ರಾಷ್ಟ್ರೀಯ

ತೌಕ್ತೆ ಚಂಡಮಾರುತದ ಅಬ್ಬರ; ಗುಜರಾತ್​ನಲ್ಲಿ 13 ಜನರು ಸಾವು: ಮಹಾರಾಷ್ಟ್ರದಲ್ಲಿ 81 ಜನರು ಇನ್ನೂ ನಾಪತ್ತೆ

Pinterest LinkedIn Tumblr

ಅಹಮದಾಬಾದ್: ತೌಕ್ತೆ ಚಂಡಮಾರುತದ ಅಬ್ಬರದಿಂದ ಗುಜರಾತ್​ನಲ್ಲಿ 13 ಜನರು ಸಾವನ್ನಪ್ಪಿದ್ದು, 16 ಸಾವಿರಕ್ಕೂ ಹೆಚ್ಚು ಮನೆಗಳು ಧ್ವಂಸವಾಗಿವೆ. ಮಹಾರಾಷ್ಟ್ರದಲ್ಲೂ ತೌಕ್ತೆ ಚಂಡಮಾರುತದ ಆರ್ಭಟ ಜೋರಾಗಿದ್ದು, ಬಾಂಬೆ ಹೈಟ್ ಬಳಿ ಸಮುದ್ರದಲ್ಲಿ ಬಾರ್ಜ್ ಮುಳುಗಿತ್ತು. ಬಾರ್ಜ್​ನಲ್ಲಿದ್ದ 261 ಜನರ ಪೈಕಿ 183 ಜನರನ್ನು ರಕ್ಷಿಸಲಾಗಿದ್ದು, ಇನ್ನೂ 81 ಜನರು ಇನ್ನೂ ನಾಪತ್ತೆಯಾಗಿದ್ದಾರೆ. ಅವರಿಗಾಗಿ ರಕ್ಷಣಾ ತಂಡಗಳು ಕಾರ್ಯಾಚರಣೆ ನಡೆಸುತ್ತಿವೆ.

ಗುಜರಾತ್​ನಲ್ಲಿ ಇದುವರೆಗೂ 2 ಲಕ್ಷ ಜನರನ್ನು ಸುರಕ್ಷಿತ ಸ್ಥಳಗಳಿಗೆ ಶಿಫ್ಟ್​ ಮಾಡಲಾಗಿದೆ. ಈಗಾಗಲೇ 13 ಜನರು ಚಂಡಮಾರುತದ ಹೊಡೆತಕ್ಕೆ ಪ್ರಾಣ ಕಳೆದುಕೊಂಡಿದ್ದಾರೆ. ಅಹಮದಾಬಾದ್ ಏರ್​ಪೋರ್ಟ್​ ಸುತ್ತಲೂ ನೀರು ಆವರಿಸಿಕೊಂಡು, ವಿಮಾನ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಗುಜರಾತ್​ನ ಬಹುತೇಕ ಎಲ್ಲ ಪ್ರಮುಖ ವಿಮಾನ ನಿಲ್ದಾಣಗಳೂ ಬಂದ್ ಆಗಿದೆ. ಗುಜರಾತ್​ನಲ್ಲಿ 1998ರ ನಂತರ ಕಳೆದ 23 ವರ್ಷಗಳಲ್ಲಿ ಉಂಟಾಗಿರುವ ಅತ್ಯಂತ ಭೀಕರ ಚಂಡಮಾರುತ ಇದು ಎನ್ನಲಾಗಿದೆ.

ಗುಜರಾತ್​ನ 46 ತಾಲೂಕುಗಳಲ್ಲಿ ಭಾರೀ ಮಳೆಯಿಂದ ಹೈ ಅಲರ್ಟ್​ ಘೋಷಿಸಲಾಗಿದೆ. 16 ಸಾವಿರಕ್ಕೂ ಹೆಚ್ಚು ಮನೆಗಳು ನೆಲಸಮವಾಗಿದ್ದು, 40 ಸಾವಿರಕ್ಕೂ ಹೆಚ್ಚು ಮರಗಳು ನೆಲಕ್ಕುರುಳಿವೆ. 5,951 ಗ್ರಾಮಗಳಲ್ಲಿ ನೀರು ನುಗ್ಗಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ತೌಕ್ತೆ ಚಂಡಮಾರುತದ ಹೊಡೆತಕ್ಕೆ ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳಲ್ಲಿ ಒಟ್ಟು 33 ಮಂದಿ ಸಾವನ್ನಪ್ಪಿದ್ದಾರೆ.‌ 90ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಗುಜರಾತ್​ನ ಮಳೆಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ.

