ರಾಷ್ಟ್ರೀಯ

ಸೆಪ್ಟೆಂಬರ್ 10ರ ಗಣೇಶ ಚತುರ್ಥಿಯಂದು ಜಗತ್ತಿನ ಅತ್ಯಂತ ಕಡಿಮೆ ಬೆಲೆಯ 5ಜಿ ಜಿಯೋಫೋನ್ ನೆಕ್ಸ್ಟ್ ಬಿಡುಗಡೆ

Pinterest LinkedIn Tumblr

ಮುಂಬೈ: ಅತ್ಯಂತ ಕಡಿಮೆ ಬೆಲೆಯಲ್ಲಿ ಅತ್ಯುತ್ತಮ ಗುಣಮಟ್ಟದ 4G ಬ್ರಾಡ್​ಬ್ಯಾಂಡ್​ ಸೇವೆಗಳನ್ನು ಒದಗಿಸುವ ಮೂಲಕ ಭಾರತದಲ್ಲಿ ಡಿಜಿಟಲ್ ಸಂಪರ್ಕ ಕ್ರಾಂತಿಯನ್ನೇ ಉಂಟು ಮಾಡಿರುವ ಜಿಯೋ, ಇದೀಗ ಭಾರತವನ್ನು ‘2G-ಮುಕ್ತ’ವಾಗಿಸುವ ಉದ್ದೇಶದೊಂದಿಗೆ ಕೈಗೆಟುಕುವ ಬೆಲೆಯ 5G ಸ್ಮಾರ್ಟ್​ಫೋನ್ ಪರಿಚಯಿಸುತ್ತಿದೆ. ‘ಜಿಯೋಫೋನ್ ನೆಕ್ಸ್ಟ್’ ಎಂಬ ಹೆಸರಿನ ಈ ಆಂಡ್ರಾಯ್ಡ್ ಸ್ಮಾರ್ಟ್​ಫೋನ್ ಅನ್ನು ಜಿಯೋ ಹಾಗೂ ಗೂಗಲ್ ತಂಡಗಳು ಜಂಟಿಯಾಗಿ ಅಭಿವೃದ್ಧಿಪಡಿಸಿದ್ದು, ಸೆಪ್ಟೆಂಬರ್ 10ರ ಗಣೇಶ ಚತುರ್ಥಿಯ ದಿನದಿಂದ ಅದು ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಮುಖಸ್ಯಸ್ಥ ಮುಖೇಶ್ ಅಂಬಾನಿ ತಿಳಿಸಿದರು.

ಇಂದು ನಡೆದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್​ನ 44ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಜಿಯೋಫೋನ್ ನೆಕ್ಸ್ಟ್ ಆಂಡ್ರಾಯ್ಡ್ ಸ್ಮಾರ್ಟ್​ಫೋನ್, ವಾಯ್ಸ್ ಅಸಿಸ್ಟೆಂಟ್, ಪರದೆಯ ಮೇಲಿನ ಪಠ್ಯವನ್ನು ಓದಿ ಹೇಳುವ ಸೌಲಭ್ಯ, ಅನುವಾದ ಸೌಲಭ್ಯ, ಆಗ್ಮೆಂಟೆಡ್ ರಿಯಾಲಿಟಿ ಫಿಲ್ಟರ್​ಗಳಿರುವ ಸ್ಮಾರ್ಟ್ ಕ್ಯಾಮೆರಾ ಸೇರಿದಂತೆ ಅನೇಕ ವಿಶಿಷ್ಟ ಸೌಲಭ್ಯಗಳಿರಲಿದ್ದು, ಗೂಗಲ್ ಹಾಗೂ ಜಿಯೋ ಆಪ್​ಗಳಷ್ಟೇ ಅಲ್ಲದೆ ಆಂಡ್ರಾಯ್ಡ್ ಪ್ಲೇ ಸ್ಟೋರ್​ನಲ್ಲಿರುವ ಆಪ್​ಗಳನ್ನೂ ಬಳಸುವುದು ಸಾಧ್ಯವಾಗಲಿದೆ. ಇದು ಭಾರತದಲ್ಲಿ ಮಾತ್ರವೇ ಅಲ್ಲದೇ ಇಡೀ ವಿಶ್ವದಲ್ಲೇ ಅತ್ಯಂತ ಕಡಿಮೆ ಬೆಲೆಯ ಸ್ಮಾರ್ಟ್​ಫೋನ್ ಆಗಿರಲಿದೆ ಎಂದು ಮುಖೇಶ್ ಅಂಬಾನಿ ತಿಳಿಸಿದ್ದಾರೆ.

ದೇಶೀಯ ನಿರ್ಮಿತ 5G ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಜಿಯೋ ಗಮನಾರ್ಹ ಸಾಧನೆಗಳನ್ನು ಮಾಡಿದ್ದು, ಪರೀಕ್ಷಾರ್ಥ ಚಟುವಟಿಕೆಗಳು ಮುಂದುವರೆದಿವೆ ಎಂದು ಮುಖೇಶ್ ಅಂಬಾನಿ ಹೇಳಿದ್ದಾರೆ. ಶಿಕ್ಷಣ, ಆರೋಗ್ಯ ರಕ್ಷಣೆ ಸೇರಿದಂತೆ ವಿವಿಧ ಉದ್ದೇಶಗಳಿಗಾಗಿ 5G ತಂತ್ರಜ್ಞಾನದ ಬಳಕೆಯನ್ನು ಪರೀಕ್ಷಿಸಲಾಗುತ್ತಿದ್ದು, ಭಾರತ ಶೀಘ್ರವೇ ‘2G-ಮುಕ್ತ’ವಾಗುವುದರ ಜೊತೆಗೆ ‘5G-ಯುಕ್ತ’ವೂ ಆಗುತ್ತದೆಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ. ಭಾರತದಾದ್ಯಂತ 5G ಪರಿಚಯಿಸುವುದರ ಜೊತೆಗೆ ನಮ್ಮ ತಂತ್ರಜ್ಞಾನವನ್ನು ಇನ್ನಿತರ ದೇಶಗಳೂ ಬಳಸಲಿವೆ ಎಂದು ಅವರು ಹೇಳಿದ್ದಾರೆ.

