ಅಂತರಾಷ್ಟ್ರೀಯ

ಪ್ರಕೃತಿಯ ಅಶಿಸ್ತೇ ಎಮ್ಮಾರೈ ಯಂತ್ರದ ಗುಟ್ಟು

Pinterest LinkedIn Tumblr

mri_scanning1– ಶ್ರೀಹರ್ಷ ಸಾಲಿಮಠ
ಮನುಷ್ಯನ ದೇಹ ಕೋಟ್ಯಂತರ ಜೀವಕೋಶಗಳಿಂದ ಮಾಡಲ್ಪಟ್ಟಿದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಈ ಜೀವ ಕೋಶಗಳು ಲಕ್ಷಾಂತರ ಪರಮಾಣುಗಳಿಂದ ಮಾಡಲ್ಪಟ್ಟಿವೆ. ನಮ್ಮ ದೇಹದ ಮುಕ್ಕಾಲು ಭಾಗ ನೀರು ಮತ್ತು ಕೊಬ್ಬಿನಿಂದ ತಯಾರಾಗಿದೆ. ನಮ್ಮ ಜೀವಕೋಶಗಳಲ್ಲಿನ ಪರಮಾಣುಗಳು ಹಾಗೂ ನೀರಿನ ಕಣಗಳು ಜಲಜನಕವನ್ನು (hydrogen) ಹೊಂದಿರುತ್ತವೆ. ಜಲಜನಕವು ಸೂಜಿಗಲ್ಲಿನ ಸೆಳೆತಕ್ಕೆ ಸಿಕ್ಕಾಗ ಥೇಟ್ ಕಬ್ಬಿಣದ ಪುಡಿಯ ಹಾಗೆಯೇ ವರ್ತಿಸುತ್ತದೆ. ಜಲಜನಕದ ಅಣುಗಳು ಅಯಸ್ಕಾಂತದ ಪ್ರಭಾವಕ್ಕೆ ಒಳಗಾಗುತ್ತಿದ್ದಂತೆ ಸಾಲಾಗಿ ಸೈನಿಕರಂತೆ ಅಯಸ್ಕಾಂತದ ಗೆರೆಯ ಉದ್ದಕ್ಕೂ ನಿಂತುಬಿಡುತ್ತವೆ.

ಮನುಷ್ಯನ ದೇಹವು ತಟ್ಟೆಯ ಮೂಲಕ  ಎಮ್ಮಾರೈ ಯಂತ್ರದ ಒಳಗೆ  ಹೋದಾಗ ದೊಡ್ಡ ಸೂಜಿಗಲ್ಲಿನ ಪ್ರಭಾವಕ್ಕೆ ಒಳಗಾದ ನಮ್ಮ ದೇಹದೊಳಗಿನ ಜಲಜನಕದ ಅಣುಗಳು ಸೂಜಿಗಲ್ಲಿನ ಪ್ರಭಾವವಲಯದ ಗೆರೆಗುಂಟ ನಮ್ಮ ದೇಹದಲ್ಲಿ ನಮ್ಮ ತಲೆಯ ಕಡೆ ಮುಖ ಮಾಡಿ ಒಂದರ್ಧ ಕಾಲಿನ ಕಡೆ ಮುಖ ಮಾಡಿ ಇನ್ನೊಂದರ್ಧ ಸಾಲಾಗಿ  ನಿಲ್ಲುತ್ತವೆ. ಹೀಗೆ ಸಾಲಾಗಿ ನಿಂತ ಬಿಲಿಯಂತರ ಕಣಗಳಲ್ಲಿ ಕೆಲ ತುಂಟ ಕಣಗಳು ಎರಡೂ ಕಡೆ ಮುಖ ಮಾಡದೇ ತಮ್ಮದೇ ಶೈಲಿಯಲ್ಲಿ ಶಿಸ್ತಿಲ್ಲದ ರೀತಿಯಲ್ಲಿ ತಿರುಗಿ ನಿಂತಿರುತ್ತವೆ. ಉಳಿದ ಕಣಗಳಿಗೆ ಹೋಲಿಸಿದರೆ ಈ ತುಂಟಕಣಗಳ ಸಂಖ್ಯೆ ಬಹಳ ಕಡಿಮೆ. ಎಲ್ಲೋ ಲಕ್ಷ ಶಿಸ್ತಿನ ಕಣಗಳ ನಡುವೆ ಒಂದು ಅಶಿಸ್ತಿನ ಕಣ ಕಂಡುಬರುತ್ತದೆ. ಆದರೆ ಈ ಅಶಿಸ್ತಿನ ಕಣಗಳೇ ನಮ್ಮ ಅಂಗಗಳನ್ನು ಅಭ್ಯಸಿಸಲು ದಾರಿದೀಪವಾಗಿ ನಿಲ್ಲುವವು!

