ಕರಾವಳಿ

ರಾಷ್ಟ್ರಮಟ್ಟದ ತುಳುವ ನಡಕೆ ಸ್ಪರ್ಧೆಯಲ್ಲಿ ಸುರತ್ಕಲ್ ಬಂಟರ ಸಂಘಕ್ಕೆ ಪ್ರಶಸ್ತಿ.

Pinterest LinkedIn Tumblr

surathkal_bunts_winner_5

ಸುರತ್ಕಲ್: ಬಂಟರ ಯಾನೆ ನಾಡವರ ಸಂಘ ಪಡುಬಿದ್ರೆ ಇದರ ಆಶ್ರಯದಲ್ಲಿ ಪಡುಬಿದ್ರೆ ಬಂಟರ ಭವನದಲ್ಲಿ ನಡೆದ ರಾಷ್ಟ್ರಮಟ್ಟದ ತುಳುವ ನಡಕೆ ಸ್ಪರ್ಧೆಯಲ್ಲಿ ಸುರತ್ಕಲ್ ಬಂಟರ ಸಂಘವು ಪ್ರಥಮ ಪ್ರಶಸ್ತಿ ಹಾಗೂ 50 ಸಾವಿರ ರೂ.ನಗದನ್ನು ತನ್ನದಾಗಿಸಿಕೊಂಡಿದೆ. ತುಳುವ ನಡಕೆಯಲ್ಲಿ ತುಳುನಾಡಿನ ಆಚಾರ ವಿಚಾರ, ಸಂಸ್ಕೃತಿ ಮತ್ತು ಭಾವೈಕ್ಯತೆಯನ್ನು ಪ್ರದರ್ಶಿಸುವ ಮೂಲಕ ತೀರ್ಪುಗಾರರ ಮೆಚ್ಚುಗೆಗೆ ಪಾತ್ರವಾಯಿತು. ತುಳುವ ನಡಕೆಯಲ್ಲಿ ಪರಶುರಾಮ ಸೃಷ್ಟಿ , ನಾಗಾರಾಧನೆ, ಜನಜೀವನ, ಕೃಷಿ ಚಟುವಟಿಕೆ. ತುಳುನಾಡ ಸಂಸ್ಕೃತಿ, ಸೀಮಂತ ಆಚರಣೆ, ಯಕ್ಷಗಾನ, ದೈವಾರಾಧನೆ, ತುಳು ನಾಡಿನ ವೀರ ಪುರುಷರು, ಉತ್ತರಕ್ರಿಯೆ ಮೊದಲಾದ ವಿಚಾರಗಳನ್ನು ತುಳುವ ನಡಕೆಯಲ್ಲಿ ಅಳವಡಿಸಲಾಗಿತ್ತು.

surathkal_bunts_winner_2

ಸುಮಾರು ಅರ್ಧಗಂಟೆಯ ಸ್ಕಿಟ್‌ನಲ್ಲಿ ಒಕ್ಕೆಲಾಯ, ಮೀನುಗಾರ, ಮೂರ್ತೆದಾರ, ಕುಂಬಾರ, ಕ್ರೈಸ್ತ, ಮುಸ್ಲಿಂ, ಬಡಗಿ, ಹೀಗೆ ಎಲ್ಲಾ ಸಮುದಾಯದವರು ಕೃಷಿ ಚಟುವಟಿಕೆಯಲ್ಲಿ ತೊಡಗುವ ದೃಶ್ಯವನ್ನು ತೋರಿಸಲಾಯಿತು. ಅದೇ ರೀತಿ ಗುತ್ತಿನ ಮನೆ, ತೆನೆ ಕಟ್ಟುವುದು, ಬಲೀಂದ್ರ ಪೂಜೆ, ತುಡರ್, ಗೋಪೂಜೆ, ಕೊಜಂಬು, ಕರಪತ್ತವುನು, ಕೆಡ್ಡೆಸ, ಮುಂತಾದ ಆಚರಣೆಗಳನ್ನು ಪ್ರದರ್ಶಿಸಲಾಯಿತು. ‘ಪುಟ್ಟಿ ನರಮಾನಿ ಸೈಯೆರೆ ಉಂಡು ಉಂದುವೇ ಜಗದ ನಿಯಮ, ತುಳುವ ನಾಡ್‌ಡ್ ಪುಟ್ಟಿನವೇ ನಮ್ಮ ಸಾರ ಜನ್ಮ ಪುಣ್ಯ, ಒರಿಪುಗ ತುಳುವನಾಡ ಧರ್ಮ’ ಎನ್ನುವ ಕ್ಲೈಮ್ಯಾಕ್ಸ್ ಹಾಡು ನೆರೆದ ಪ್ರೇಕ್ಷಕರಿಂದ ಪ್ರಶಂಸೆಗೆ ಪಾತ್ರವಾಯಿತು.

