ಕುಂದಾಪುರ: ನವರಾತ್ರಿಯ ವಿಶೇಷ ದಿನ ಮಹನವಮಿಯ ದಿನವಾದ ಶುಕ್ರವಾರ ಕುಂದಾಪುರ ತಾಲೂಕಿನ ಎಲ್ಲೇಡೆ ಆಯುಧ ಪೂಜೆ ಹಾಗೂ ವಾಹನ ಪೂಜಾ ಕೈಂಕರ್ಯಗಳ ಸಂಭ್ರಮ ಜೋರಾಗಿತ್ತು. ಕೊಲ್ಲೂರು, ಆನೆಗುಡ್ಡೆ ವಿನಾಯಕ ದೇವಸ್ಥಾನ, ಹಟ್ಟಿಯಂಗಡಿ ಮಾರಲದೇವಿ ದೇವಸ್ಥಾನ, ಮಂದರ್ತಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಕಮಲಶಿಲೆ ಬ್ರಾಹ್ಮೀ ದುರ್ಗಾಪರಮೇಶ್ವರಿ ದೇವಸ್ಥಾನ, ಕೋಟ ಅಮ್ರಥೇಶ್ವರಿ ದೇವಸ್ಥಾನ ಸೇರಿದಂತೆ ತಾಲೂಕಿನ ಪ್ರಸಿದ್ಧ ದೇವಿ ದೇವಸ್ಥಾನಗಳಲ್ಲಿ ಭಕ್ತರ ಸಂಖ್ಯೆ ಅಧಿಕ ಸಂಖ್ಯೆಯಲ್ಲಿತ್ತು. ಇನ್ನು ವಾಹನ ಪೂಜೆಯ ನಿಮಿತ್ತ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ಸಾವಿರಾರು ವಾಹನಗಳಿಗೆ ಪೂಜೆ ಮಾಡಿಸಿ ಭಕ್ತರು ಪೂಜೆ ಸಲ್ಲಿಸಿದರು.
ಕುಂದಾಪುರ ಪುರಸಭೆಯಲ್ಲಿ ಆಯುಧಪೂಜೆ ಆಚರಣೆ:
ಕುಂದಾಪುರ ಪುರಸಭೆಯಲ್ಲಿ ಬೆಳಿಗ್ಗೆ ಸಂಭ್ರಮದಿಂದ ಆಯುಧ ಪೂಜೆ ಹಾಗೂ ವಾಹನ ಪೂಜೆಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಪುರಸಭಾಧ್ಯಕ್ಷೆ ಕಲಾವತಿ ದೇವಿ ಆರಾಧನೆಯನ್ನು ಅರ್ಚಕರ ಸಮ್ಮುಖದಲ್ಲಿ ನೆರವೇರಿಸಿದರು. ಕುಂದಾಪುರ ಪುರಸಭೆಗೆ ಸಂಬಂಧಿಸಿದ ಎಲ್ಲಾ ವಾಹನಗಳು ಹಾಗೂ ಹಾರೆ ಮೊದಲಾದ ಸಲಕರಣೆಗಳಿಗೆ ಈ ಸಂದರ್ಭ ಪೂಜೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಪುರಸಭೆಯ ಉಪಾಧ್ಯಕ್ಷ ನಾಗರಾಜ ಕಾಮಧೇನು ಹಾಗೂ ಸರ್ವ ಪುರಸಭೆ ಸದಸ್ಯರು ಉಪಸ್ಥಿತರಿದ್ದರು.
ಕುಂದಾಪುರ ಪೊಲೀಸ್ ಠಾಣೆಯಲ್ಲಿ ಆಯುಧ ಪೂಜೆ
ಕುಂದಾಪುರ ಪೊಲೀಸ್ ಠಾಣೆ ಹಾಗೂ ಸಂಚಾರಿ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ಬೆಳಿಗ್ಗೆ ಆಯುಧಪೂಜೆಯನ್ನು ಅರ್ಚಕರ ಸಮ್ಮುಖದಲ್ಲಿ ನೆರವೇರಿಸಲಾಯಿತು. ಕುಂದಾಪುರ ಡಿವೈಎಸ್ಪಿ ಸಿ.ಬಿ. ಪಾಟೀಲ್, ವ್ರತ್ತನಿರೀಕ್ಷಕ ದಿವಾಕರ ಪಿ.ಎಂ. ಹಾಗೂ ಠಾಣಾಧಿಕಾರಿ ನಾಸೀರ್ ಹುಸೇನ್, ಸಂಚಾರಿ ಠಾಣೆ ಉಪನಿರೀಖ್ಶಕರಾದ ಇಮ್ರಾನ್ ಕೆ.ಎಸ್., ದೇವೇಂದ್ರ ಮೊದಲಾದವರು, ಸರ್ವ ಸಿಬ್ಬಂಧಿಗಳು ಉಪಸ್ಥಿತರಿದ್ದು ಬಂದೂಕು ಮೊದಲಾದ ಆಯುಧ ಸೇರಿದಂತೆ ಪೊಲೀಸ್ ಇಲಾಖೆಯ ವಾಹನಗಳಿಗೆ ಪೂಜೆ ಸಲ್ಲಿಸಿದರು.








