ಅಭ್ಯಾಸ ಮಾಡಬೇಕಾದ ಅಂಗಗಳ ಕಡೆ ಇನ್ನೆರಡು ಚಿಕ್ಕ ಸೂಜಿಗಲ್ಲುಗಳು ತಮ್ಮದೂ ಒಂದಷ್ಟು ಪ್ರಭಾವ ಬೀರಿ ಇನ್ನೊಂದಿಷ್ಟು ಅಶಿಸ್ತಿನ ಕಣಗಳನ್ನು ಹುಟ್ಟಿಸುತ್ತವೆ ಮತ್ತು ಈಗಾಗಲೇ ತಿರುಗಿ ನಿಂತಿರುವ ಕಣಗಳ ತುಂಟತನವನ್ನು ಇನ್ನೂ ಹೆಚ್ಚು ಮಾಡುತ್ತವೆ. ಈಗ ರೇಡಿಯೋ ಅಲೆಗಳನ್ನು ಹೊಮ್ಮಿಸಲು ಕಾದು ನಿಂತಿರುವ ಗಣಕೀಕೃತ ಕಿರುಯಂತ್ರಗಳು ತಮ್ಮನ್ನು ತಾವು ಸಜ್ಜುಗೊಳಿಸಿಕೊಳ್ಳುತ್ತವೆ. ಜಲಜನಕದ ಕಣಗಳಲ್ಲಿ ಅಶಿಸ್ತಿನ ಪ್ರಮಾಣ ಹೆಚ್ಚುತ್ತಿದ್ದಂತೆ ಒಂದರ ಹಿಂದೊಂದರಂತೆ ತಮ್ಮ ರೇಡಿಯೋ ಕಣ್ಣುಗಳ ಮೂಲಕ ಫೋಟೋ ತೆಗೆಯತೊಡಗುತ್ತವೆ. ಅಶಿಸ್ತಿನ ಕಣಗಳ ಪ್ರಮಾಣ ಹೆಚ್ಚಿದ್ದಷ್ಟೂ ಫೋಟೋ ಸ್ಪಷ್ಟವಾಗಿ ಬರುತ್ತದೆ. ಇದನ್ನು ಇನ್ನೊಂದು ಉದಾಹರಣೆಯ ಮೂಲಕ ಹೇಳಬೇಕೆಂದರೆ ಬಕೆಟ್ ನಲ್ಲಿ ಶುದ್ಧವಾದ ನೀರು ನಿಶ್ಚಲವಾಗಿ ನಿಂತಿರುತ್ತದೆ. ಎಷ್ಟು ಶುದ್ಧ ನೀರು ಎಂದರೆ ಅಲ್ಲಿ ನೀರಿದೆ ಎಂದು ಗೊತ್ತಾಗದಷ್ಟು ಎಂದುಕೊಳ್ಳೋಣ. ಒಮ್ಮೆ ಕೈ ಹಾಕಿ ಕದಡಿದೊಡನೆ ನೀರಿನ ಕಣಗಳು ಆಚೀಚೆ ಓಡಾಡತೊಡಗುತ್ತವೆ.ಆಗ ನೀರಿನ ಆಳ ಅಗಲ ಪ್ರಮಾಣಗಳು ಗೊತ್ತಾಗತೊಡಗುತ್ತವೆ. ನಿಶ್ಚಲ ಕಣ ಗಳಿಗಿಂತ ಓಡಾಸುವ ಕಣಗಳು ನೀರಿನ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನಮಗೆ ನೀಡುತ್ತವೆ. ನಮ್ಮ ದೇಹದಲ್ಲೂ ಸೂಜಿಗಲ್ಲಿನ ಪ್ರಭಾವಕ್ಕೊಳಗಾದ ಕಣಗಳು ಇದೇ ರೀತಿಯ ಕೆಲಸ ಮಾಡುತ್ತದೆ.  ಒಂದು ರೀತಿಯಲ್ಲಿ ಪ್ರಕೃತಿಯ ಚಿಕ್ಕ ಅಶಿಸ್ತನ್ನು ಮಾನವ ತನ್ನ ಅಗಾಧ ಪ್ರಯೋಜನಕ್ಕೆ ಬಳಸಿಕೊಂಡ ಒಳ್ಳೆಯ ಉದಾಹರಣೆ ಇದು!