ದೇಶದೆಲ್ಲೆಡೆ 5G ಅನುಷ್ಠಾನಕ್ಕಾಗಿ ಜಿಯೋ ಹಾಗೂ ಗೂಗಲ್ ನಡುವೆ ಒಪ್ಪಂದ ಮಾಡಿಕೊಳ್ಳಲಾಗಿದ್ದು, ಜಿಯೋದ 5G ಜಾಲ ಹಾಗೂ ಸೇವೆಗಳು ಗೂಗಲ್ ಕ್ಲೌಡ್ ವೇದಿಕೆಯನ್ನು ಬಳಸಿಕೊಳ್ಳಲಿವೆ. ಈ ಒಪ್ಪಂದದ ಅಂಗವಾಗಿ ರಿಲಯನ್ಸ್​ನ ರೀಟೇಲ್ ವಹಿವಾಟು ಗೂಗಲ್ ಕ್ಲೌಡ್ ಅನ್ನು ವ್ಯಾಪಕವಾಗಿ ಬಳಸಲಿದೆ. ಗೂಗಲ್ ಮಾತ್ರವೇ ಅಲ್ಲದೆ ಫೇಸ್ಬುಕ್ ಹಾಗೂ ಮೈಕ್ರೋಸಾಫ್ಟ್ ಸಂಸ್ಥೆಗಳ ಜೊತೆಗೂ ರಿಲಯನ್ಸ್ ಸಹಭಾಗಿತ್ವ ಮುಂದುವರೆದಿದೆ. ಜಿಯೋಮಾರ್ಟ್ ಸೇವೆಗಳನ್ನು ವಾಟ್ಸ್ಆಪ್ ಮೂಲಕ ಒದಗಿಸುವ ಪ್ರಯೋಗ ಮುಂದುವರೆದಿದ್ದು, ಇದಕ್ಕೆ ಜಿಯೋಮಾರ್ಟ್ ಹಾಗೂ ವಾಟ್ಸ್ಆಪ್ ಎರಡೂ ಸೌಲಭ್ಯಗಳ ಗ್ರಾಹಕರಿಂದ ದೊರೆತಿರುವ ಆರಂಭಿಕ ಪ್ರತಿಕ್ರಿಯೆ ಉತ್ತಮವಾಗಿದೆಯೆಂದು ಮುಖೇಶ್ ಅಂಬಾನಿ ತಿಳಿಸಿದ್ದಾರೆ. ಜಾಮನಗರ ಹಾಗೂ ನಾಗಪುರಗಳಲ್ಲಿ ಮೈಕ್ರೋಸಾಫ್ಟ್ ಸಹಯೋಗದೊಂದಿಗೆ ಎರಡು ಜಿಯೋ-ಅಜ಼್ಯೂರ್ ಕ್ಲೌಡ್ ಡೇಟಾ ಸೆಂಟರುಗಳನ್ನು ಕಾರ್ಯರಂಭಗೊಳಿಸಿರುವುದಾಗಿಯೂ ಅವರು ಹೇಳಿದ್ದಾರೆ.

ಇದೇ ಸಂದರ್ಭದಲ್ಲಿ ಜಿಯೋಫೈಬರ್ ಕುರಿತು ಮಾತನಾಡಿದ ಮುಖೇಶ್ ಅಂಬಾನಿ, ಕಳೆದ ಒಂದು ವರ್ಷದಲ್ಲಿ ಅದು ಇಪ್ಪತ್ತು ಲಕ್ಷಕ್ಕೂ ಹೆಚ್ಚಿನ ಹೊಸ ತಾಣಗಳಲ್ಲಿ ಲಭ್ಯವಾಗಿದೆ ಎಂದು ತಿಳಿಸಿದ್ದಾರೆ. ಒಟ್ಟಾರೆ ಮೂವತ್ತು ಲಕ್ಷಕ್ಕೂ ಹೆಚ್ಚಿನ ಬಳಕೆದಾರರೊಂದಿಗೆ, ಜಿಯೋಫೈಬರ್ ಭಾರತದ ಅತಿದೊಡ್ಡ ಹಾಗೂ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಫಿಕ್ಸೆಡ್ ಬ್ರಾಡ್​ಬ್ಯಾಂಡ್ ಸೇವಾದಾರ ಸಂಸ್ಥೆಯಾಗಿ ರೂಪುಗೊಂಡಿದೆ ಎಂದು ಅವರು ಹೇಳಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಗೂಗಲ್ ಸಿಇಒ ಸುಂದರ್ ಪಿಚೈ, “ಈ ಸ್ಮಾರ್ಟ್​ಫೋನ್ ಅನ್ನು ಭಾರತಕ್ಕೆಂದೇ ನಿರ್ಮಿಸಲಾಗಿದ್ದು, ಮೊಟ್ಟಮೊದಲ ಬಾರಿಗೆ ಅಂತರ್ಜಾಲ ಬಳಸುವ ಲಕ್ಷಾಂತರ ಹೊಸ ಬಳಕೆದಾರರಿಗೆ ಅದು ಹೊಸ ಸಾಧ್ಯತೆಗಳನ್ನು ತೆರೆದಿಡಲಿದೆ” ಎಂದು ಹೇಳಿದ್ದಾರೆ.

Comments are closed.