ಕರಾವಳಿ

ವೆನ್‌ಲಾಕ್ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಹಾಗೂ ಉತ್ತಮ ಚಿಕಿತ್ಸೆ ನೀಡಲು ಸಚಿವರ ಸೂಚನೆ

Pinterest LinkedIn Tumblr

Ut_kadar_press_4

ಮಂಗಳೂರು :ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಅವರು ಬುಧವಾರ ಮಂಗಳೂರಿನ ಸರಕಾರಿ ವೆನ್‍ಲಾಕ್ ಆಸ್ಪತ್ರೆಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿದರು. ಆಸ್ಪತ್ರೆಯಲ್ಲಿ ಈಗ ಇರುವ ವ್ಯವಸ್ಥೆಯನ್ನೆ ಮುಂದುವರಿಸಿಕೊಂಡು ಹೋಗಲು ತಿಳಿಸಿದ ಸಚಿವರು ಇದೇ ವ್ಯವಸ್ಥೆಯಲ್ಲಿ ಅತ್ಯಾಧುನಿಕ ರೀತಿಯ ಚಿಕಿತ್ಸೆ ನೀಡಲು ಕ್ರಮ ಕೈಗೊಳ್ಳುವಂತೆ ಅಸ್ಪತ್ರೆ ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.

ಅಸ್ಪತ್ರೆಯಲ್ಲಿ ಮೂಲ ಸೌಕರ್ಯಗಳನ್ನು ಇನ್ನಷ್ಟು ಅಭಿವೃದ್ಧಿಗೊಳಿಸುವ ಬಗ್ಗೆ ಯೋಜನೆ ರೂಪಿಸಲು ಸಚಿವರು ಅದೇಶ ನೀಡಿದರು. ಪ್ರಮುಖವಾಗಿ ಶಸ್ತ್ರಚಿಕಿತ್ಸೆ ಕೊಠಡಿಯನ್ನು ಆಧುನೀಕರಣಗೊಳಿಸಬೇಕು. ಡಯಾಲಿಸಿಸ್‍ಗೆ ಪ್ರತ್ಯೇಕ ವಿಶೇಷ ವಾರ್ಡ್‍ನ್ನು ತೆರೆಯಬೇಕು.ಅಗತ್ಯವಿದ್ದಲ್ಲಿ ವೆನ್ ಲಾಕ್‍ನಲ್ಲಿ ಡಯಾಲಿಸಿಸ್ ಯಂತ್ರಗಳನ್ನು 10 ಕ್ಕೇರಿಸಲಾಗುವುದು ಎಂದು ಹೇಳಿದರು.

ರಾಜ್ಯದ ಪ್ರತಿಷ್ಠಿತ ಆಸ್ಪತ್ರೆಗಳಾದ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆ,ನಿಮಾನ್ಸ್ ಹಾಗೂ ಜಯದೇವ ಹೃದ್ರೋಗ ಆಸ್ಪತ್ರೆಗಳ ಶಾಖೆಗಳನ್ನು ಮಂಗಳೂರಿನಲ್ಲೂ ಆರಂಭಿಸಲು ಸರಕಾರ ಚಿಂತನೆ ನಡೆಸಿದ್ದು,  ಇದಕ್ಕೆ ಬೇಕಾಗುವ ಜಾಗವನ್ನು ಗುರುತಿಸುವಂತೆ  ಜಿಲ್ಲಾಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು.

ಹಾವು ಕಡಿತಕ್ಕೆ ವಿಶೇಷ ಚಿಕಿತ್ಸೆ ನೀಡಲು ಅಗತ್ಯವಿರುವ ಔಷಧಿಗಳನ್ನು ಎಲ್ಲಾ ಸರಕಾರಿ ಆಸ್ಪತ್ರೆಗಳಿಗೆ ಕಳುಹಿಸಲಾಗಿದೆ. ಹಿಮಪೋಲಿಯಾ ರೋಗಕ್ಕೆ ವೈದ್ಯಕೀಯ ಕಾಲೇಜುಗಳ ಮೂಲಕ ಚಿಕಿತ್ಸೆ ನೀಡಲು ಸರಕಾರ ಯೋಜನೆ ಹಾಕಿಕೊಂಡಿದೆ ಎಂದು ತಿಳಿಸಿದರು.

ಸರಕಾರಿ ಆಸ್ಪತ್ರೆಗಳಲ್ಲಿ ಪಿಜಿ ವಿದ್ಯಾರ್ಥಿಗಳು ಚಿಕಿತ್ಸೆ ನೀಡುವ ಸಂದರ್ಭದಲ್ಲಿ ಅಲ್ಲಿನ ಹಿರಿಯ ವೈದ್ಯರು ಸ್ಥಳದಲ್ಲಿ ಹಾಜರಿರಬೇಕು ಎಂದು ಸೂಚನೆ ನೀಡಿದ ಸಚಿವರು, ಶೀಘ್ರದಲ್ಲೇ ವೆನ್‍ಲಾಕ್ ಆಸ್ಪತ್ರೆಗೆ ಆಡಳಿತಾಧಿಕಾರಿಯನ್ನು ನೇಮಿಸಲಾಗುವುದು ಎಂದು ಹೇಳಿದರು.

ಸಭೆಯಲ್ಲಿ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಜೆ.ಆರ್. ಲೋಬೋ, ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಹಾಗೂ ಇತರ ಅಧಿಕಾರಿಗಳು, ಸಿಬ್ಬಂದಿಗಳು ಪಾಲ್ಗೊಂಡಿದ್ದರು.

Write A Comment