ಹೀಗೆ ನಮ್ಮ ಅಂಗಗಳಿಗೆ ಮತ್ತು ಅವುಗಳಲ್ಲಿನ ತುಂಟ ಹೈಡ್ರೋಜನ್ ಕಣಗಳಿಗೆ ಬಡಿದು ಹಿಂದಿರುಗಿದ ರೇಡಿಯೋ ಅಲೆಗಳ ಮೂಲಕ ನೀಡಿದ ಮಾಹಿತಿಯನ್ನು ಕಂಪ್ಯೂಟರಿಗೆ ಕೊಡುತ್ತಿದ್ದಂತೆ ನಮ್ಮ ಮುಂದೆ ಪರದೆಯ ಮೇಲೆ ಆಯಾ ಅಂಗಗಳ ಚಿತ್ರಗಳು ಕಪ್ಪುಬಿಳುಪಿನಲ್ಲಿ ಮೂಡತೊಡಗುತ್ತವೆ. ಕಪ್ಪು ಬಿಳುಪು ಎಂದರೆ ಸಾಧಾರಣ ಕಪ್ಪುಬಿಳುಪಲ್ಲ. ಈ ಎರಡು ಬಣ್ಣಗಳಲ್ಲಿ ಒಂದು ದೊಡ್ಡ ಲೋಕವೇ ಇದೆ. ಸಾಧಾರಣವಾಗಿ ನಮ್ಮೆದುರಿಗೆ ಕಪ್ಪು ಬಿಳುಪಿನ ಮಿಶ್ರಣ ನಮಗೆ ಬೂದು ಬಣ್ಣವಾಗಿ ಕಾಣುತ್ತದೆ. ಎಮ್ಮಾರೈ ಯಂತ್ರವು 255 ವಿವಿಧ ಬೂದುಬಣ್ಣಗಳ ಮೂಲಕ ನಮ್ಮ ಅಂಗಗಳ ಚಿತ್ರವನ್ನು ನಮ್ಮ ಮುಂದಿಡುತ್ತದೆ! ಈ ಬೂದು ಬಣ್ಣದ ಆಳ, ಗಾಢತೆಯ ಆಧಾರದ ಮೇಲೆ ವೈದ್ಯರು ನಮ್ಮ ಅಂಗಗಳ ಸ್ಥಿತಿಯನ್ನು ಅರಿಯುತ್ತಾರೆ.

