ರಾಷ್ಟ್ರೀಯ

ಭಾರತದಲ್ಲಿ 24 ಗಂಟೆಗಳ ಅವಧಿಯಲ್ಲಿ ಬರೋಬ್ಬರಿ ದಾಖಲೆಯ 2,00,739 ಜನರಲ್ಲಿ ಕೊರೋನಾ ಸೋಂಕು ಪತ್ತೆ; 1,038 ಮಂದಿ ಸಾವು

Pinterest LinkedIn Tumblr

ನವದೆಹಲಿ: ಸತತ 10 ದಿನಗಳಿಂದ 1 ಲಕ್ಷಕ್ಕಿಂತ ಹೆಚ್ಚು ಪ್ರಕರಣಗಳು ದಾಖಲಾಗುತ್ತಿರುವ ಭಾರತದಲ್ಲಿ ಇದೀಗ ನಿತ್ಯ ಹೊಸ ಸೋಂಕಿತರ ಪ್ರಮಾಣ 2 ಲಕ್ಷ ಗಡಿ ದಾಟಿದೆ. ಇದೇ ವೇಳೆ ಸಾವಿನ ಪ್ರಮಾಣದಲ್ಲಿಯೂ ಭಾರೀ ಏರಿಕೆಯಾಗಿದೆ.

ಗುರುವಾರ ಬೆಳಿಗ್ಗೆ 8 ಗಂಟೆಗೆ ಮುಕ್ತಾಯವಾದ 24 ಗಂಟೆಗಳ ಅವಧಿಯಲ್ಲಿ ದೇಶದಲ್ಲಿ ಬರೋಬ್ಬರಿ ದಾಖಲೆಯ 2,00,739 ಜನರಲ್ಲಿ ಸೋಂಕು ದೃಢಪಟ್ಟಿದ್ದು, 1,038 ಮಂದಿ ಸಾವನ್ನಪ್ಪಿದ್ದಾರೆ.

ಕೊರೋನಾ 2ನೇ ಅಲೆ ತೀವ್ರಗೊಳ್ಳುವ ಆರಂಭವಾದ ಮಾರ್ಚ್ ತಿಂಗಳ ಮೊದಲ ವಾರದಲ್ಲಿ ಸಾವಿನ ಸಂಖ್ಯೆ ಸರಾಸರಿ 700ರ ಆಸುಪಾಸಿನಲ್ಲಿತ್ತು. ನಂತರ ವಾರಗಳಲ್ಲಿ ಅದು ಕ್ರಮವಾಗಿ 845, 1241, 1882, 3251ಕ್ಕೆ ಮುಟ್ಟಿ, ಏಪ್ರಿಲ್ 2ನೇ ವಾರದ ಹೊತ್ತಿಗೆ 5007 ತಲುಪುವ ಮೂಲಕ ತಲ್ಲಣ ಮೂಡಿಸಿದೆ. ಇದು ಸಹಜವಾಗಿಯೇ ಸೋಂಕಿತರು ಆಸ್ಪತ್ರೆ ಸೇರಿ ಚಿಕಿತ್ಸೆ ಫಲಕಾರಿಯಾಗದೇ ಸಾವಿನ ಪ್ರಮಾಣ ಏರಿಕೆಯಾಗುತ್ತಿರುವುದನ್ನು ತೋರಿಸುತ್ತಿದೆ. ಜೊತೆಗೆ ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಅಗತ್ಯವನ್ನು ಕೂಡ ಸಾರಿ ಹೇಳುತ್ತಿದೆ.

ಈ ಹಿಂದೆ 2020ರ ಸೆಪ್ಟೆಂಬರ್ 18 ರಂದು ಕೊರೋನಾಕ್ಕೆ 1247 ಮಂದಿ ಬಲಿಯಾಗಿದ್ದು, ಭಾರತದಲ್ಲಿನ ಈ ವರೆಗಿನ ದೈನಂದಿನ ಗರಿಷ್ಠ ಸಂಖ್ಯೆಯಾಗಿತ್ತು. ಪ್ರಸ್ತುತದ ಅಂಕಿ ಸಂಖ್ಯೆಯನ್ನು ನೋಡಿದರೆ, ಈ ಸಂಖ್ಯೆ ಇನ್ನೆರಡು ದಿನಗಳಲ್ಲಿ ಮೀರುವ ಎಲ್ಲಾ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

ಕಳೆದ 24 ಗಂಟೆಗಳಲ್ಲಿ 2,00,739 ಮಂದಿಯಲ್ಲಿ ಸೋಂಕು ದೃಢಪಡುವುದರೊಂದಿಗೆ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1,40,74,564ಕ್ಕೆ ಏಕಿರೆಯಾಗಿದೆ. ಈ ನಡುವೆ ಸಕ್ರಿಯ ಪ್ರಕರಣಗಳ ಸಂಖ್ಯೆ ದಾಖಲೆಯ 14,71,877ಕ್ಕೆ ತಲುಪಿದೆ.

