ಮನೋರಂಜನೆ

ಮಾಡಿದರೆ ಇಂಥ ಚಿತ್ರ ಮಾಡಬೇಕು!: ಮಗನ ಮಾತು ಕೇಳಿ ಸಿನಿಮಾ ಮಾಡಿದ ಅಪ್ಪ

Pinterest LinkedIn Tumblr


ಅವರು ತಮ್ಮ ಮಗನೊಂದಿಗೆ ಒಂದು ನಾಟಕ ನೋಡಲು ಹೋಗುತ್ತಾರೆ. ಅವರ ಮಗನಿಗೆ ಆ ನಾಟಕ ತುಂಬಾ ಇಷ್ಟವಾಗುತ್ತೆ. ಆ ರೂಪಕ ನೋಡಿದ ಮಗ, “ನೀವು ಮಾಡಿದರೆ, ಈ ರೀತಿಯ ಸಿನಿಮಾ ಮಾಡಿ’ ಅಂತ ತನ್ನ ತಂದೆ ಬಳಿ ಹೇಳುತ್ತಾನೆ.

ಆಗ ಅವರ ಮನಸ್ಸಲ್ಲಿ ಪುಟ್ಟ ಹುಡುಗನ ಮನಸ್ಸಲ್ಲಿ ದೊಡ್ಡ ಆಲೋಚನೆ ಬಂದಿದೆ ಅಂದರೆ, ನಾಟಕ ಎಷ್ಟೊಂದು ಪ್ರಭಾವ ಬೀರಿರಬೇಕು ಅಂತ ಅರ್ಥಮಾಡಿಕೊಂಡು, ಆ ನಾಟಕವನ್ನೇ ಚಿತ್ರ ಮಾಡೋಕೆ ಮುಂದಾಗುತ್ತಾರೆ. ಈಗಾಗಲೇ ಆ ಚಿತ್ರ ಶೇ.95 ರಷ್ಟು ಚಿತ್ರೀಕರಣಗೊಂಡಿದೆ! ಮಗನ ಮಾತು ಕೇಳಿ ಆ ನಾಟಕ ಮಾಡಿದ ನಿರ್ದೇಶಕ ಬೇರಾರೂ ಅಲ್ಲ, ಟಿ.ಎನ್‌.ನಾಗೇಶ್‌. ಅವರು ವೀಕ್ಷಿಸಿದ ನಾಟಕ “ರಾಮ ಧಾನ್ಯ’ ಎಂಬ ರೂಪಕ.

ಈಗಾಗಲೇ ನೂರಾರು ಪ್ರದರ್ಶನ ಕಂಡು ಎಲ್ಲೆಡೆ ಮೆಚ್ಚುಗೆ ಪಡೆದಿರುವ ನಾಟಕವನ್ನು ಸಿನಿಮಾಗೆ ಅಳವಡಿಸಿದ್ದಾರೆ ನಾಗೇಶ್‌. ಈ ಕಥೆ ಹೇಳಿದ ಕೂಡಲೇ ಹತ್ತು ಮಂದಿ ಹಣ ಹಾಕಲು ಮುಂದಾಗಿದ್ದಾರೆ. ಹಾಗಾಗಿ ದಶಮುಖ ವೆಂಚರ್ ಎಂಬ ಬ್ಯಾನರ್‌ ಹುಟ್ಟುಹಾಕಿ, ಆ ಹೆಸರಿನ ಮೇಲೆ ನಾಟಕವನ್ನು ಚಿತ್ರರೂಪಕ್ಕೆ ಅಳವಡಿಸಿದ್ದಾರೆ.

ಇದು ಕನಕದಾಸರ ಮೂಲಜಾಗವಾಗಿರುವ ಕಾಗೀನೆಲೆ, ಹಾವೇರಿ , ಬಂಕಾಪುರ, ಬೆಂಗಳೂರು ಕಡೆಗಳಲ್ಲಿ ಚಿತ್ರೀಕರಣಗೊಂಡಿದೆ. ಇದು ಪೌರಾಣಿಕ, ಐತಿಹಾಸಿಕ ಮತ್ತು ಸಾಮಾಜಿಕ ಹೀಗೆ ಮೂರು ಕಾಲಘಟ್ಟದಲ್ಲಿ ನಡೆಯುವ ಕಥೆ ಆಗಿರುವುದರಿಂದ ಅದೇ ರೀತಿಯ ಪಾತ್ರಗಳು, ತಾಣಗಳು ಇಲ್ಲಿರಲಿವೆ. ಕನಕದಾಸರ ಜೀವನದ ಕೆಲವು ಪ್ರಮುಖ ಘಟನೆಗಳು ಇಲ್ಲಿನ ಹೈಲೈಟ್‌.

ಸಾಮಾನ್ಯ ವ್ಯಕ್ತಿಯೊಬ್ಬ, ಕನಕದಾಸ ಮತ್ತು ದಂಡನಾಯಕನ ಕನಸು ಕಂಡಾಗ ಯಾವ ರೀತಿ ಇರುತ್ತಾನೆ ಎಂಬ ಪಾತ್ರದಲ್ಲಿ ಯಶಸ್‌ ಸೂರ್ಯ ನಟಿಸಿದ್ದಾರೆ. ಅವರಿಗೆ ನಟಿಸುವ ವೇಳೆ, ತಾನು ಯಾವ ಕಾಲಘಟ್ಟದ ಪಾತ್ರ ಮಾಡುತ್ತಿದೇನೆಂದು ಗೊಂದಲವಾಗಿತ್ತಂತೆ. ನಿಮಿಕಾ ರತ್ನಾಕರ್‌ ಅವರಿಗೆ ಇದು ಮೊದಲ ಕನ್ನಡ ಸಿನಿಮಾ. ಈ ಹಿಂದೆ ಅವರು ತುಳು ಚಿತ್ರದಲ್ಲಿ ನಟಿಸಿ ಬಂದಿದ್ದಾರೆ. ಉಳಿದಂತೆ ಚಿತ್ರದಲ್ಲಿ ಎನ್‌.ಟಿ.ರಾಮಸ್ವಾಮಿ ನಾಯಕನ ತಂದೆ ಪಾತ್ರ ನಿರ್ವಹಿಸಿದ್ದಾರೆ.

ಚಿತ್ರದಲ್ಲಿ ಸುಮಾರು 85 ಕಲಾವಿದರು ಕಾಣಿಸಿಕೊಂಡಿದ್ದಾರೆ. ಕನಕದಾಸರ ವಚನಗಳು ಮತ್ತು ಡಾ.ನಾಗೇಂದ್ರಪ್ರಸಾದ್‌ ಬರೆದಿರುವ ಗೀತೆಗಳಿಗೆ ಹಂಸಲೇಖ ಶಿಷ್ಯ ದೇಸಿ ಮೋಹನ್‌ ಸಂಗೀತ ನೀಡಿದ್ದಾರೆ. ಬೆನಕ ರಾಜು ಕ್ಯಾಮೆರಾ ಹಿಡಿದರೆ, ಕುಂಗ್ಫು ಚಂದ್ರು ಮತ್ತು “ಕೌರವ’ ವೆಂಕಟೇಶ್‌ ಸಾಹಸ ಮಾಡಿದ್ದಾರೆ.

-ಉದಯವಾಣಿ

Comments are closed.