ನವದೆಹಲಿ: ತಮಿಳುನಾಡಿನಲ್ಲಿ ನಡೆದ ಕಾಪ್ಟರ್ ದುರಂತದಲ್ಲಿ ಸಾವನ್ನಪ್ಪಿದ ಬಿಪಿನ್ ರಾವತ್ ದಂಪತಿಯ ಪಾರ್ಥಿವ ಶರೀರಗಳನ್ನು ಒಂದೇ ಚಿತೆಯ ಮೇಲಿಟ್ಟು ಅಂತ್ಯಸಂಸ್ಕಾರ ಮಾಡಲಾಯಿತು.

ದೆಹಲಿಯ ಬ್ರಾರ್ ಚೌಕದಲ್ಲಿರುವ ಚಿತಾಗಾರಲ್ಲಿ ರಾವತ್ ಅವರ ಪುತ್ರಿಯರು ಅಂತಿಮ ವಿಧಿವಿಧಾನವನ್ನು ಪೂರೈಸಿದರು. ಬಿಪಿನ್ ರಾವತ್ ಅವರು ದೇಶದ ಮೊದಲ ಸಿಡಿಎಸ್ ಆಗಿದ್ದು ಅವರ ಅಂತ್ಯ ಸಂಸ್ಕಾರವನ್ನು ಸಕಲ ಸೇನಾ ಗೌರವಗಳೊಂದಿಗೆ ನೆರವೇರಿಸಲಾಯಿತು.
ತಮಿಳುನಾಡಿನಲ್ಲಿ ಕಾಪ್ಟರ್ ಅಪಘಾತದಲ್ಲಿ ಸಾವನ್ನಪ್ಪಿದ ಸಶಸ್ತ್ರಪಡೆಗಳ ಮುಖ್ಯಸ್ಥ ಜ.ಬಿಪಿನ್ ರಾವತ್ ಮತ್ತು ಅವರ ಪತ್ನಿ ಮಧುಲಿಕಾ ರಾವತ್ ಅವರ ಅಂತ್ಯಕ್ರಿಯೆಯನ್ನು ಅವರ ಇಬ್ಬರು ಪುತ್ರಿಯರೇ ನೆರವೇರಿಸಿದರು. ಬ್ರಾರ್ ಸ್ಕ್ವೇರ್ ಚಿತಾಗಾರದಲ್ಲಿ ಅಂತಿಮ ಸಂಸ್ಕಾರ ವಿಧಿಗಳು ಪೂರ್ಣಗೊಂಡ ಬಳಿಕ ಪುತ್ರಿಯರಾದ ಕೃತ್ತಿಕಾ ಮತ್ತು ತಾರಿಣಿ ಮತ್ತು ಪೋಷಕರ ಚಿತೆಗೆ ಅಗ್ನಿ ಸ್ಪರ್ಶ ಮಾಡಿದರು. ಚಿತೆಯ ಸುತ್ತ ಪ್ರದಕ್ಷಿಣೆ ಹಾಕಿ ತುಪ್ಪ ಸುರಿದು ಅಗ್ನಿಸ್ಪರ್ಶ ಮಾಡಿದ ಅವರು ಸಂಪ್ರದಾಯ ಪಾಲಿಸಿದರು. ಈ ವೇಳೆ ನೆರೆದವರ ಕಣ್ಣಲ್ಲಿ ನೀರು ಬಂತು. ಭಾವುಕ ಜನರು ರಾವತ್ ಪರ ಜೈಘೋಷ ಹಾಕಿದರು.ಶನಿವಾರ ಅಸ್ಥಿಗಳನ್ನು ಸಂಗ್ರಹಿಸಿ ಹರಿದ್ವಾರದ ಗಂಗಾನದಿಯಲ್ಲಿ ವಿಸರ್ಜಿಸುವ ಯೋಜನೆ ಹಾಕಿಕೊಳ್ಳಲಾಗಿದೆ.
ರಕ್ಷಣಾ ಸಚಿವ ರಾಜ್ನಾಥ್ ಸಿಂಗ್, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಕೇಂದ್ರ ಸಚಿವರಾದ ಕಿರಣ್ ರಿಜಿಜು, ಫ್ರಾನ್ಸ್, ಬ್ರಿಟನ್ ರಾಯಭಾರಿಗಳು ಮತ್ತು ಹಲವು ದೇಶಗಳು ರಕ್ಷಣಾ ಅಧಿಕಾರಿಗಳು ಜ.ರಾವತ್ ಮತ್ತು ಮಧುಲಿಕಾಗೆ ಅಂತಿಮ ನಮನ ಸಲ್ಲಿಸಿದರು. ಚಿತೆಗೆ ಅಗ್ನಿಸ್ಪರ್ಶಕ್ಕೂ ಮುನ್ನ 17 ಗನ್ ಸಲ್ಯೂಟ್ ಮೂಲಕ ಸೇನಾ ಗೌರವ ಸಲ್ಲಿಸಲಾಯ್ತು. ಜೊತೆಗೆ ಜ.ರಾವತ್ ಮನೆಯಿಂದ ಬ್ರಾರ್ ಸ್ಕ್ವೇರ್ ಚಿತಾಗಾರದವರೆಗೆ ನಡೆದ ಮೆರವಣಿಗೆ ವೇಳೆ 800 ಸೇನಾ ಸಿಬ್ಬಂದಿಗಳು ದೇಶ ಕಂಡ ಅಪ್ರತಿಮ ಯೋಧನಿಗೆ ವಿಶೇಷ ಗೌರವ ಸಲ್ಲಿಸಿದರು.
Comments are closed.