ಮಹಾರಾಷ್ಟ್ರದಲ್ಲಿ ತೌಕ್ತೆ ಚಂಡಮಾರುತದ ಅಬ್ಬರದಿಂದ 6ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಮುಂಬೈನ ಬಾಂಬೆ ಹೈ ಬಳಿ 2 ದಿನಗಳ ಹಿಂದೆ ಬಾರ್ಜ್​ ಸಮುದ್ರದಲ್ಲಿ ಮುಳುಗಿದ್ದು, ಈಗಾಗಲೇ 183 ಜನರನ್ನು ರಕ್ಷಿಸಲಾಗಿದೆ. ಇನ್ನೂ 81 ಜನರಿಗಾಗಿ ನೌಕಾಪಡೆ ಶೋಧ ಕಾರ್ಯಾಚರಣೆ ನಡೆಸುತ್ತಿದೆ. ಹವಾಮಾನ ವೈಪರೀತ್ಯದಿಂದ ರಕ್ಷಣಾ ಕಾರ್ಯಾಚರಣೆಗೂ ಸಮಸ್ಯೆಯಾಗಿದೆ.

ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ ಈಗಾಗಲೇ ತುರ್ತು ಕೆಲಸಗಳಿಗೆ 100 ತಂಡಗಳನ್ನು ಕೇರಳ, ಕರ್ನಾಟಕ, ತಮಿಳು ನಾಡು, ಗುಜರಾತ್, ಗೋವಾ ಮತ್ತು ಮಹಾರಾಷ್ಟ್ರ ಭಾಗಗಳಲ್ಲಿ ನಿಯೋಜಿಸಿದೆ. ಉತ್ತರ ವಾಯವ್ಯ ಭಾಗದತ್ತ ಗಂಟೆಗೆ 18 ಕಿಲೋ ಮೀಟರ್ ವೇಗದಲ್ಲಿ ಚಂಡಮಾರುತ ಬೀಸುತ್ತಿದ್ದು ಗಾಳಿಯ ವೇಗ 155ರಿಂದ 165 ಕಿಲೋ ಮೀಟರ್ ನಷ್ಟು ಇರಲಿದೆ. ಚಂಡಮಾರುತದ ಪ್ರಭಾವದಿಂದ ಮಹಾರಾಷ್ಟ್ರ, ಗುಜರಾತ್​ನಲ್ಲಿ ಇಂದು ಮಳೆಯಾಗುತ್ತಿದೆ. ಭಾರತದ ಪಶ್ಚಿಮ ಕರಾವಳಿಯಲ್ಲಿ ಹಗುರ ಗಾಳಿಯಿಂದ ಕೂಡಿದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಸೌರಾಷ್ಟ್ರ ಮತ್ತು ಕಚ್ ಒಳನಾಡು ಪ್ರದೇಶದ ಹಲವೆಡೆ ಅಧಿಕದಿಂದ ಕೂಡಿದ ಭಾರೀ ಮಳೆಯಾಗಲಿದೆ.

ಚಂಡಮಾರುತದ ಪ್ರಭಾವದಿಂದ ಮಹಾರಾಷ್ಟ್ರ, ಗುಜರಾತ್​ನಲ್ಲಿ ಇಂದು ಕೂಡ ಮಳೆಯಾಗುತ್ತಿದೆ. ಭಾರತದ ಪಶ್ಚಿಮ ಕರಾವಳಿಯಲ್ಲಿ ಹಗುರ ಗಾಳಿಯಿಂದ ಕೂಡಿದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಸೌರಾಷ್ಟ್ರ ಮತ್ತು ಕಚ್ ಒಳನಾಡು ಪ್ರದೇಶದ ಹಲವೆಡೆ ಅಧಿಕದಿಂದ ಕೂಡಿದ ಭಾರೀ ಮಳೆಯಾಗಲಿದೆ.

ತೌಕ್ತೆ ಚಂಡಮಾರುತದ ಅಬ್ಬರದಿಂದ ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಇದೇ 20ರವರೆಗೆ ಗುಡುಗು, ಸಿಡಿಲು ಸಹಿತ ಧಾರಾಕಾರ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿಯಲ್ಲಿ ಮೇ 20ರವರೆಗೆ ಯೆಲ್ಲೊ ಅಲರ್ಟ್ ಘೋಷಿಸಲಾಗಿದೆ. ಕರಾವಳಿಯಲ್ಲಿ ಗಾಳಿಯ ವೇಗ ಹೆಚ್ಚಿರುವ ಕಾರಣ ಮೀನುಗಾರರು ಕಡಲಿಗೆ ಇಳಿಯದಂತೆ ಇಲಾಖೆ ಎಚ್ಚರಿಕೆ ನೀಡಿದೆ.

Comments are closed.