ರಾಷ್ಟ್ರೀಯ

ಬಂಗಾಳಕೊಲ್ಲಿಯಲ್ಲಿ ಮತ್ತೊಂದು ಚಂಡಮಾರುತ ‘ಯಾಸ್’ ಭೀತಿ; ಎಚ್ಚರಿಕೆ ನೀಡಿದ ಹವಮಾನ ಇಲಾಖೆ

Pinterest LinkedIn Tumblr

ಪೋರ್ಟ್‍ ಬ್ಲೇರ್: ದೇಶದ ವಿವಿಧ ರಾಜ್ಯಗಳಲ್ಲಿ ಭಾರಿ ಅವಾಂತರ ಸಷ್ಟಿ ಮಾಡಿದ್ದ ಟೌಕ್ಟೇ ಚಂಡಮಾರುತದ ಈಗಷ್ಟೇ ತಣ್ಣಗಾಗಿದ್ದು, ಇದರ ಬೆನ್ನಲ್ಲೇ ಬಂಗಾಳಕೊಲ್ಲಿಯಲ್ಲಿ ಮತ್ತೊಂದು ಚಂಡಮಾರುತದ ಭೀತಿ ಎದುರಾಗಿದೆ.

ಬಂಗಾಳ ಕೊಲ್ಲಿಯ ಪೂರ್ವ ಕೇಂದ್ರ ಹಾಗೂ ನೆರೆಯ ಉತ್ತರ ಅಂಡಮಾನ್‍ ಸಮುದ್ರದಲ್ಲಿ ಚಂಡಮಾರುತ ಸೃಷ್ಟಿಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಕರಾವಳಿ ರಕ್ಷಣಾ ಪಡೆ ಅಧಿಕೃತ ಎಚ್ಚರಿಕೆ ಹೊರಡಿಸಿದೆ.

ಈ ತಿಂಗಳ 21ರಿಂದ 23ರವರೆಗೆ ಬಂಗಾಳ ಕೊಲ್ಲಿಯ ಪೂರ್ವ ಕೇಂದ್ರ ಹಾಗೂ ನೆರೆಯ ಉತ್ತರ ಅಂಡಮಾನ್‍ ಸಮುದ್ರದಲ್ಲಿ ವಾಯಭಾರ ಕುಸಿತವಾಗಲಿದ್ದು, ಇದು ಚಂಡಮಾರುತವಾಗಿ ತೀವ್ರಗೊಳ್ಳುವ ಸಾಧ್ಯತೆ ಇರುವುದಾಗಿ ಹವಾಮಾನ ಮುನ್ಸೂಚನೆ ತಿಳಿಸಿದೆ ಎಂದು ಪ್ರಕಟಣೆ ತಿಳಿಸಿದೆ.

ಇದರ ಪ್ರಭಾವದಿಂದ ಗಾಳಿಯ ವೇಗ ಹೆಚ್ಚಾಗಿ ಈ ತಿಂಗಳ 21ರಿಂದ 26ರವರೆಗೆ ಅಂಡಮಾನ್‍ ಸಮುದ್ರದಲ್ಲಿ ಪ್ರತಿಕೂಲ ಹವಾಮಾನ ಉಂಟಾಗಲಿದೆ. ಮೀನುಗಾರಿಕೆ ಇಲಾಖೆಗಳು ಮತ್ತು ನಾಗರಿಕ ಆಡಳಿತಗಳೊಂದಿಗೆ ಭಾರತೀಯ ಕರಾವಳಿ ಪಡೆ ಹವಾಮಾನ ಮಾಹಿತಿಯನ್ನು ಹಂಚಿಕೊಂಡಿದೆ ಎಂದು ಪ್ರಕಟಣೆ ತಿಳಿಸಿದೆ.

ಮೇ 23 ರ ಆಸುಪಾಸಿನಲ್ಲಿ ಚಂಡಮಾರುತ ಸೃಷ್ಟಿಯಾಗುವ ಸಾಧ್ಯತೆ ಇದ್ದು, ಈ ಚಂಡಮಾರುತವು ಬಂಗಾಳಕೊಲ್ಲಿ ಸಮುದ್ರ ಭಾಗದಿಂದ ಬರಲಿದೆ. ಅರಬ್ಬೀ ಸಮುದ್ರ ಹಾಗೂ ಬಂಗಾಳ ಕೊಲ್ಲಿ ಎರಡರಲ್ಲೂ ಸಮುದ್ರದ ಮೇಲ್ಮೈ ಉಷ್ಣಾಂಶ ಸುಮಾರು ಒಂದರಿಂದ ಎರಡು ಡಿಗ್ರಿ ಸೆಲ್ಸಿಯಸ್ ಹೆಚ್ಚಿದೆ. ಇದು ಚಂಡಮಾರುತ ರಚನೆಗೆ ಪೂರಕ ವಾತಾವರಣವಾಗಿದ್ದು, ಮೇ 23ರ ಹೊತ್ತಿಗೆ ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತ ಉದ್ಭವಿಸುವ ಸಾಧ್ಯತೆ ಇದೆ ಎಂದು ತಜ್ಞರು ಹೇಳಿದ್ದಾರೆ.

ಅಂತೆಯೇ ಹವಾಮಾನ ಇಲಾಖೆಯ ಸದ್ಯದ ಅಂದಾಜಿನ ಪ್ರಕಾರ ಈ ಚಂಡಮಾರುತವು ಮಯನ್ಮಾರ್​ ಕಡೆಗೆ ಚಲಿಸುವ ಸಾಧ್ಯತೆ ಇದ್ದು, ಭಾರತಕ್ಕೆ ಅಪ್ಪಳಿಸುವ ಸಂಭವ ಕಡಿಮೆ ಇದೆ ಎನ್ನಲಾಗುತ್ತಿದೆ.

Comments are closed.