾನು ಪ್ರಾಮಾಣಿಕವಾಗಿ ನನ್ನ ಕರ್ತವ್ಯ ಮಾಡಿದ್ದೇನೆ. ಆ ಸೇವಾ ಮಹಾ ಭಾಗ್ಯ ನನಗೆ ಲಭಿಸಿದೆ -ಬಿ. ಅಪ್ಪಣ್ಣ ಹೆಗ್ಡೆ
ಶಿಕ್ಷಣಕ್ಕಾಗಿ ದಕ್ಷಿಣ ಕರ್ನಾಟಕದ ಕಡೆಗೆ ಉತ್ತರ ಕರ್ನಾಟಕದ ವಿದ್ಯಾರ್ಥಿಗಳು ವಲಸೆ ಹೋೀಗುವುದನ್ನು ತಪ್ಪಿಸಬೇಕು ಎನ್ನುವ ಸದುದ್ಧೇಶದಿಂದ ನಿರ್ಮಾಣ ಮಾಡಿದ ಶಿಕ್ಷಣ ಸಂಸ್ಥೆಯಲ್ಲಿ 5 ರಾಜ್ಯಗಳ ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತ್ತಿದ್ದಾರೆ. ಡಾ, ಡಿ ವೀರೇಂದ್ರ ಹೆಗ್ಗಡೆಯವರಿಂದ ಪ್ರಶಸ್ತಿ ಸ್ವೀಕರಿಸಿದ ಬಳಿಕ ನನ್ನ ಹುಮ್ಮಸ್ಸು ನೂರ್ಮಡಿಸಿದೆ -ಪ್ರೊ. ಬಿ.ಕೆ.ಕೊಣ್ಣೂರು ಯಲ್ಲಟ್ಟಿ