ಕರಾವಳಿ

ತೀರ್ಥಹಳ್ಳಿ ಬಾಲಕಿ ಅಪಹರಣ,ಕೊಲೆ ಪ್ರಕರಣ – ಕಾರ್ಣಿಕ್ ದಿಗ್ಭ್ರಮೆ.

Pinterest LinkedIn Tumblr

ganesh-karnik-pic_1

ಮಂಗಳೂರು : ತೀರ್ಥಹಳ್ಳಿಯಲ್ಲಿ ನಡೆದ ಅಪ್ರಾಪ್ತ ಹಾಗೂ ಮುಗ್ದ ಶಾಲಾ ಬಾಲಕಿಯ ಅಪಹರಣ, ಅತ್ಯಾಚಾರ ಹಾಗೂ ಕೊಲೆ ಪ್ರಕರಣ ತೀವ್ರ ಅಮಾನುಷವಾಗಿದ್ದು, ರಾಕ್ಷಸೀ ಪ್ರವೃತ್ತಿಯಾಗಿದೆ. ಈ ರೀತಿಯ ಪ್ರಕರಣಗಳು ರಾಜ್ಯದೆಲ್ಲಡೆ ದಿನೇ ದಿನೇ ಹೆಚ್ಚುತ್ತಿರುವುದು ದಿಗ್ಬ್ರಮೆ ಉಂಟುಮಾಡಿದೆ. ರಾಜ್ಯದಲ್ಲಿ ಕಾಂಗ್ರೇಸ್ ಸರ್ಕಾರವು ಅಧಿಕಾರಕ್ಕೆ ಬಂದ ದಿನದಿಂದಲೂ ಒಂದಲ್ಲ ಒಂದು ಕಡೆ ಪ್ರತಿನಿತ್ಯವೂ ಈ ರೀತಿಯ ಅಮಾನುಷ ಕೃತ್ಯಗಳು ನಡೆಯುತ್ತಿರುವುದು ರಾಜ್ಯದಲ್ಲಿ ಆಡಳಿತ ಸಂಪೂರ್ಣ ಹದಗೆಟ್ಟಿರುವುದಕ್ಕೆ ಹಿಡಿದ ಕೈಗನ್ನಡಿ ಎಂದು ವಿಧಾನ ಪರಿಷತ್‌ನ ಮಾಜಿ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮಹಿಳೆಯರಿಗೆ ಹಾಗೂ ಶಾಲಾ ಬಾಲಕಿಯರಿಗೆ ಭದ್ರತೆ ನೀಡುವಲ್ಲಿ ರಾಜ್ಯದ ಪೊಲೀಸ್ ಇಲಾಖೆಯನ್ನು ಜಾಗೃತ ಗೊಳಿಸುವ ಅವಶ್ಯಕತೆ ಇದೆ. ಈ ಪ್ರಕರಣವನ್ನು ಭೇದಿಸುವಲ್ಲಿ ಸರ್ಕಾರವು ಕೂಡಲೇ ಕ್ರಮಕೈಗೊಂಡು ಸಮಾಜಘಾತಕ ಅಪರಾಧಿಗಳು ಯಾವುದೇ ಹಿನ್ನಲೆಯನ್ನು ಹೊಂದಿದ್ದರೂ ಕೂಡಲೇ ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸುವ ಮೂಲಕ ಮುಗ್ದ ಬಾಲಕಿಯ ಪೋಷಕರಿಗೆ ನ್ಯಾಯ ಒದಗಿಸಿ ಸಮಾಜಕ್ಕೆ ಸ್ಥೈರ್ಯ ತುಂಬ ಬೇಕು ಎಂದು ಅವರು ಆಗ್ರಹಿಸಿದ್ದಾರೆ.

Write A Comment