ಅಮೆರಿಕಾದಲ್ಲಿ 3.09 ಲಕ್ಷ ಜನರದಲ್ಲಿ ಸೋಂಕು ಕಾಣಿಸಿಕೊಂಡಿದ್ದು. ಅದನ್ನು ಹೊರತುಪಡಿಸಿದರೆ, 2 ಲಕ್ಷ ಜನರಿಗೆ ಒಂದೇ ದಿನದಲ್ಲಿ ಸೋಂಕು ಕಾಣಿಸಿಕೊಂಡಿರುವುದು 2ನೇ ಗರಿಷ್ಠ ಪ್ರಮಾಣವಾಗಿದೆ.

ಇನ್ನು ಒಂದೇ ದಿನ ದೇಶದಲ್ಲಿ 1,038 ಮಂದಗಿ ಬಲಿಯಾಗಿದ್ದು, 2020ರ ಅ.18ರ ನಂತರದ ಗರಿಷ್ಠ ಪ್ರಮಾಣ ಇದಾಗಿದೆ. ಇದರೊಂದಿಗೆ ಈ ವರೆಗೆ ದೇಶದಲ್ಲಿ ವೈರಸ್’ಗೆ ಬಲಿಯಾದವರ ಸಂಖ್ಯೆ 1,73,123ಕ್ಕೆ ಏರಿಕೆಯಾಗಿದೆ.

ಈ ನಡುವೆ ಕಳೆದ 24 ಗಂಟೆಗಳಲ್ಲಿ 93,528 ಮಂದಿ ಗುಣಮುಖರಾಗುವುದರೊಂದಿಗೆ ಈವರೆಗೂ ಚೇತರಿಸಿಕೊಂಡವರ 1,24,29,564ಕ್ಕೆ ತಲುಪಿದೆ.

ಇನ್ನು ಭಾರತದಲ್ಲಿ ಒಂದೇ ದಿನ 13,84,549 ಮಂದಿಯನ್ನು ಕೊರೋನಾ ಪರೀಕ್ಷೆಗೊಳಪಡಿಸಲಾಗಿದ್ದು, ಈವರೆಗೂ ದೇಶದಲ್ಲಿ 26,20,03,415 ಮಂದಿಯನ್ನು ಪರೀಕ್ಷೆಗೊಳಪಡಿಸಲಾಗಿದೆ ಎಂದು ಐಸಿಎಂಆರ್ ಮಾಹಿತಿ ನೀಡಿದೆ.

ಭಾರತದಲ್ಲಿ ಜನವರಿ 16 ರಂದು ಸ್ವದೇಶಿ ನಿರ್ಮಿತ ಕೋವಿಶೀಲ್ಟ್ ಮತ್ತು ಕೋವ್ಯಾಕ್ಸಿನ್ ಕೊರೋನಾ ಲಸಿಕೆಗೆ ಪ್ರಧಾನಿ ಮೋದಿಯವರು ಚಾಲನೆ ನೀಡಿದ್ದು, ತಮ್ಮ ಜೀವವನ್ನೇ ಪಣಕ್ಕಿಟ್ಟು ಕೊರೋನಾ ವಿರುದ್ಧ ಹೋರಾಟ ಮಾಡುತ್ತಿರುವ ಕೊರೋನಾ ವಾರಿಯರ್ಸ್’ಗೆ ಲಸಿಕೆಯ ಮೊದಲ ಆದ್ಯತೆಯನ್ನು ನೀಡಲಾಗಿತ್ತು. ಇದೀಗ 45 ವರ್ಷ ಮೇಲ್ಪಟ್ಟ ಎಲ್ಲಾ ನಾಗರೀಕರಿಗೆ ಲಸಿಕೆ ನೀಡಲಾಗುತ್ತಿದೆ.

ಇದರಂತೆ ಲಸಿಕೆ ಅಭಿಯಾನ ಆರಂಭವಾಗಿ ಇಲ್ಲಿಯವರೆಗೂ ಒಟ್ಟಾರೆ 11,44,93,238 ಮಂದಿಗೆ ಲಸಿಕೆಯನ್ನು ನೀಡಲಾಗಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.

Comments are closed.