ಎಮ್ಮಾರೈ ಯಂತ್ರದ ಒಳಹೊಕ್ಕವರಿಗೆ ಸುತ್ತಿಗೆಯಿಂದಹೊಡೆಯುವಂತಹ ಅಗಾಧವಾದ ಸಪ್ಪಳ ಕೇಳಿಬರುತ್ತದೆ. ಅದಕ್ಕಾಗಿ ಒಳಹೋಗುವ ರೋಗಿಗಳಿಗೆ ಕಿವಿಮುಚ್ಚಿಕೊಳ್ಳಲು ಹತ್ತಿಯನ್ನು ಕೊಡಲಾಗುತ್ತದೆ.  ವಾಹಕದೊಳಗೆ ಅಥವಾ ಎಲೆಕ್ಟ್ರಿಕ್ ವೈರ್ ಗಳ ಒಳಗೆ ವಿದ್ಯುತ್ ಹರಿಯುವಾಗ ಈ ವೈರ್ ಗಳು ಅಯಸ್ಕಾಂತದಂತೆ ವರ್ತಿಸುತ್ತವೆ ಹಾಗೂ ಇವುಗಳ ಸುತ್ತ ಒಂದು ಕಾಂತೀಯ ಸೆಳೆತ ಉಂಟಾಗುತ್ತದೆ. ಹೈ ಟೆನ್ಶನ್ ವೈರ್ ಗಳ ಕೆಳಗೆ ನಿಂತಾಗ ‘ಗುಂಯ್’ ಎಂಬಂತಹ ಸದ್ದು ಕೇಳಿಬರುವುದನ್ನು ಎಲ್ಲರೂ ಗಮನಿಸಿರಬಹುದು. ಅದೇ ರೀತಿ ಎಮ್ಮಾರೈ ಯಂತ್ರದೊಳಗೆ ಇರುವ ಅಯಸ್ಕಾಂತ ಮತ್ತು ವಿದ್ಯುತ್ ಹರಿಯುವಿಕೆಯಿಂದ ಅತಿವಾಹಕಗಳಲ್ಲಿ ಉಂಟಾಗುವ ಸೆಳೆತಗಳು ಪರಸ್ಪರ ಘರ್ಷಿಸಿ ಈ ದೊಡ್ಡ ಮಟ್ಟದ ಸಪ್ಪಳ ಉಂಟಾಗುತ್ತದೆ.

