ಅಂತರಾಷ್ಟ್ರೀಯ

ಯಾಹೂ ಸಿಇಒ ಗರ್ಭಿಣಿ, ಷೇರುದಾರ ಅಯೋಮಯ!

Pinterest LinkedIn Tumblr

Yahoo-CEO-Marissa-Mayerಲಂಡನ್: ಷೇರು ಮಾರ್ಕೆಟ್‍ನಲ್ಲಿ ಗೂಳಿ ಮತ್ತು ಕರಡಿಗಳು ಯಾವ ಕಾರಣಕ್ಕೆಲ್ಲ ಕುಣಿಯುತ್ತವೆ ಎಂದು ಹೇಳಲಾಗುವುದಿಲ್ಲ. ಚೀನಾದ ಅಧಿಕೃತ ಕರೆನ್ಸಿ ಅಪಮೌಲ್ಯಗೊಂಡರೆ, ಕಚ್ಚಾತೈಲದ ದರ ಏರಿಕೆ, ಇಳಿಕೆಯಾದರೆ ಭಾರತ ಸೇರಿದಂತೆ ವಿಶ್ವಾದ್ಯಂತ ಷೇರುಪೇಟೆ ಅಲ್ಲೋಲ ಕಲ್ಲೋಲವಾಗುವುದು ಕಂಡು ಅಚ್ಚರಿ ಪಟ್ಟಿದ್ದೀರಿ.

ಇವೆಲ್ಲ ಜಾಗತಿಕ ಆರ್ಥಿಕ ವ್ಯವಸ್ಥೆಗೆ ಸಂಬಂಧಿಸಿದ ವಿಷಯಗಳು. ಆದ್ದರಿಂದ ಸ್ಟಾಕ್ ಎಕ್ಸ್ ಚೇಂಜ್‍ಗಳ ಸೂಚ್ಯಂಕಗಳು ಏರುಪೇರಾಗುತ್ತವೆ. ಆದರೆ, ಯಾವುದೋ ಕಂಪನಿಯ ಯಜಮಾನಿ  ಗರ್ಭಿಣಿ ಆದ ಸುದ್ದಿ ಹೊರಬಿದ್ದ ಕಾರಣಕ್ಕೆ ಸೂಚ್ಯಂಕಗಳು ಧಸಕ್ಕೆಂದು ಕುಸಿಯುವುದು ಎಲ್ಲಾದರೂ ಕೇಳಿದ್ದೀರಾ? ಯಾಹೂ! ಇಲ್ಲಿದೆ ಅಂಥ ಇಂಟರೆಸ್ಟಿಂಗ್ ಸುದ್ದಿ. ಇದು ಜಗದ್ವಿಖ್ಯಾತ ಯಾಹೂ ಕಂಪನಿಯ ಸುದ್ದಿ. ಅದರ ಸಿಇಓ ಮೆರಿಸ್ಸಾ ಮೇಯರ್(40) ಅವಳಿ ಮಗುವಿಗೆ ತಾಯಿಯಾಗಲಿದ್ದಾರೆ ಎಂಬ ಸುದ್ದಿ ಆನ್‍ಲೈನ್‍ನಲ್ಲಿ ಹೊರ ಬರುತ್ತಿದ್ದಂತೆಯೇ ಆ ಕಂಪನಿಯ ಷೇರುಗಳು ಏಕಾಏಕಿ  ಶೇ.2ರಷ್ಟು ಕುಸಿತ ಕಂಡಿವೆ.

ಗರ್ಭಿಣಿಯಾಗಿರುವ ಸುದ್ದಿಯನ್ನು ತಮ್ಮ ಬ್ಲಾಗ್‍ನಲ್ಲಿ ಬಹಿರಂಗಪಡಿಸಿದ ಕೂಡಲೇ ಷೇರುಗಳು ಮಂಕಾಗಿದ್ದು ಖುದ್ದು ಮೆಲ್ಲಿಸಾಗೆ ಅಚ್ಚರಿ ತಂದಿದೆ. ಆದರೆ ಇದು ಕಾಕತಾಳೀಯವೇನಲ್ಲ. ಚೀನಾದ ಬಿಕ್ಕಟ್ಟು ಪರಿಸ್ಥಿತಿಯಿಂದ ಕುಸಿತದ ಭೀತಿ ಇತ್ತಾದರೂ ಸಿಇಒ ಗರ್ಭಿಣಿಯಾದ ಸುದ್ದಿ ಬರುತ್ತಿದ್ದ ಹಾಗೆ ಶೇ.1.99ರಷ್ಟು ಕುಸಿತ ಕಂಡು ನ್ಯೂಯಾರ್ಕ್ ಷೇರುಪೇಟೆಯಲ್ಲಿ ವಹಿವಾಟು  ಪುನಾರಂಭವಾದ ಕೂಡಲೇ ಮತ್ತೆ ಶೇ0.22ರಷ್ಟು ಇಳಿಮುಖವಾಗಿದೆ ಎಂದು ಷೇರು ಪೇಟೆ ಪಂಡಿತರು ತಿಳಿಸಿದ್ದಾರೆ.

“ಇದು ಬೇಸರದ ಸುದ್ದಿಯೇನಲ್ಲ. ಅವರ ಕುಟುಂಬದ ದೃಷ್ಟಿಯಿಂದ ಇದು ಶುಭ ಸುದ್ದಿ. ಮೆಲ್ಲಿಸಾ ರಜೆ ಹೋಗುತ್ತಿರುವುದು ಈ ಕುಸಿತಕ್ಕೆ ಕಾರಣ. ಅವರು ಮಗುವಿಗೆ ಜನ್ಮನೀಡಿ ಕೇವಲ 15  ದಿನಗಳಲ್ಲಿ ವಾಪಸ್ಸಾಗುವುದರಿಂದ, ಶೀಘ್ರದಲ್ಲೇ ಮತ್ತೆ ಏರಿಕೆ ಕಾಣಲಿದೆ. ಮಾರುಕಟ್ಟೆಯಲ್ಲಿ ಅವರ ಮೇಲಿನ ವಿಶ್ವಾಸಾರ್ಹತೆ ಹೆಚ್ಚಲಿದೆ” ಎಂದು ಕಂಪನಿ ಅಭಿಪ್ರಾಯಪಟ್ಟಿದೆ. 2012ರಲ್ಲಿ  ಗರ್ಭಿಣಿಯಾಗಿ ಗಂಡುಮಗುವಿಗೆ ಜನ್ಮ ನೀಡಿದ್ದ ಮೆಲ್ಲಿಸಾ ಮನೆಯಿಂದಲೇ ಕೆಲಸ ನಿರ್ವಹಿಸುತ್ತಿದ್ದುದಲ್ಲದೆ, 15 ದಿನಗಳಲ್ಲಿ ಕಚೇರಿಗೆ ಹಾಜರಾಗಿದ್ದರು. ಆದರೆ ತಮ್ಮ ಉದ್ಯೋಗಿಗಳಿಗೆ ಮಾತ್ರ  ಮೆಲ್ಲಿಸಾ 16 ವಾರಗಳ ಪ್ರಸೂತಿ ರಜೆ ನೀಡಿದ್ದರೆ ತಂದೆಯಾದವರಿಗೆ 8 ವಾರಗಳ ರಜೆ ಸೌಲಭ್ಯ ಒದಗಿಸಿದ್ದಾರೆ.

Write A Comment