ಕರಾವಳಿ

ಭಕ್ತರನ್ನು ಕೈ ಬೀಸಿ ಕರೆಯುವ ಮೂಡುಗಲ್ಲು ಕೇಶವನಾಥ ಗುಹಾ ದೇವಾಲಯ..

Pinterest LinkedIn Tumblr

modugallu_news_photo_2

ಪರಶುರಾಮ ಸೃಷ್ಟಿಯ ತುಳುನಾಡು ಹಲವಾರು ಪುರಾತನ ದೇಗುಲಗಳ ತವರೂರು. ಇಲ್ಲಿನ ಅನೇಕ ದೇವಸ್ಥಾನಗಳು ತನ್ನದೇ ಆದ ವೈಶಿಷ್ಟ್ಯ, ಇತಿಹಾಸಗಳಿಂದ ಪ್ರಾಮುಖ್ಯತೆ ಪಡೆದಿದ್ದು ಇಂದಿಗೂ ಭಕ್ತರಿಂದ ಆರಾಧಿಸ್ಪಡುತ್ತಿದೆ. ಹೀಗೆ ಆರಾಧಿಸ್ಪಡುತ್ತಿರುವ ಪ್ರಮುಖ ದೇವಸ್ಥಾನಗಳಲ್ಲಿ ಕುಂದಾಪುರ ತಾಲೂಕಿನ ಕೆರಾಡಿ ಗ್ರಾಮದ ಮೂಡುಗಲ್ಲಿನ ಕೇಶವನಾಥ ಗುಹಾಂತರ ದೇವಸ್ಥಾನವು ಒಂದಾಗಿದ್ದು ಮಹತ್ವ ಪಡೆದಿದೆ.

ಕ್ಷೇತ್ರದ ಇತಿಹಾಸ:
ಒಮ್ಮೆ ಭೂಮಿಗೆ ಬಂದ ದೇವತೆಗಳು ವಂಡಾರು ಕಂಬಳ ಗದ್ದೆ ಹಾಗೂ ಕೆರಾಡಿ ಕಂಬಳ ಗದ್ದೆಗಳನ್ನು ಒಂದೇ ದಿನ ನಿರ್ಮಾಣ ಮಾಡುತ್ತಾರೆ. ಈ ರೀತಿಯಲ್ಲಿ ವೇಗವಾಗಿ ಸಾಗುತ್ತಿರುವ ದೇವತೆಗಳ ನಿರ್ಮಾಣ ಕಾರ್ಯದಿಂದ ಅಪಾಯವಿದೆ ಎಂದರಿತ ಶ್ರೀಕೃಷ್ಣ ನು ಕೋಳಿಯಾಗಿ ಕೂಗುವ ಮೂಲಕ ದೇವತೆಗಳ ಕಾರ್ಯಕ್ಕೆ ಭಂಗ ತರಲು ಪ್ರಯತ್ನಿಸುತ್ತಾನೆ.

modugallu_news_photo_1

ಕೃಷ್ಣ ನು ಕೋಳಿಯಾಗಿ ಕೂಗುವ ಸಮಯದಲ್ಲಿ ದೇವತೆಗಳು ಹಲಸಿನ ಹಣ್ಣನ್ನು ತಿನ್ನುತ್ತಿರುತ್ತಾರೆ . ಕೋಳಿಯ ಕೂಗಿಗೆ ಬೆಳಗಾಯಿತೆಂದು ಗಾಬರಿಗೊಂಡ ದೇವತೆಗಳು ಹಲಸಿನ ಹಣ್ಣನ್ನು ಬಿಟ್ಟು ತೆರಳುತ್ತಾರೆ. ಇಂದಿನ ಕಲ್ಲಿನ ರೂಪದ ಹಲಸಿನ ಹಣ್ಣಿನ ಕುರುಹುಗಳನ್ನು ಕಾಣಬಹುದಾಗಿದೆ .

