ಲಾಗೋಸ್: ದಕ್ಷಿಣ ನೈಜೀರಿಯಾದಲ್ಲಿ ನಿರ್ಮಾಣ ಹಂತದ ಚರ್ಚ್ ವೊಂದು ಕುಸಿದುಬಿದ್ದ ಪರಿಣಾಮ ಸ್ಥಳದಲ್ಲಿಯೇ 60 ಮಂದಿ ದುರ್ಮರಣವನ್ನಪ್ಪಿ, ಹಲವರಿಗೆ ಗಾಯವಾಗಿರುವ ಘಟನೆ ಶನಿವಾರ ನಡೆದಿದೆ.
ಅಕ್ವಾ ಇಬೋಂ ರಾಜ್ಯದ ರಾಜಧಾನಿ ಯುಯೋನಲ್ಲಿರುವ ಬೈಬಲ್ ಅಂತರಾಷ್ಟ್ರೀಯ ಚರ್ಚ್ ಕುಸಿದುಬಿದಿದೆ. ಚರ್ಚ್ ನಲ್ಲಿ ಇನ್ನೂ ನಿರ್ಮಾಣ ಹಂತದ ಕಾರ್ಯಗಳು ನಡೆಯುತ್ತಿತ್ತು. ಇನ್ನು ಕೆಲವೇ ದಿನಗಳಲ್ಲಿ ನಿರ್ಮಾಣ ಪೂರ್ಣಗೊಳ್ಳಲಿತ್ತು. ಅಷ್ಟರಲ್ಲಾಗಲೇ ದುರಂತ ಸಂಭವಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಚರ್ಚ್ ನಲ್ಲಿ ನೈಜೀರಿಯಾದ ರಾಜ್ಯಪಾಲ ಉಡೋಮ್ ಗೇಬ್ರಿಯಲ್ ಎಮ್ಯಾನುಯೆಲ್ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಜನರು ಪ್ರಾರ್ಥನೆ ಸಲ್ಲಿಸುತ್ತದ್ದರು. ಈ ವೇಳೆ ಚರ್ಚ್ ನ ಮೇಲ್ಛಾವಣಿ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದೆ. ಪರಿಣಾಮ ದುರಂತದಲ್ಲಿ 60 ಮಂದಿ ಸಾವನ್ನಪ್ಪಿದ್ದು, ಹವರಿಗೆ ಗಾಯವಾಗಿದೆ. ರಾಜ್ಯಪಾಲ ಉಡೋಮ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆಂದು ಅಲ್ಲಿನ ಸರ್ಕಾರ ಹೇಳಿಕೊಂಡಿದೆ.
ಅವಶೇಷಗಳಡಿ ಸಿಲುಕಿದ್ದ ಮೃತ ದೇಹಗಳನ್ನು ಈಗಾಗಲೇ ಹೊರ ತೆಗೆಯಲಾಗಿದ್ದು, ಗಾಯಾಳುಗಳನ್ನು ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಪ್ರಸ್ತುತ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಘಟನೆ ಕುರಿತಂತೆ ನೈಜೀರಿಯಾ ರಾಜ್ಯಪಾಲರ ವಕ್ತಾರ ಹೇಳಿಕೆ ನೀಡಿದ್ದು, ಘಟನೆ ಕುರಿತಂತೆ ಈಗಾಗಲೇ ತನಿಖೆಗೆ ಆದೇಶಿಸಲಾಗಿದ್ದು, ತಪ್ಪಿತಸ್ಥರ ವಿರುದ್ಧ ಸರ್ಕಾರ ಕಠಿಣ ಕ್ರಮಕೈಗೊಳ್ಳಲಿದೆ. ಭ್ರಷ್ಟಾಚಾರ ಹಾಗೂ ಗುತ್ತಿಗೆದಾರರು ಕಡಿಮೆ ಗುಣಮಟ್ಟದ ವಸ್ತುಗಳನ್ನು ಬಳಕೆ ಮಾಡುತ್ತಿರುವುದರಿಂದಾಗಿ ನೈಜೀರಿಯಾದಲ್ಲಿ ಕಟ್ಟಡಗಳ ಕುಸಿತ ಸಾಮಾನ್ಯವಾಗಿ ಹೋಗಿದೆ ಎಂದು ಹೇಳಿದ್ದಾರೆ.