ರಾಷ್ಟ್ರೀಯ

ಯೆಚೂರಿ ಪುತ್ರ ಆಶಿಶ್ ಯೆಚೂರಿ-ಮಾಜಿ ಸಚಿವ ಡಾ. ಎ.ಕೆ. ವಾಲಿಯಾ ಕೋವಿಡ್ ಸೋಂಕಿಗೆ ಬಲಿ

Pinterest LinkedIn Tumblr

ನವದೆಹಲಿ: ದೇಶದಲ್ಲಿ ಕೊರೋನಾ ವೈರಸ್ ಸೋಂಕು ತಾಂಡವವಾಡುತ್ತಿದೆ, ಅದರಲ್ಲೂ ದೆಹಲಿ, ಮುಂಬೈ, ಬೆಂಗಳೂರಿನಂತಹ ಮಹಾನಗರಗಳಲ್ಲಿ ಸೋಂಕಿನ ತೀವ್ರತೆ ದಟ್ಟವಾಗಿದೆ. ಕೊರೋನಾ ಎರಡನೇ ಅಲೆ ದೇಶದಲ್ಲಿ ಎದ್ದ ಮೇಲೆ ಹಲವರು ಸೋಂಕಿಗೆ ತುತ್ತಾಗಿ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಅವರಲ್ಲಿ ಗಣ್ಯರು ಕೂಡ ಸೇರಿದ್ದಾರೆ.

ಸಿಪಿಎಂ ನಾಯಕ ಸೀತಾರಾಮ್ ಯೆಚೂರಿಯವರ ಪುತ್ರ ಆಶಿಶ್ ಯೆಚೂರಿ ಕೋವಿಡ್-19 ಸೋಂಕಿಗೆ ನಿಧನರಾಗಿದ್ದಾರೆ. ಇಂದು ಬೆಳಗ್ಗೆ ನನ್ನ ಹಿರಿಯ ಪುತ್ರ ಆಶಿಶ್ ಯೆಚೂರಿ ಕೋವಿಡ್ ಗೆ ನಿಧನರಾಗಿದ್ದಾರೆ ಎಂದು ತಿಳಿಸಲು ದುಃಖವಾಗುತ್ತಿದೆ. ಈ ಕಷ್ಟದ ಸಂದರ್ಭದಲ್ಲಿ ನನ್ನ ಮಗನಿಗೆ ಚಿಕಿತ್ಸೆ ನೀಡಿದ ವೈದ್ಯರು, ದಾದಿಯರು, ಕೊರೋನಾ ಮುಂಚೂಣಿ ಸೇವಕರು, ಶುಚಿತ್ವ ಕೆಲಸಗಾರರು ಮತ್ತು ನಮಗೆ ಧೈರ್ಯ, ಸಾಂತ್ವನ ಹೇಳಿದ ಎಲ್ಲರಿಗೂ ಧನ್ಯವಾದ ಹೇಳುತ್ತೇನೆ ಎಂದು ಸೀತಾರಾಮ್ ಯೆಚೂರಿ ತಿಳಿಸಿದ್ದಾರೆ.

ಕಾಂಗ್ರೆಸ್ ನ ಹಿರಿಯ ನಾಯಕ, ದೆಹಲಿ ಸರ್ಕಾರದ ಮಾಜಿ ಸಚಿವ ಡಾ. ಎ.ಕೆ. ವಾಲಿಯಾ ಕೋವಿಡ್ ಸೋಂಕಿಗೆ ನಿಧನರಾಗಿದ್ದಾರೆ.

ಕೋವಿಡ್ ಸೋಂಕಿಗೆ ಒಳಗಾಗಿ ಡಾ. ವಾಲಿಯಾ ದೆಹಲಿಯ ಅಪೊಲೊ ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ 72 ವರ್ಷ ವಯಸ್ಸಾಗಿತ್ತು.

ಡಾ ಅಶೋಕ್ ಕುಮಾರ್ ವಾಲಿಯಾ ದೆಹಲಿಯ ಲಕ್ಷ್ಮಿ ನಗರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ. ಅದಕ್ಕೂ ಮುನ್ನ ಮೊದಲ ಮೂರು ಬಾರಿ ಗೀತಾ ಕಾಲೊನಿ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕರಾಗಿದ್ದರು. ದೆಹಲಿ ಮೂಲದವರಾದ ಡಾ ವಾಲಿಯಾ ಇಂದೋರ್ ನ ಎಂಜಿಎಂ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಪದವಿಯನ್ನು ಪಡೆದಿದ್ದರು. ವೃತ್ತಿಯಲ್ಲಿ ಮೂಲತಃ ಅವರು ವೈದ್ಯ. ಹಿಂದಿನ ಶೀಲಾ ದೀಕ್ಷಿತ್ ಸರ್ಕಾರದಲ್ಲಿ ಆರೋಗ್ಯ, ನಗರಾಭಿವೃದ್ಧಿ ಇತ್ಯಾದಿ ಖಾತೆಗಳನ್ನು ವಹಿಸಿದ್ದರು.

Comments are closed.