surathkal_bunts_winner_3

ನವೀನ್ ಶೆಟ್ಟಿ, ಅಳಕೆಯವರ ಸಾಹಿತ್ಯ, ಮತ್ತು ನಿರ್ದೇಶನದಲ್ಲಿ ಮೂಡಿ ಬಂದ ತುಳುವ ನಡಕೆಯಲ್ಲಿ ಮೂರು ತಿಂಗಳ ಮಗುವಿನಿಂದ 80 ವರ್ಷದ ವೃದ್ದರ ತನಕ ಸುಮಾರು 102 ಮಂದಿ ಕಲಾವಿದರು ಬಣ್ಣ ಹಚ್ಚಿದ್ದರು. ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಉಲ್ಲಾಸ್ ಆರ್.ಶೆಟ್ಟಿ, ಉಪಾಧ್ಯಕ್ಷ ಸುಧಾಕರ ಪೂಂಜ ಮತ್ತು ಸಾಂಸ್ಕೃತಿಕ ಕಾರ್ಯದರ್ಶಿ ಲೀಲಾಧರ ಶೆಟ್ಟಿಯವರ ನೇತೃತ್ವದಲ್ಲಿ ತಂಡ ಭಾಗವಹಿಸಿತ್ತು.ಬಂಟರ ಯಾನೆ ನಾಡವರ ಮಾತೃಸಂಘದ ಅಧ್ಯಕ್ಷ ಅಜಿತ್‌ಕುಮಾರ್ ರೈ ಮಾಲಾಡಿ ಮತ್ತು ಉದ್ಯಮಿ ಪ್ರಕಾಶ್ ಶೆಟ್ಟಿ ಬಂಜಾರ ಸುರತ್ಕಲ್ ಬಂಟರ ಸಂಘಕ್ಕೆ ಪ್ರಶಸ್ತಿ ಹಸ್ತಾಂತರಿಸಿದರು.

surathkal_bunts_winner_4

ಸಮಾರಂಭದಲ್ಲಿ ಸುರೇಶ್ ಶೆಟ್ಟಿ ಬಳ್ಳಾರಿ, ಡಾ.ಆಶಾ ಜ್ಯೋತಿ ರೈ, ಎರ್ಮಾಳ್ ಚಂದ್ರಹಾಸ ಶೆಟ್ಟಿ ಪುಣೆ, ಸಂಗೀತ ನಿರ್ದೇಶಕ ಗುರುಕಿರಣ್, ವಿಜಯಕುಮಾರ್ ಕೊಡಿಯಾಲ್ ಬೈಲ್, ಪ್ರಜ್ವಲ್ ದೇವರಾಜ್, ಹಾಗೂ ಪಡುಬಿದ್ರೆ ಬಂಟರ ಸಂಘದ ಅಧ್ಯಕ್ಷ ನವೀನ್ ಚಂದ್ರ ಶೆಟ್ಟಿ ಉಪಸ್ಥಿತರಿದ್ದರು.ಗುರುಪುರ ಬಂಟರ ಸಂಘ ದ್ವಿತೀಯ, ಉಳ್ಳಾಲ ಬಂಟರ ಸಂಘ ತೃತೀಯ ಪ್ರಶಸ್ತಿ ಪಡೆಯಿತು. ತೀರ್ಪುಗಾರರಾಗಿ ಅಶೋಕ್ ಆಳ್ವ, ನಾರಾಯಣ ಶೆಟ್ಟಿ ನಂದಳಿಕೆ, ದಿನೇಶ್ ಅತ್ತಾವರ್ ಸಹಕರಿಸಿದರು. ಡಾ.ವೈ.ಎನ್.ಶೆಟ್ಟಿ ಸಮನ್ವಯಕಾರರಾಗಿದ್ದರು. ನವೀನ್ ಶೆಟ್ಟಿ ಎಡ್ಮೆಮಾರ್ ಕಾರ್ಯಕ್ರಮ ನಿರ್ವಹಿಸಿದರು.

Write A Comment