ರಾಷ್ಟ್ರೀಯ

ಸಚಿವ ಸಂಪುಟ ರಚನೆ ಸುಗಮವಾಗಿ ನಡೆಯುತ್ತದೆ: ದೆಹಲಿಯಲ್ಲಿ ವರಿಷ್ಠರನ್ನು ಭೇಟಿಯಾದ ಸಿಎಂ ಬಸವರಾಜ ಬೊಮ್ಮಾಯಿ

Pinterest LinkedIn Tumblr

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಾಧ್ಯಕ್ಷ ಜೆ ಪಿ ನಡ್ಡಾ ಮತ್ತು ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾದಾಗ ಅವರು ನೀಡುವ ಸಲಹೆ, ಸೂಚನೆ ಪ್ರಕಾರ ಮುಂದಿನ ನಿರ್ಣಯ ಕೈಗೊಳ್ಳುತ್ತೇನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ದೆಹಲಿಗೆ ವರಿಷ್ಠರನ್ನು ಭೇಟಿ ಮಾಡಿ ಧನ್ಯವಾದ ಹೇಳಲು ಆಗಮಿಸಿರುವ ಬಸವರಾಜ ಬೊಮ್ಮಾಯಿ ಕರ್ನಾಟಕ ಭವನ ಮುಂದೆ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದರು.

ಇಂದು ಸಂಜೆ 4 ಗಂಟೆಗೆ ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿ ಸಂಜೆ ರಾಷ್ಟ್ರಾಧ್ಯಕ್ಷ ಜೆ ಪಿ ನಡ್ಡಾ ಅವರನ್ನು ಭೇಟಿ ಮಾಡುತ್ತೇನೆ. ಅದಕ್ಕೆ ಮುನ್ನ ಇಂದು ಬೆಳಗ್ಗೆ ರಾಜನಾಥ್ ಸಿಂಗ್ ಹಾಗೂ ನಂತರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡುತ್ತೇನೆ. ಮಧ್ಯಾಹ್ನ 1 ಗಂಟೆಗೆ ರಾಜ್ಯದ ಸಂಸದರನ್ನು ಸಭೆ ಮತ್ತು ಭೋಜನಕ್ಕೆ ಆಹ್ವಾನಿಸಿದ್ದೇನೆ, ಇವತ್ತು ಇಲ್ಲಿಯೇ ಉಳಿದುಕೊಂಡು ನಾಳೆ ಕೇಂದ್ರ ಜಲಶಕ್ತಿ ಸಚಿವರನ್ನು ಭೇಟಿ ಮಾಡುತ್ತೇನೆ ಎಂದರು.

ಸಚಿವ ಸಂಪುಟ ರಚನೆ ಸುಗಮ: ರಾಜ್ಯ ಸಚಿವ ಸಂಪುಟ ರಚನೆ ಸುಗಮವಾಗಿ ನಡೆಯುತ್ತದೆ, ಯಾವುದೇ ಅಡ್ಡಿ-ಆತಂಕಗಳು ಬರದೆ ಉತ್ತಮವಾಗಿ ಪ್ರಕ್ರಿಯೆ ಸಾಗುತ್ತದೆ. ನಮ್ಮದು ರಾಷ್ಟ್ರೀಯ ಪಕ್ಷ, ಇಲ್ಲಿ ಹಲವು ಆಕಾಂಕ್ಷಿಗಳು ಇರುತ್ತಾರೆ, ಪ್ರಾದೇಶಿಕ, ಸಮುದಾಯ ಪ್ರಾತಿನಿಧ್ಯ ನೋಡಿಕೊಂಡು ಸಚಿವ ಸಂಪುಟ ರಚನೆ ಮಾಡಬೇಕಾಗುತ್ತದೆ ಎಂದರು.