ಹಾಗೆಯೇ ಯಂತ್ರದೊಳಗೆ ಹೋಗುವವರಿಗೆ ಒಂದು ಅಥವಾ ಒಂದೂವರೆ ತಾಸು ಅಲ್ಲಾಡದೇ ಮಲಗಿರಲು ಹೇಳುತ್ತಾರೆ. ಇದು ಏಕೆಂದರೆ ಮನುಷ್ಯನ ದೇಹ ಅಲ್ಲಾಡುತ್ತಿದ್ದಂತೆ ದೇಹದಲ್ಲಿನ ಅಯಸ್ಕಾಂತದ ಸೆಳೆತದಲ್ಲಿ ವ್ಯತ್ಯಾಸ ಉಂಟಾಗುತ್ತದೆ. ಇದಕ್ಕೆ ತಕ್ಕಂತೆ ಶಿಸ್ತು ಮತ್ತು ಅಶಿಸ್ತಿನ ಕಣಗಳು ಬೇರೆ ಯೇ ರೀತಿ ವರ್ತಿಸತೊಡಗುತ್ತವೆ. ಈ ವರ್ತನೆ ಬದಲಾದಂತೆ ವೈದ್ಯರಿಗೆ ಸಿಕ್ಕುವ ಮಾಹಿತಯಲ್ಲಿ ವ್ಯತ್ಯಯವುಂಟಾಗುತ್ತದೆ. ಇದು ತಪ್ಪಾದ ರೋಗನಿರ್ಣಯಕ್ಕೂ ಆಸ್ಪದ ಕೊಡಬಹುದು. ಇದಲ್ಲದೇ ಯಂತ್ರವಿರುವ ಕೋಣೆಯೊಳಗೆ ಕ್ರೆಡಿಟ್, ಡೆಬಿಟ್ ಕಾರ್ಡುಗಳು, ಸೂಜಿಗಳು, ಕತ್ತಿಗಳು ಅಥವಾ ಇನ್ನಾವುದೇ ಲೋಹದ ವಸ್ತುಗಳನ್ನು ತೆಗೆದುಕೊಂಡು ಹೋಗಲು ಅವಕಾಶ ಇರುವುದಿಲ್ಲ. ಯಂತ್ರದ ಅಯಸ್ಕಾಂತಗಳು ಅದೆಷ್ಟು ಶಕ್ತಿಶಾಲಿಯಾಗಿರುತ್ತವೆಂದರೆ ಕ್ರೆಡಿಟ್ ಕಾರ್ಡ್ ನಲ್ಲಿರುವ ಮಾಹಿತಿಯನ್ನೆಲ್ಲ ಅಳಿಸಿ ಹಾಕಿಬಿಡಬಹುದು ಅಥವಾ ಕತ್ತರಿ ಸೂಜಿತಳನ್ನು ತಮ್ಮೆಡೆಗೆ ಅನಾಮತ್ತಾಗಿ ಎಳೆದುಕೊಂಡು ಬಿಡಬಹುದು! ಇದರಿಂದ ಅಲ್ಲಿರುವ ರೋಗಿಗಳಿಗಾಗಲೀ, ಆಪರೇಟರ್ ಗಳಿಗಾಗಲೀ ಗಾಯಗಳಾಗಬಹುದು.

ಎಮ್ಮಾರೈ ಯಂತ್ರದಿಂದ ಹೊರಬಂದ ಕೂಡಲೇ ನಮ್ಮ ದೇಹ ಎಲ್ಲ ಜಲಜನಕದ ಕಣಗಳು ಮೊದಲಿನಂತಾಗುತ್ತವೆ. ತುಂಟ ಅಣುಗಳೂ ಶಿಸ್ತಿನ ಸಿಪಾಯಿ ಅಣುಗಳೂ ತಮ್ಮ ಕೆಲಸದಲ್ಲಿ ತೊಡಗುತ್ತವೆ. ಎಮ್ಮಾರೈ ಯಂತ್ರ ಬಹಳ ದುಬಾರಿಯಾದುದು ಹಾಗಾಗಿ ಸ್ಕ್ಯಾನಿಂಗ್ ನ ಶುಲ್ಕವೂ ಜಾಸ್ತಿ. ನಮ್ಮ ದೇಹದ ಮೇಲೆ ಎಮ್ಮಾರೈ ಯಂತ್ರದ ಸ್ಕ್ಯಾನಿಂಗ್ ನಿಂದ ದುಷ್ಪರಿಣಾಮಗಳೇನೂ ಇಲ್ಲ ಎಂದು ಸಾಬೀತಾಗಿದೆ. ಆದರೆ ತಾಯಿಯ ಹೊಟ್ಟೆಯಲ್ಲಿರುವ ಮಗುವಿನ ಬೆಳವಣಿಗೆಯ ಮೇಲೆ ಆಗಬಹುದಾದ ದುಷ್ಪರಿಣಾಮಗಳ ಬಗ್ಗೆ ಇನ್ನೂ ಅಧ್ಯಯನಗಳಾಗಿಲ್ಲ. ಹಾಗಾಗಿ ಗರ್ಭಿಣಿಯರನ್ನು ವಿಶೇಷ ಸಂದರ್ಭಗಳನ್ನು ಹೊರತುಪಡಿಸಿ ಎಮ್ಮಾರೈ ಯಂತ್ರಕ್ಕೆ ಒಡ್ಡಲಾಗುವುದಿಲ್ಲ.

Write A Comment