ಅಂತರಾಷ್ಟ್ರೀಯ

ಸಂಬಳವು ಬೇಡ, ರಜೆಯು ಬೇಡ… ಏನೇ ಇದ್ದರು ಅಭಿವೃದ್ಧಿ ಕೆಲಸಗಳತ್ತ ತನ್ನ ಚಿತ್ತ ಎಂದ ಅಮೆರಿಕದ ನೂತನ ಅಧ್ಯಕ್ಷ ಟ್ರಂಪ್

Pinterest LinkedIn Tumblr

trump1

ವಾಷಿಂಗ್ಟನ್: ಅಮೆರಿಕದ ನೂತನ ಅಧ್ಯಕ್ಷ ಹಾಗೂ ಖ್ಯಾತ ಉದ್ಯಮಿ ಡೊನಾಲ್ಡ್ ಟ್ರಂಪ್ ತಮಗೆ ಸಂಬಳವೇ ಬೇಡ ಎಂದು ಘೋಷಣೆ ಮಾಡಿದ್ದಾರೆ.

ಕಳೆದ 2016ರ ಸೆಪ್ಟೆಂಬರ್ 17ರಂದು ಹ್ಯಾಂಪ್‌ಶೈರ್‌ನ ರೋಚ್‌ಸ್ಟರ್‌ನಲ್ಲಿ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದ್ದ ಡೊನಾಲ್ಡ್‌ ಟ್ರಂಪ್‌ ಅವರು, ‘‘ನಾನು ಅಧ್ಯಕ್ಷರಾಗಿ ಆಯ್ಕೆಯಾದರೆ ವೇತನ ಪಡೆಯುವುದಿಲ್ಲ. ಅದು ನನಗೆ ದೊಡ್ಡ ವಿಚಾರವಲ್ಲ ಎಂದು ಹೇಳಿದ್ದರು. ನಿನ್ನೆ ಅದೇ ಮಾತನ್ನು ಪುನರುಚ್ಛರಿಸಿರುವ ಟ್ರಂಪ್ ತಾವು ಸಂಬಳ ಪಡೆಯುವುದಿಲ್ಲ ಎಂದು ಹೇಳಿದ್ದಾರೆ.

ಅಮೆರಿಕ ಸಂವಿಧಾನದಂತೆ ಅಮೆರಿಕದ ಅಧ್ಯಕ್ಷರಿಗೆ ವಾರ್ಷಿಕ 4 ಲಕ್ಷ ಡಾಲರ್ ಹಣ ಸಂಬಳವಾಗಿ ನೀಡಲಾಗುತ್ತದೆ. ಆದರೆ ಈ ಹಣ ತಮಗೆ ಬೇಡ ಎಂದು ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಇದೇ ಮೊದಲ ಬಾರಿಗೆ ನಿನ್ನೆ ಖಾಸಗಿ ವಾಹಿನಿಗೆ ಸಂದರ್ಶನ ನೀಡಿರುವ ಡೊನಾಲ್ಡ್ ಟ್ರಂಪ್ ಅವರು, ಚುನಾವಣಾ ಪೂರ್ವದಲ್ಲಿ ನಾನು ಮಾತನಾಡಿದ್ದಂತೆ ನಾನು ಸಂಬಳ ಪಡೆಯುವುದಿಲ್ಲ. ಮೂಲತಃ ನಾನು ಓರ್ವ ಉದ್ಯಮಿಯಾಗಿದ್ದು, 4 ಲಕ್ಷ ಡಾಲರ್ ಹಣ ನನಗೆ ಅಂತಹ ಮಹತ್ವದ ವಿಚಾರವಲ್ಲ. ಆದರೆ ಕಾನೂನಿನ ಪ್ರಕಾರ ಸಂಬಳ ನೀಡಲೇಬೇಕು ಎಂದಾದಲ್ಲಿ ನನಗೆ ವಾರ್ಷಿಕ 1 ಡಾಲರ್ ನೀಡಲಿ ಎಂದು ಹೇಳಿದ್ದಾರೆ.

ರಜೆಗೂ ಗುಡ್ ಬೈ ಹೇಳಿದ ಟ್ರಂಪ್!
ಇದೇ ವೇಳೆ ಸಂದರ್ಶನದಲ್ಲಿ ಅಮೆರಿಕದ ಅಭಿವೃದ್ಧಿ ಕಾರ್ಯಗಳ ಕುರಿತು ಮಾತನಾಡಿದ ಟ್ರಂಪ್, ಮುಂದಿನ ನೂತನ ಸರ್ಕಾರಕ್ಕೆ ಸಾಕಷ್ಟು ಗುರಿಗಳಿವೆ. ಆ ಗುರಿಗಳನ್ನು ಈಡೇರಿಸುವ ನಿಟ್ಟಿನಲ್ಲಿ ಇರುವ ಕಾಲಾವಕಾಶ ತೀರಾ ಕಡಿಮೆ ಇದ್ದು, ಹೀಗಾಗಿ ತಾವು ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ರಜೆ ತೆಗೆದುಕೊಳ್ಳುವುದಿಲ್ಲ ಎಂದು ಘೋಷಿಸಿಕೊಂಡಿದ್ದಾರೆ.

“ದೇಶದ ತೆರಿಗೆ ವ್ಯವಸ್ಥೆಗೆ ಮತ್ತಷ್ಟು ಸುಧಾರಣೆ ತರಬೇಕಿದ್ದು, ಆ ಮೂಲಕ ಹೆಚ್ಚೆಚ್ಚು ಪ್ರಮಾಣದಲ್ಲಿ ತೆರಿಗೆ ಸಂಗ್ರಹ ಮಾಡಬೇಕಿದೆ. ಆರೋಗ್ಯದ ವಿಚಾರವಾಗಿ ಈಗಾಗಲೇ ಸಾಕಷ್ಟು ಕ್ರಮಗಳನ್ನು ಸರ್ಕಾರ ಕೈಗೊಂಡಿದೆಯಾದರೂ ಮತ್ತಷ್ಟು ಸುಧಾರಣೆ ತರುವ ಮೂಲಕ ಆರೋಗ್ಯ ಕ್ಷೇತ್ರದ ಅಭಿವೃದ್ಧಿಗೊಳಿಸಬೇಕಿದೆ. ಔದ್ಯೋಗಿಕವಾಗಿ ಅಮೆರಿಕದ ಯುವಕರಿಗಾಗಿ ಉದ್ಯೋಗ್ಯ ಸೃಷ್ಟಿಯಾಗಬೇಕು. ಈ ನಿಟ್ಟಿನಲ್ಲಿ ನೂತನ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಟ್ರಂಪ್ ಹೇಳಿದರು.

Comments are closed.