ಈ ಪಕ್ಷಕ್ಕೆ ಅಂತರ್ಗತವಾದ ದೊಡ್ಡ ಶಕ್ತಿಯಿದೆ. ಬಹಳ ದೊಡ್ಡ ನಾಯಕತ್ವವಿದೆ.ರಾಷ್ಟ್ರವನ್ನಾಳುವ ಪಕ್ಷದಲ್ಲಿ ಸಹಜವಾಗಿ ಸಚಿವಾಕಾಂಕ್ಷಿಗಳು ಇರುತ್ತಾರೆ. ಎಲ್ಲವನ್ನೂ ನಿಭಾಯಿಸುವ ಶಕ್ತಿ ನಮ್ಮ ಪಕ್ಷಕ್ಕಿದೆ. ಪ್ರಾದೇಶಿಕ, ಸಮುದಾಯ ಪ್ರಾತಿನಿಧ್ಯ ನೋಡಿಕೊಂಡು ಸಚಿವ ಸಂಪುಟ ರಚನೆ ಮಾಡಬೇಕಾಗುತ್ತದೆ, ಎಲ್ಲವೂ ಸುಗಮವಾಗಿ ಸಾಗುತ್ತದೆ ಎಂದರು.

ಎರಡು ವರ್ಷದ ಬಿಜೆಪಿ ಸರ್ಕಾರವನ್ನು ಟೀಕಿಸಿರುವ ಕಾಂಗ್ರೆಸ್ ನಿನ್ನೆ “ಜನಪೀಡಕ ಸರ್ಕಾರ” ಎಂಬ ಕಿರುಹೊತ್ತಿಗೆ ಬಿಡುಗಡೆ ಮಾಡಿ ಭ್ರಷ್ಟಾಚಾರ, ಅದಕ್ಷತೆ, ಆರಾಜಕತೆ, ದುರಾಡಳಿತ ಎರಡು ವರ್ಷದ ಸಾಧನೆಗಳು ಎಂದು ಟೀಕಿಸಿರುವ ಬಗ್ಗೆ ಕೇಳಿದಾಗ ಸಿದ್ದರಾಮಯ್ಯನವರು ಮತ್ತು ಕಾಂಗ್ರೆಸ್ ನ ಟೀಕೆ, ಆರೋಪಗಳು ಮೇಲ್ನೋಟಕ್ಕೆ ಸುಳ್ಳಿನ ಕಂತೆ ಎಂದರು.

ಈಗಾಗಲೇ ನಾನು ದಕ್ಷಿಣ ಕನ್ನಡ, ಕೊಡಗು, ಮೈಸೂರು ಮತ್ತು ಚಾಮರಾಜನಗರ ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿ ಗಡಿಭಾಗದಲ್ಲಿ ಕೊರೋನಾ ಪರೀಕ್ಷೆ ಹೆಚ್ಚಳ, ಜನರ ಓಡಾಟಕ್ಕೆ ಕ್ರಮ ಬಿಗಿಗೊಳಿಸುವಂತೆ ಸೂಚಿಸಿದ್ದೇನೆ. ಕೊರೋನಾ ಪರೀಕ್ಷೆ, ಲಸಿಕೆಗಳನ್ನು ತ್ವರಿತಗೊಳಿಸಬೇಕು, ಹಿರಿಯ ಅಧಿಕಾರಿಗಳಿಗೆ ಜವಾಬ್ದಾರಿಯನ್ನು ನಿರ್ವಹಿಸಲಾಗಿದೆ. ಮುಖ್ಯ ಕಾರ್ಯದರ್ಶಿಗಳೊಂದಿಗೆ ಮಾತನಾಡಿದ್ದೇನೆ ಎಂದರು.

ನಾಳೆ ಬೆಂಗಳೂರಿಗೆ ಹೋದ ತಕ್ಷಣ ದಕ್ಷಿಣ ಕನ್ನಡ, ಕೊಡಗು, ಚಾಮರಾಜನಗರ, ಚಿಕ್ಕಮಗಳೂರು, ಉಡುಪಿ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೊ ಕಾನ್ಫರೆನ್ಸ್ ಮೂಲಕ ಮಾತನಾಡಿ ಬಿಗಿ ಕ್ರಮ ಕೈಗೊಳ್ಳುವಂತೆ ಸೂಚಿಸುತ್ತೇನೆ ಎಂದಿದ್ದಾರೆ.

Comments are closed.