ಗಾಬರಿಯಿಂದ ಓಡುವ ದೇವತೆಗಳು ಮೂಡಗಲ್ಲು ಊರಿನ ಸಮೀಪಕ್ಕೆ ಬಂದಾಗ ಬೆಳಗಾಗುತ್ತದೆ . ಈ ಸಂದರ್ಭ ದೇವತೆಗಳು ಸಮೀಪದಲ್ಲಿರುವ ಚಿಕ್ಕ ಗುಹೆಯನ್ನು ಪ್ರವೇಶಿಸಿ ಅಡಗಿಕೊಳ್ಳುತ್ತಾರೆ. ಇದನ್ನರಿತ ಕೃಷ್ಣನು ಗುಹೆಯ ಸುತ್ತ ಭದ್ರ ಕೋಟೆಯನ್ನು ಕಟ್ಟಿದ ಎನ್ನಲಾಗಿದೆ.
ಮುಂದೆ ಋಷಿಮುನಿಗಳು ಕಾಶಿಯಲ್ಲಿ ನೆಲೆಸಿರುವ ಶಿವನನ್ನು ಕುರಿತಾಗಿ ಗುಹೆಯಲ್ಲಿ ಕಠಿಣ ತಪಸ್ಸು ಮಾಡುತ್ತಾರೆ. ಮುನಿಗಳ ತಪ್ಪಸ್ಸಿಗೆ ಮೆಚ್ಚಿದ ಶಿವನು ಕೇಶವನಾಥೇಶ್ವರ ರೂಪದಲ್ಲಿ ಪ್ರತ್ಯಕ್ಷನಾಗಿ ಹಾರುಸುತ್ತಾನೆ. ನಂತರ ಪರಶಿವನು ಗುಹೆಯ ಮೂಲಕವೇ ಮರಳಿ ಕಾಶಿಯನ್ನು ತಲುಪಿದ್ದಾನೆ ಎಂಬ ಪ್ರತೀತಿ ಇದೆ.

modugallu_news_photo_3

ಕ್ಷೇತ್ರದ ವೈಶಿಷ್ಟ್ಯತೆ:
ಕೇಶವನಾಥ ಗುಹಾಂತರ ದೇವಸ್ಥಾನವು 8 ಅಡಿ ಎತ್ತರವಾಗಿದ್ದು 100 ಅಡಿಗಳಷ್ಟು ಗುಹೆಯೊಳಗೆ ಸಾಗಿ ಕೇಶವನಾಥೇಶ್ವರನ ದರ್ಶನ ಪಡೆಯಬಹುದು. ಗುಹೆಯ ಒಳಭಾಗವು ಸುಮಾರು 200 ಜನರು ನಿಲ್ಲುವಷ್ಟು ವಿಶಾಲವಾಗಿದೆ. ಈ ಗುಹೆಯಲ್ಲಿ ಎಲ್ಲ ಹರಿಯುವ ನೀರಿನಲ್ಲಿ ಮೀನುಗಳು, ಹಾವುಗಳು ವಾಸವಾಗಿದ್ದು ಗುಹೆಗೆ ಬರುವ ಭಕ್ತರಿಗೆ ಇಂದಿಗೂ ಯಾವುದೇ ರೀತಿಯ ತೊಂದರೆಯಾಗಿಲ್ಲ. ಗುಹೆಗೆ ಸಮಾನಂತರವಾಗಿ ಅಶ್ವಥಕಟ್ಟೆಯಿದ್ದು , ರಾತ್ರಿಯಲ್ಲಿ ಅಶ್ವಥಕಟ್ಟೆಗೂ ಗುಹೆಗೂ ನೇರಾ ಬೆಳಕಿನ ರೇಖೆಗಳು ಹಾದು ಹೋಗುವುದನ್ನು ಗಮನಿಸಿರುವುದಾಗಿ ಕ್ಷೇತ್ರದ ಆರ್ಚಕರಾದ ರಾಘವೇಂದ್ರ ಕುಂಜತ್ತಾಯ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ಎಳ್ಳಮವಾಸ್ಯೆಯಂದು ವಿಶೇಷ ಜಾತ್ರೆ:
ಪ್ರತಿ ವರ್ಷವು ಎಳ್ಳು ಅಮವಾಸೆಯ ದಿನದಂದು ಇಲ್ಲಿನ ಜಾತ್ರೆ ನಡೆಯುತ್ತದೆ. ಅಂದು ಜನರು ಬೆಳಿಗ್ಗೆ 4ಗಂಟೆಯಿಂದಲೇ ತೀರ್ಥಸ್ನಾನವನ್ನು ಮಾಡುತ್ತಾರೆ. ಎಳ್ಳಮವಾಸ್ಯೆಯ ದಿನ ಶಿವನಿಗೆ ವಿಶೇಷವಾದ ಪೂಜೆ, ಅಭಿಷೇಕಗಳು , ಅನ್ನಧಾನ ಸೇವೆಗಳು ನಡೆಯುತ್ತದೆ.

ಹೋಗುವುದು ಹೇಗೆ..?
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನಿಂದ 35ಕಿ.ಮೀ ದೂರ ಪ್ರಯಾಣಿಸಿ ಕೆರಾಡಿ ಗ್ರಾಮ ತಲುಪಬೇಕು. ಅಲ್ಲಿಂದ ಮುಂದೆ 4 ಕಿ.ಮೀ. ಪ್ರಯಾಣಿಸಿ ಮೂಡುಗಲ್ಲಿನಲ್ಲಿ ಕೇಶವನಾಥ ಗುಹಾಂತರ ದೇವಸ್ಥಾನವನ್ನು ತಲುಪಬಹುದು.
ವರದಿ ಕೃಪೆ : ರವಿರಾಜ್ ಕಟೀಲು

Write A Comment