ರಾಷ್ಟ್ರೀಯ

ಅತ್ಯಾಚಾರ ಸಂತ್ರಸ್ತೆಯ ಕುಟುಂಬದ ಚಿತ್ರವನ್ನು ಹಂಚಿಕೊಂಡ ರಾಹುಲ್ ಗಾಂಧಿ ವಿರುದ್ಧ ಕ್ರಮಕ್ಕೆ ಮಕ್ಕಳ ಹಕ್ಕುಗಳ ಆಯೋಗ ಆಗ್ರಹ

Pinterest LinkedIn Tumblr

ಹೊಸದಿಲ್ಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ದಿಲ್ಲಿ ಪೊಲೀಸರು ಮತ್ತು ಟ್ವಿಟ್ಟರ್‌ಗೆ ಆಗ್ರಹಿಸಿದೆ.

ನೈಋತ್ಯ ದಿಲ್ಲಿಯಲ್ಲಿ ಭಾನುವಾರ ಅತ್ಯಾಚಾರಕ್ಕೆ ಒಳಗಾಗಿ ಕೊಲೆಯಾಗಿದ್ದಲ್ಲದೆ, ಬಲವಂತವಾಗಿ ಅಂತ್ಯಸಂಸ್ಕಾರ ನಡೆಸಲಾದ 9 ವರ್ಷದ ದಲಿತ ಬಾಲಕಿಯ ಪೋಷಕರ ಜತೆಗಿನ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಕಾರಣಕ್ಕಾಗಿ ಈ ಸೂಚನೆ ನೀಡಲಾಗಿದೆ.

ಅತ್ಯಾಚಾರ ಅಥವಾ ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತೆಯ ಪೋಷಕರ ಜತೆಗಿನ ಚಿತ್ರ ಹಂಚಿಕೊಳ್ಳುವುದು, ಸಂತ್ರಸ್ತ ಬಾಲಕಿಯ ಗುರುತನ್ನು ಬಹಿರಂಗಪಡಿಸುವಂತೆ ಮಾಡುತ್ತದೆ. ಹೀಗಾಗಿ ಇದು ಪೋಕ್ಸೋ ಕಾಯ್ದೆ ಮತ್ತು ಬಾಲಾಪರಾಧಿಗಳ ನ್ಯಾಯ ಕಾಯ್ದೆಗಳ ನಿಯಮಗಳ ಉಲ್ಲಂಘನೆಯಾಗಿದೆ ಎಂದು ಎನ್‌ಸಿಪಿಸಿಆರ್ ಹೇಳಿದೆ.

ದಿಲ್ಲಿ ಪೊಲೀಸರು ಮತ್ತು ಟ್ವಿಟ್ಟರ್‌ನಿಂದ ತೆಗೆದುಕೊಳ್ಳಲಾದ ಕ್ರಮಗಳ ಬಗ್ಗೆ ವರದಿ ಕೇಳಿರುವ ಆಯೋಗ, ಮೂರು ದಿನಗಳ ಒಳಗೆ ತನಗೆ ವರದಿ ಸಲ್ಲಿಸುವಂತೆ ಸೂಚಿಸಿದೆ.

ಟ್ವಿಟ್ಟರ್‌ನ ದೂರು ಸ್ವೀಕಾರ ಅಧಿಕಾರಿಗೆ ಪತ್ರ ಬರೆದಿರುವ ಆಯೋಗ, ರಾಹುಲ್ ಗಾಂಧಿ ಅವರ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಸಂತ್ರಸ್ತೆಯ ಕುಟುಂಬದ ಚಿತ್ರವನ್ನು ಹಂಚಿಕೊಂಡಿದ್ದು, ಅವರು ಬಾಲಕಿಯ ತಂದೆ ಮತ್ತು ತಾಯಿ ಎಂದು ಬರೆದುಕೊಂಡಿದ್ದರು. ಈ ಚಿತ್ರದಲ್ಲಿ ಸಂತ್ರಸ್ತೆಯ ಪೋಷಕರ ಮುಖ ಸ್ಪಷ್ಟವಾಗಿ ಕಾಣುವಂತಿದೆ. ಇದು ಬಾಲಕಿಯ ಗುರುತನ್ನು ಬಹಿರಂಗಪಡಿಸುತ್ತದೆ ಎಂದು ಅದು ಹೇಳಿದೆ.

Comments are closed.